ರಾಷ್ಟ್ರೀಯ

ವೃದ್ಧಾಶ್ರಮದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ 65-67ರ ಜೋಡಿ

Pinterest LinkedIn Tumblr


ತಿರುವನಂತಪುರಂ: ಪ್ರೀತಿಗೆ ಹಾಗೂ ಪ್ರೀತಿಸಲು ವಯಸ್ಸಿನ ಹಂಗಿಲ್ಲ ಎಂಬುದಕ್ಕೆ ಕೇರಳದ ತ್ರಿಶ್ಶೂರಿನಲ್ಲಿನ ವೃದ್ಧಾಶ್ರಮ ಸಾಕ್ಷಿಯಾಗಿದೆ. ಮನೆಯಿಂದ ಹೊರದಬ್ಬಲ್ಪಟ್ಟ ಇಬ್ಬರು ತಮ್ಮ 60ನೇ ವಯಸ್ಸಿನಲ್ಲಿ ಒಬ್ಬರನ್ನೊಬ್ಬರು ಪ್ರೀತಿಸುವ ಮೂಲಕ ಶನಿವಾರ ವೃದ್ಧಾಶ್ರಮದಲ್ಲಿಯೇ ಸಚಿವ ವಿಎಸ್ ಶಿವ ಕುಮಾರ್ ಸಮ್ಮುಖದಲ್ಲಿ ಹಾರ ಬದಲಾಯಿಸಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಥಾಯ್ಕಟ್ಟುಶ್ಶೇರಿಯ ಲಕ್ಷ್ಮೀ ಅಮ್ಮಾಳ್ (65ವರ್ಷ) ಹಾಗೂ ಕೋಚಾನಿಯಾನ್ ಮೆನನ್ (67) ಇಬ್ಬರು ಸುಮಾರು ಇಪ್ಪತ್ತು ವರ್ಷಗಳ ನಂತರ ಭೇಟಿಯಾಗಿದ್ದು, ಇದೀಗ ವೃದ್ಧಾಶ್ರಮದಲ್ಲಿ ಪರಿಚಯ ಪ್ರೀತಿಗೆ ತಿರುಗಿ ದಾಂಪತ್ಯ ಜೀವನಕ್ಕೆ ತಂದು ನಿಲ್ಲಿಸಿದೆ.

ಅಂದು ಗಂಡನ ಸಹಾಯಕನಾಗಿದ್ದ ವ್ಯಕ್ತಿ ಇಂದು ಪತಿ!

ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಲಕ್ಷ್ಮೀ ಅಮ್ಮಾಳ್ ಪತಿಯ ಕೆಟರಿಂಗ್ ಕೆಲಸದಲ್ಲಿ ಮೆನನ್ ಸಹಾಯಕನಾಗಿ ದುಡಿಯುತ್ತಿದ್ದರು. ಅಂದು ತನ್ನ ಪತ್ನಿ ಲಕ್ಷ್ಮಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ಮೆನನ್ ಗೆ ಯಜಮಾನ (ಲಕ್ಷ್ಮಿ ಪತಿ) ಮಾತು ಕೊಟ್ಟಿದ್ದರು ಎಂದು ವರದಿ ತಿಳಿಸಿದೆ.

ಹೀಗೆ ಕಾಲಚಕ್ರ ಉರುಳಿತ್ತಿತ್ತು…ಮೆನನ್ ಆ ಕೆಲಸ ಬಿಟ್ಟು ಬೇರೆಡೆ ಹೋಗಿದ್ದರು. ಲಕ್ಷ್ಮೀಯ ಪತಿ ಕೂಡಾ ತೀರಿ ಹೋಗಿದ್ದರು. ನಂತರ ಮನೆಯವರು ಲಕ್ಷ್ಮಿಯನ್ನು ತ್ರಿಶ್ಶೂರ್ ನ ರಾಮಾವರಾಂಪುರಂನಲ್ಲಿರುವ ಸರ್ಕಾರಿ ವೃದ್ಧಾಶ್ರಮಕ್ಕೆ ಸೇರಿಸಿದ್ದರು. ಮತ್ತೊಂದೆಡೆ ವಯಸ್ಸಾಗಿದ್ದ ಮೆನನ್ ಅವರನ್ನು ಕೂಡಾ ಬಲವಂತವಾಗಿ ಮನೆಯಿಂದ ಹೊರದಬ್ಬಲ್ಪಟ್ಟಿದ್ದರು.

