
ಕಟಕ್: ಭಾರತ ತಂಡದ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ, ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಎದುರಾಳಿ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಶೇಯ್ ಹೋಪ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ವಿಶೇಷ ದಾಖಲೆ ಬರೆದಿದ್ದಾರೆ.
ಇಲ್ಲಿನ ಬಾರಬತಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ 3ನೇ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡದ ಎದುರು 10 ಓವರ್‌ಗಳಲ್ಲಿ 66 ರನ್ ನೀಡಿ 1 ವಿಕೆಟ್ ಪಡೆದ ಶಮಿ ಒಡಿಐ ಕ್ರಿಕೆಟ್‌ನಲ್ಲಿ ವಿಶೇಷ ದಾಖಲೆ ತಮ್ಮದಾಗಿಸಿಕೊಂಡರು.
ಶೇಯ್ ಹೋಪ್ ವಿಕೆಟ್ ಪಡೆಯುವ ಮೂಲಕ 2019ರ ಸಾಲಿನಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಒಟ್ಟು 42 ವಿಕೆಟ್‌ಗಳನ್ನು ಪಡೆದ ಶಮಿ, ವರ್ಷ ವೊಂದರಲ್ಲಿ ಅತಿ ಹೆಚ್ಚು ಒಡಿಐ ವಿಕೆಟ್ ಪಡೆದ ವೇಗದ ಬೌಲರ್ ಎಂದೆನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ವೃತ್ತಿ ಬದುಕಿನಲ್ಲಿ ಎರಡು ಬಾರಿ ಈ ದಾಖಲೆ ಬರೆದ ಭಾರತದ ಮೊತ್ತ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಈ ವರ್ಷ ಶಮಿ 42 ಒಡಿಐ ವಿಕೆಟ್‌ಗಳನ್ನು ಪಡೆದರೆ, ನ್ಯೂಜಿಲೆಂಡ್‌ನ ವೇಗಿ ಟ್ರೆಂಟ್ ಬೌಲ್ಟ್ 38 ವಿಕೆಟ್‌ಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದಾರೆ. 28 ವರ್ಷದ ಭಾರತೀಯ ವೇಗಿ ತಮ್ಮ ಒಡಿಐ ವೃತ್ತಿ ಬದುಕಿನಲ್ಲಿ 2ನೇ ಬಾರಿ ಈ ಸಾಧನೆ ಮಾಡಿದ್ದಾರೆ. 2014ರಲ್ಲಿ 38 ಒಡಿಐ ವಿಕೆಟ್ ಪಡೆಯುವ ಮೂಲಕ ವರ್ಷದ ಅತ್ಯಂತ ಯಶಸ್ವಿ ಏಕದಿನ ಕ್ರಿಕೆಟ್ ಬೌಲರ್ ಎನಿಸಿದ್ದರು. ಇದರೊಂದಿಗೆ ಈ ಸಾಧನೆ ಮಾಡಿದ ಭಾರತದ ನಾಲ್ಕನೇ ಬೌಲರ್ ಎನಿಸಿದ್ದರು.
ಇನ್ನು ಇದೇ ವರ್ಷ ಇಂಗ್ಲೆಂಡ್ ಮತ್ತು ವೇಲ್ಸ್ ಆತಿಥ್ಯದಲ್ಲಿ ನಡೆದ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಅಫಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಶಮಿ ಒಡಿಐ ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆಯನ್ನೂ ಮಾಡಿದ್ದರು.
ವರ್ಷ ಒಂದರಲ್ಲಿ ಅತಿ ಹೆಚ್ಚು ಒಡಿಐ ವಿಕೆಟ್ ಪಡೆದ ಭಾರತೀಯ ಬೌಲ್‌ಗಳು
1986 – ಕಪಿಲ್ ದೇವ್ (32 ವಿಕೆಟ್)
1998 – ಅಜಿತ್ ಅಗರ್ಕರ್ (58 ವಿಕೆಟ್)
2004 – ಇರ್ಫಾನ್ ಪಠಾಣ್ (47 ವಿಕೆಟ್)
2014 – ಮೊಹಮ್ಮದ್ ಶಮಿ (38 ವಿಕೆಟ್)
2019 – ಮೊಹಮ್ಮದ್ ಶಮಿ (42 ವಿಕೆಟ್)
ಇನ್ನು ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್, ನಿಕೊಲಾಸ್ ಪೂರನ್ (89) ಮತ್ತು ನಾಯಕ ಕೈರೊನ್ ಪೊಲಾರ್ಡ್ (ಅಜೇಯ 74) ಅವರ ಅರ್ಧಶತಕಗಳ ನೆರವಿನಿಂದ 50 ಓವರ್‌ಗಳಲ್ಲಿ 5 ವಿಕೆಟ್‌ಗೆ 315 ರನ್‌ಗಳ ಬೃಹತ್ ಮೊತ್ತ ದಾಖಲಿಸಿತು.
Comments are closed.