ಕ್ರೀಡೆ

ಈ ದಿನವನ್ನು ಕ್ರಿಕೆಟ್ ಇತಿಹಾಸದಲ್ಲಿ ಮರೆಯಲು ಅಸಾಧ್ಯ!

Pinterest LinkedIn Tumblr


ಬೆಂಗಳೂರು (ಆ. 28): ಎಂ ಎಸ್ ಧೋನಿ ಹಾಗೂ ಡ್ವೇನ್ ಬ್ರಾವೋ ಜೊತೆಯಾಗಿ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಸಿಎಸ್​ಕೆ ಪರ ಅನೇಕ ಪಂದ್ಯಗಳನ್ನು ಆಡಿದ್ದಾರೆ. ಆದರೆ ಆ ದಿನ ಈ ಇಬ್ಬರೂ ಆಟಗಾರರು ತಮ್ಮ ದೇಶದ ಗೆಲುವಿಗಾಗಿ ನಡೆಸಿದ ಹೋರಾಟ ಯಾರಿಂದಲೂ ಮರೆಯಲಿ ಸಾಧ್ಯವಿಲ್ಲ.

’27 ಆಗಸ್ಟ್​​ 2017′, ನಿನ್ನೆಯ ದಿನಕ್ಕೆ ಸರಿಯಾಗಿ ಎರಡು ವರ್ಷ. ಫ್ಲೋರಿಡಾದಲ್ಲಿ ನಡೆದ ಭಾರತ ಹಾಗೂ ವೆಸ್ಟ್​ ಇಂಡೀಸ್ ನಡುವಣ ಟಿ-20 ಪಂದ್ಯ ಹಿಂದಿನ ದಾಖಲೆಯನ್ನೆಲ್ಲಾ ಪುಡಿಪುಡಿ ಮಾಡಿತು. ಎರಡೂ ತಂಡಗಳು ಹೊಸ ಸಾಧನೆ ಮಾಡಿದವು. ಈ ಟಿ-20 ಪಂದ್ಯದಲ್ಲಿ ಒಟ್ಟು ಹರಿದುಬಂದಿದ್ದು ಬರೋಬ್ಬರಿ 489 ರನ್ಸ್​​. ಇದು ವಿಶ್ವ ದಾಖಲೆ. ಅಲ್ಲದೆ ಒಂದೇ ಪಂದ್ಯದಲ್ಲಿ 32 ಸಿಕ್ಸ್​ಗಳು ಸಿಡಿದಿದ್ದವು. ಇದುಕೂಡ ದಾಖಲೆಯಾಯಿತು.

ಅಮೆರಿಕನ್ನರ ನಾಡಲ್ಲಿ ನಡೆದ ಈ ರೋಚಕ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್​ ಇಂಡೀಸ್ 20 ಓವರ್​ಗೆ 6 ವಿಕೆಟ್ ಕಳೆದುಕೊಂಡು 245 ರನ್ ಬಾರಿಸಿತು. ಮೊದಲ 10 ಓವರ್ ಒಳಗೆನೆ 126 ರನ್ ಸಿಡಿದುಬಂತು. ಎವಿನ್ ಲೆವಿಸ್ 49 ಎಸೆತಗಳಲ್ಲಿ 100 ಹಾಗೂ ಜಾನ್​ಸನ್ ಕಾರ್ಲಸ್ 33 ಎಸೆತಗಳಲ್ಲಿ 79 ರನ್ ಚಚ್ಚಿದ್ದರು. ಭಾರತೀಯ ಬೌಲರ್​ಗಳ ಪೈಕಿ ಆರ್. ಅಶ್ವಿನ್ ಎಕಾನಮಿ ಮಾತ್ರ 10ರ ಗಡಿ ದಾಟಲಿಲ್ಲ.

246 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಭಾರತ ಆರಂಭದಲ್ಲೇ ರಹಾನೆ, ಕೊಹ್ಲಿ ವಿಕೆಟ್ ಕಳೆದುಕೊಂಡಿತು. ಆದರೆ 3ನೇ ವಿಕೆಟ್​ಗೆ ರೋಹಿತ್ ಶರ್ಮಾ ಜೊತೆಯಾದ ಕೆ ಎಲ್ ರಾಹುಲ್ ಗೆಲುವಿಗಾಗಿ ಕಠಿಣ ಹೋರಾಟ ನಡೆಸಿದರು. ರೋಹಿತ್ ಶರ್ಮಾ ಕೇವಲ 28 ಎಸೆತಗಳಲ್ಲಿ 62 ರನ್ ಬಾರಿಸಿ ಔಟ್ ಆದರು. ಇತ್ತ ರಾಹುಲ್, ಧೋನಿ ಜೊತೆಗೂಡಿ ಶತಕ ಸಿಡಿಸಿ ಅಬ್ಬರಿಸಿದರು.

ಕೊನೆಯ ಓವರ್​ನಲ್ಲಿ ಭಾರತಕ್ಕೆ ಗೆಲ್ಲಲು 8 ರನ್​ಗಳ ಅವಶ್ಯಕತೆಯಿತ್ತು. ಕೊನೆಯ ಎಸೆತದಲ್ಲಿ 2 ರನ್​ಗಳು ಬೇಕಾಗಿತ್ತು. ಬೌಲಿಂಗ್ ಡ್ವೇನ್ ಬ್ರಾವೋ ಆದರೆ, ಇತ್ತ ಕ್ರೀಸ್​ನಲ್ಲಿ ಧೋನಿಯಿದ್ದರು. ಪ್ರತಿ ಬಾರಿ ವಿನ್ನಿಂಗ್ ಶಾಟ್ ಮೂಲಕ ಫಿನಿಶಿಂಗ್ ನೀಡುತ್ತಿದ್ದ ಧೋನಿ ಈಬಾರಿ ಎಡವಿದರು. ಕೊನೆಯ ಎಸೆತದಲ್ಲಿ ಧೋನಿ ಸ್ಯಾಮುಯೆಲ್ಸ್​​ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದು, ವಿಂಡೀಸ್ 1 ರನ್​ಗಳ ರೋಚಕ ಜಯ ಸಾಧಿಸುವಂತಾಯಿತು. ರಾಹುಲ್ 51 ಎಸೆತಗಳಲ್ಲಿ ಅಜೇಯ 110 ರನ್ ಗಳಿಸಿದರೆ, ಧೋನಿ 25 ಎಸೆತಗಳಲ್ಲಿ 43 ರನ್​ಗೆ ಔಟ್ ಆದರು.

ಈ ಪಂದ್ಯ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ರೋಚಕ ಪಂದ್ಯವಾಗಿ ಉಳಿಯಿತು. ಅಲ್ಲದೆ ಹೊಸ ದಾಖಲೆಯನ್ನೂ ಸೃಷ್ಟಿಸಿತು.

Comments are closed.