ಮನೆಯಿಂದ ಹೊರಬಿದ್ದ ಮೆನನ್ ಕೆಲಸಕ್ಕಾಗಿ ಬೀದಿ, ಬೀದಿ ಅಲೆದು ಸುಸ್ತಾಗಿದ್ದರು. ಒಂದು ದಿನ ಮೂರ್ಛೆರೋಗದಿಂದ ರಸ್ತೆ ಮೇಲೆ ಬಿದ್ದುಬಿಟ್ಟಿದ್ದರು. ಕೊನೆಗೆ ಎನ್ ಜಿಒ ಸಂಸ್ಥೆಯೊಂದು ತ್ರಿಶ್ಶೂರಿನ ವೃದ್ಧಾಶ್ರಮಕ್ಕೆ ತಂದು ಸೇರಿಸಿತ್ತು. ಹೀಗೆ ಹಲವು ವರ್ಷಗಳ ಬಳಿಕ ಇಬ್ಬರೂ ವೃದ್ಧಾಶ್ರಮದಲ್ಲಿ ಭೇಟಿಯಾಗಿದ್ದರು.

ಹೀಗೆ ದಿನಂಪ್ರತಿ ಮಾತುಕತೆ ಮೂಲಕ ಗೆಳೆತನ ಬೆಳೆದಿತ್ತು. ಇಬ್ಬರು ತಮ್ಮ ಜೀವನದ ಕುರಿತು ಸುಖಃ, ದುಃಖ ಹಂಚಿಕೊಳ್ಳುತ್ತ ಇಬ್ಬರು ಒಬ್ಬರನ್ನೊಬ್ಬರು ಪ್ರೀತಿಸತೊಡಗಿದ್ದರು ಎಂದು ವರದಿ ವಿವರಿಸಿದೆ. ಕೊನೆಗೆ ಈ ಜೋಡಿ ತಮ್ಮ ಗೆಳೆತನ ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ನಿರ್ಧಾರಕ್ಕೆ ಬಂದು ವಿವಾಹವಾಗುವುದಾಗಿ ವೃದ್ಧಾಶ್ರಮದಲ್ಲಿ ಇದ್ದವರಿಗೆ ತಿಳಿಸಿದ್ದರು.

ವೃದ್ಧಾಶ್ರಮದಲ್ಲಿದ್ದವರು ಖುಷಿಯಿಂದ ಸಾಂಪ್ರದಾಯಿಕ ಮದುವೆ ಕಾರ್ಯಕ್ರಮ ನಡೆಸಲು ಸಿದ್ಧತೆ ನಡೆಸಿದ್ದರು. ವೃದ್ಧಾಶ್ರಮದ ಲವ್ ಸ್ಟೋರಿ ಕೇರಳ ಕೃಷಿ ಸಚಿವ ವಿಎಸ್ ಶಿವಕುಮಾರ್ ಅವರಿಗೆ ತಲುಪಿತ್ತು. ನಂತರ ಈ ಮದುವೆಯಲ್ಲಿ ತಾನೂ ಭಾಗವಹಿಸುವ ನಿರ್ಧಾರ ಕೈಗೊಂಡಿದ್ದರು.

ಸಾಂಪ್ರದಾಯಿಕ ವಿವಾಹ ಕಾರ್ಯಕ್ರಮದಲ್ಲಿ ವರ ಕೋಚಾನಿಯಾನ್ ಮತ್ತು ವಧು ಅಮ್ಮಾಳ್ ಇಬ್ಬರು ಕೆನ್ನೆಗೆ ಮುತ್ತು ಕೊಟ್ಟುಕೊಳ್ಳುವ ಮೂಲಕ ವೃದ್ಧಾಶ್ರಮದಲ್ಲಿ ಭರ್ಜರಿ ಚಪ್ಪಾಳೆ ಸದ್ದು ಹಾಗೂ ನಗುವಿನ ಅಲೆ ಎಬ್ಬಿಸಿರುವುದಾಗಿ ವರದಿ ತಿಳಿಸಿದೆ.

Comments are closed.