ಕರಾವಳಿ

ಕಾಲಿಗೆ ಸರಪಳಿ ಕಟ್ಟಿಕೊಂಡು 3 ಗಂಟೆ ನದಿಯಲ್ಲಿ 25 ಕಿ.ಮೀ ಈಜಿ ಗುರಿ ಮುಟ್ಟಿದ ವಿದ್ಯಾರ್ಥಿ ಸಂಪತ್ ಖಾರ್ವಿ

Pinterest LinkedIn Tumblr

ಕುಂದಾಪುರ: ಇಲ್ಲಿನ ಖಾರ್ವಿ ಕೇರಿಯ ಈಜು ಪ್ರತಿಭೆ ಕುಂದಾಪುರ ಭಂಡಾರ್ ಕಾರ್ಸ್ ಕಾಲೇಜಿನ ಪದವಿ ವಿದ್ಯಾರ್ಥಿ ಸಂಪತ್ ಡಿ ಖಾರ್ವಿ (17) ಅವರು ಭಾನುವಾರ ಬಸ್ರೂರು ರೈಲು ಸೇತುವೆ ಬಳಿಯಿಂದ ಗಂಗೊಳ್ಳಿ ಬಂದರಿನ ತನಕ ಕಾಲುಗಳಿಗೆ ಸರಪಳಿಗಳನ್ನು ಬಿಗಿದು ಈಜುವ ಮೂಲಕ ತನ್ನ ವೈಯುಕ್ತಿಕ ದಾಖಲೆ ನಿರ್ಮಿಸಿದ್ದಾರೆ.

ಸರಪಳಿ ತೊಡಿಕೆ…ಸರಪಳಿ ಬೀಗ ತೆರವು..
ಮಹಾಕಾಳಿ ದೇವಸ್ಥಾನದ ಅಧ್ಯಕ್ಷ ಪ್ರಕಾಶ್ ಖಾರ್ವಿಯವರು ಸಂಪತ್ ಅವರ ಕಾಲುಗಳಿಗೆ ಬಸ್ರೂರು ರೈಲು ಸೇತುವೆ ಕೆಳಭಾಗದಲ್ಲಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ಕಾಲುಗಳಿಗೆ ಸರಪಳಿಗಳನ್ನು ತೊಡಿಸುವ ಮೂಲಕ ಆರಂಭಗೊಂಡ ಸಂಪತ್ ಅವರ ಈಜಿನ ಜೈತ್ರ್ಯ ಯಾತ್ರೆ ಸರಿಸುಮಾರು ನಾಲ್ಕು ಗಂಟೆಗಳ ಅವಿರತವಾಗಿ ನಡೆದು ಸಂಜೆ 5 ಗಂಟೆಗೆ ಗಂಗೊಳ್ಳಿ ಬಂದರಿಗೆ ತಲುಪಿ ಅಂತ್ಯಗೊಂಡಿತು. ಗಂಗೊಳ್ಳಿ ಪೊಲೀಸ್ ಠಾಣಾಧಿಕಾರಿ ವಾಸಪ್ಪ ನಾಯ್ಕ್ ಬಂದರಿಗೆ ಆಗಮಿಸಿ ಸಂಪತ್ ಕಾಲಿನ ಸರಪಳಿ ಬೀಗ ತೆಗೆದು ಸಾಧನೆಯ ಮೆಟ್ಟಿಲಿನ ಪ್ರಥಮ ಹೆಜ್ಜೆ ತುಳಿದ ವಿದ್ಯಾರ್ಥಿಗೆ ಶುಭ ಹಾರೈಸಿದರು.

ಸಂಪತ್ ಸಾಧನೆಗೆ ತಂದೆಯೇ ಸ್ಪೂರ್ತಿ…
ಕುಂದಾಪುರದ ಖಾರ್ವಿಕೇರಿಯ ನಿವಾಸಿ ದೇವರಾಯ ಖಾರ್ವಿ ಹಾಗೂ ಸಂಜೀವಿ ದಂಪತಿಗಳ ಇಬ್ಬರು ಮಕ್ಕಳಲ್ಲಿ ಸಂಪತ್ ಓರ್ವ. ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿರುವ ಸಂಪತ್ ಬಾಲ್ಯದಲ್ಲಿ ಅಂದರೆ ಸುಮಾರು 12ನೇ ವರ್ಷ ಪ್ರಾಯದಲ್ಲಿಯೇ ಈಜು ಕಲಿಯಲು ಆರಂಭಿಸಿದ್ದು ಅದಕ್ಕೆಅವರ ತಂದೆಯೇ ಸ್ಫೂರ್ತಿ ಮತ್ತು ಮಾರ್ಗದರ್ಶಕ ಗುರುವಾಗಿದ್ದಾರೆ. ಈತನ ಚಿಕ್ಕಪ್ಪ ಜಿಂದಾ ಯಾನೆ ದೇವೆಂದ್ರ ಖಾರ್ವಿ ಮುಳುಗು ತಜ್ಞ ಹಾಗೂ ನಿಪುಣ ಈಜುಗಾರ. ಅಲ್ಲದೇ ಈಜುಪಟು ದಯಾನಂದ ಖಾರ್ವಿ ಕೂಡ ಈತನಿಗೆ ಮಾರ್ಗದರ್ಶಕರು.

