ಕ್ರೀಡೆ

ಸೋಷಿಯಲ್‌ ಮೀಡಿಯಾದಲ್ಲಿ ನಗ್ನಳಾಗಿದ್ದ ಇಂಗ್ಲೆಂಡ್‌ನ ಮಹಿಳಾ ಕ್ರಿಕೆಟರ್‌ ನಿವೃತ್ತಿ!

Pinterest LinkedIn Tumblr


ಲಂಡನ್‌: ಕಳೆದ ತಿಂಗಳಷ್ಟೇ ಸೋಷಿಯಲ್‌ ಮೀಡಿಯಾದಲ್ಲಿ ನಗ್ನ ಚಿತ್ರ ಪ್ರಕಟಿಸಿ ವೈರಲ್‌ ಆಗಿದ್ದ ಇಂಗ್ಲೆಂಡ್‌ ಮಹಿಳಾ ಕ್ರಿಕೆಟ್‌ ತಂಡದ ಅನುಭವಿ ವಿಕೆಟ್‌ಕೀಪರ್‌ ಸಾರಾ ಟೇಲರ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಶುಕ್ರವಾರ ಹಠಾತ್‌ ನಿವೃತ್ತಿ ಘೋಷಿಸಿರುವುದಾಗಿ ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ ಹೇಳಿದೆ.

“ಇದು ಅತ್ಯಂತ ಕಠಿಣ ನಿರ್ಧಾರವಾಗಿತ್ತು. ಆದರೆ, ನನ್ನ ಮತ್ತು ನನ್ನ ಆರೋಗ್ಯ ನಿಟ್ಟಿನಲ್ಲಿ ಇದು ಸರಿಯಾದ ನಿರ್ಧಾರ ಎಂಬುದನ್ನು ತಿಳಿದಿದ್ದೇನೆ,” ಎಂದು ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಸಾರಾ ಹೇಳಿದ್ದಾರೆ.

ಇಂಗ್ಲೆಂಡ್ ಕ್ರಿಕೆಟ್ ಆಟಗಾರ್ತಿ ಬೆತ್ತಲಾಗಿದ್ದೇಕೆ?

“ಕ್ರಿಕೆಟ್‌ ವೃತ್ತಿ ಬದುಕಿನಲ್ಲಿ ನನಗೆ ನೆರವಾದ ಇಂಗ್ಲೆಂಡ್‌ ಕ್ರಿಕೆಟ್ ಮಂಡಳಿ, ನನ್ನ ತಂಡದ ಹಾಲಿ ಮತ್ತು ಮಾಜಿ ಸಹ ಆಟಗಾರ್ತಿಯರು ಮತ್ತು ಸ್ನೇಹಿತರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು. ಇಂಗ್ಲೆಂಡ್‌ ಪರ ಸುದೀರ್ಘಾವಧಿಯ ಕಾಲ ಆಡಿದ್ದು ಕನಸು ನನಸಾದ ಅನುಭವ ತಂದುಕೊಟ್ಟಿದೆ. ನನ್ನ ವೃತ್ತಿ ಬದುಕಿನಲ್ಲಿ ಹಲವು ಅದ್ಭುತ ಕ್ಷಣಗಳನ್ನು ಅನುಭವಿಸಿರುವುದು ನನ್ನ ಅದೃಷ್ಟವೇ ಸರಿ,” ಎಂದಿದ್ದಾರೆ.