ಇಂಡಿಯಾ ಬುಕ್ ಆಫ್ ರೆಕಾರ್ಡ್ ಮಾಡುವಾಸೆ…
ನಿತ್ಯ 2-3ಗಂಟೆ ಈಜುವ ಈತ ಇಂದಿನ ಸಾಧನೆಗೆ ಅಭ್ಯಾಸ ಮಾಡಿದ್ದು ಕೇವಲ 10 ದಿನ. ಇದು ನನ್ನ ಮುಂದಿನ ಯತ್ನಕ್ಕೆ ಆರಂಭವಷ್ಟೆ..
ಮುಂದೆ ಕೈ ಹಾಗೂ ಕಾಲಿಗೂ ಕೋಳ ತೊಡಿಸಿಕೊಂಡು ಈಜಿ ಸಾಧಿಸಬೇಕು. ಈಜಿನಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮಾಡಬೇಕು ಎಂಬುದು ಸಂಪತ್ ಆಕಾಂಕ್ಷೆ.

ಸಂಪತ್ ಸಾಧನೆಗೆ ಸಾಥ್….
ಸಂಪತ್ ಅವರಿಗೆ ರಕ್ಷಣಾ ವ್ಯೂಹ ವಾಗಿ ಈಜುಗಾರರಾದ ಸಂಪತ್ ತಂದೆ ದೇವರಾಯ ಖಾರ್ವಿ,ಸುಬ್ರಹ್ಮಣ್ಯ ಖಾರ್ವಿ, ಮಣಿ ಖಾರ್ವಿ,ರಂಜಿತ್ ಖಾರ್ವಿ, ಹರೀಶ ಖಾರ್ವಿ ಮುಂತಾದವರು ಸರಿಸುಮಾರು 25 ಕಿ.ಮೀ. ಯಷ್ಟು ಕ್ರಮಿಸಿ ಸಹಕಾರ ನೀಡಿದರು. ಈ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆ ವೈದ್ಯರಾದ ವಿಜಯ ಶಂಕರ್. ದೈಹಿಕ ಶಿಕ್ಷಕ ಆನಂದ ಪೂಜಾರಿ, ತಲ್ಲೂರು ಗ್ರಾ. ಪಂ. ಸದಸ್ಯ ಸುನೀಲ್ ಖಾರ್ವಿ,ಅಶೋಕ್ ಕೆರೆಕಟ್ಟೆ, ಮಾನಸ ಜ್ಯೋತಿಯ ಮುಖ್ಯಸ್ಥೆ ಶೋಭಾ ಮಧ್ಯಸ್ಥ ಸಹಿತ ನೂರಾರು ಅಭಿಮಾನಿಗಳು ಉಪಸ್ಥಿತರಿದ್ದು ಸಂಪತ್ ಅವರಿಗೆ ಶುಭ ಕೋರಿದರು.

ಅಭೂತಪೂರ್ವ ಬೆಂಬಲ…!
ಸಂಪತ್ ಅವರು ನದಿಯಲ್ಲಿ ಸಾಗಿದ ಹಾದಿಯುದ್ದಕ್ಕೂ ಇನ್ನಿತರ ಐದಾರು ದೋಣಿಗಳಲ್ಲಿ ಹಿಂಬಾಲಿಸಿದ ಅಭಿಮಾನಿಗಳು ಡೋಲು ಚಂಡೆ ವಾದನಗಳನ್ನು ಬಾರಿಸುವ ಮೂಲಕ ಸಂಪತ್ ಅವರಿಗೆ ಹುರಿದುಂಬಿಸಿದರು. ತೀರದ ಉದ್ದಕ್ಕೂ ಕಾದು ಕುಂತಿದ್ದ ಸಾವಿರಾರು ಸಾರ್ವಜನಿಕರು ಸಂಪತ್ ಅವರ ಸಾಹಸ ಗಾಥೆಯನ್ನು ಕಣ್ತುಂಬಿ ಕೊಂಡು ಹರಿಸಿದರು. ಕುಂದಾಪುರ ಸಂಗಮ್ ಬ್ರಿಡ್ಜ್ ಬಳಿ ನೂರಾರು ಮಂದಿ ನಿಂತು ವೀಕ್ಷಿಸಿದ್ದು ಸಂಪತ್ ಉತ್ಸಾಹವನ್ನು ಇಮ್ಮಡಿಗೊಳಿಸಿತು.

ಹರ್ಷವರ್ಧನ್ ಖಾರ್ವಿ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದ ರೂವಾರಿ ಪತ್ರಕರ್ತ ಮಝರ್ ಕುಂದಾಪುರ ಉಪಸ್ಥಿತರಿದ್ದು ಕಾರ್ಯ ಕ್ರಮವನ್ನು ಯಶಸ್ವಿಗೊಳಿಸಿ ಸಂಪತ್ ಅವರ ದಾಖಲೆಗೆ ಸಾಕ್ಷಿಯಾಗಿ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆಗಳನ್ನು ಅರ್ಪಿಸಿದರು. ಯುವ ಬ್ರಿಗೇಡ್ ವತಿಯಿಂದ ಸಾಧಕ ವಿದ್ಯಾರ್ಥಿ ಸಂಪತ್ ಅವರನ್ನು ಸನ್ಮಾನಿಸಲಾಯಿತು.

ಚಿತ್ರ, ವರದಿ- ಯೋಗೀಶ್ ಕುಂಭಾಸಿ

Comments are closed.