“2006ರಲ್ಲಿ ಪದಾರ್ಪಣೆ ಮಾಡಿದ್ದು, ಆಷಸ್‌ ಸರಣಿ ಗೆಲುವು ಹಾಗೂ ಲಾರ್ಡ್ಸ್‌ನಲ್ಲಿ ನಡೆದ ವಿಶ್ವಕಪ್‌ ಫೈನಲ್‌ ಗೆದ್ದು ಪ್ರಶಸ್ತಿ ಎತ್ತಿ ಹಿಡಿದದ್ದು ಅವಿಸ್ಮರಣೀಯ ಕ್ಷಣಗಳಾಗಿವೆ. ಇಷ್ಟೇ ಅಲ್ಲದೆ ವಿಶ್ವದ ವಿವಿಧ ಭಾಗಗಳಿಗೆ ತೆರಳಿ ಜೀವನದುದ್ದಕ್ಕೂ ಇರುವಂತಹ ಗೆಳೆಯರನ್ನು ಸಂಪಾದಿಸಿದ್ದೇನೆ. ಜಗತ್ತಿನಾದ್ಯಂತ ಪ್ರಗತಿಯಲ್ಲಿರುವ ಮಹಿಳಾ ಕ್ರಿಕೆಟ್‌ನ ಭಾಗವಾಗಿದ್ದಕ್ಕೆ ಹೆಮ್ಮೆಯ ಅನುಭವವಿದೆ. ಮಹಿಳಾ ಕ್ರಿಕೆಟ್‌ ಕೂಡ ಅದ್ಭುತ ಕೊಡುಗೆ ಸಲ್ಲಿಸುತ್ತಿದೆ ಎಂದೇ ಹೇಳಬಹುದು,” ಎಂದು ಸಾರಾ ತಮ್ಮ ಮನದಾಳದ ಮಾತುಗಳನ್ನಾಡಿದ್ದಾರೆ.

“ನನ್ನ ವೃತ್ತಿ ಬದುಕಿನ ಕುರಿತಾಗಿ ಹೆಮ್ಮೆಯಿದೆ. ತಲೆಯೆತ್ತಿ ನನ್ನ ಮುಂದಿನ ಭವಿಷ್ಯದ ಕಡೆಗೆ ಹೆಜ್ಜೆ ಹಾಕಲಿದ್ದೇನೆ. ಮುಂದಿನ ಜೀವನವನ್ನು ಎದುರಿಸಲು ಸಜ್ಜಾಗಿದ್ದೇನೆ,” ಎಂದು ಹೇಳಿದ್ದಾರೆ.

30 ವರ್ಷದ ವಿಕೆಟ್‌ಕೀಪಿಂಗ್‌ ಬ್ಯಾಟರ್‌ ಸಾರಾ ಟೇಲರ್‌ 2006ರಲ್ಲಿ ಇಂಗ್ಲೆಂಡ್‌ ಮಹಿಳಾ ಕ್ರಿಕೆಟ್‌ ತಂಡಕ್ಕೆ ಪದಾರ್ಪಣೆ ಮಾಡಿದ್ದು, ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಒಟ್ಟು 226 ಪಂದ್ಯಗಳನ್ನಾಡಿ 6533 ರನ್‌ಗಳನ್ನು ಚೆಚ್ಚಿದ್ದಾರೆ. ಈ ಮೂಲಕ ಇಂಗ್ಲೆಂಡ್‌ ಮಹಿಳಾ ತಂಡದ ಪರ ಸಾರ್ವಕಾಲಿಕ ಅತಿ ಹೆಚ್ಚು ರನ್‌ ಗಳಿಸಿದವರ ಪೈಕಿ 2ನೇ ಸ್ಥಾನದಲ್ಲಿದ್ದಾರೆ.

ನಗ್ನ ಚಿತ್ರ ಪ್ರಕಟಿಸಿದ್ದ ಸಾರಾ
ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಸಾರಾ ಟೇಲರ್‌ ತಮ್ಮೊಳಗಿನ ಅಂಜಿಕೆಗಳನ್ನು ದೂರ ಮಾಡುವ ಉದ್ದೇಶದಿಂದ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ ಮತ್ತು ಟ್ವಿಟರ್‌ ಖಾತೆಗಳ ಮೂಲಕ ಬೆತ್ತಲೆ ಫೋಟೊಗಳನ್ನು ಪ್ರಕಟಿಸಿದ್ದರು. ಇದಕ್ಕೆ ಹಲವರು ಬೆನ್ನು ತಟ್ಟಿ ಸಾರಾ ಅವರ ದಿಟ್ಟ ತನವನ್ನು ಹೊಗಳಿದರೆ, ಮತ್ತೂ ಕೆಲವರು ಪ್ರಚಾರ ಸಲುವಾಗಿ ಈ ರೀತಿ ಮಾಡಿದ್ದಾರೆಂದು ಟೀಕಿಸಿದ್ದರು.

Comments are closed.