
ಚಿಕ್ಕಮಗಳೂರು(ಆ.28): ಮೃತದೇಹವನ್ನು ಸಾಗಿಸಲು ರಸ್ತೆ ಇಲ್ಲದೇ ಉಕ್ಕಿ ಹರಿಯುತ್ತಿರುವ ಭದ್ರಾ ನದಿಯಲ್ಲಿ ತೆಪ್ಪದ ಮೂಲಕ ಮೃತದೇಹ ಸಾಗಿಸುತ್ತಾರೆ ಎಂದರೆ ಅಭಿವೃದ್ಧಿ ಎಲ್ಲಿ ಆಗಿದೆ? ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯಲಿದೆ. ಅವರಿಗೆ ನಾವು ಆದಿವಾಸಿಗಳು ಎನ್ನುವ ನೋವಿಗಿಂತ 2-3 ದಶಕಗಳಿಂದ ಸರ್ಕಾರ ಸಂಪೂರ್ಣ ನಿರ್ಲಕ್ಷಿಸಿದೆ ಎನ್ನುವ ನೋವೇ ದಟ್ಟವಾಗಿದೆ. ಅಂತಹ ನತದೃಷ್ಟ ಜನ ಅನಾರೋಗ್ಯದಿಂದ ಮೃತಪಟ್ಟ ಗ್ರಾಮದ ಯುವಕನ ದೇಹವನ್ನು ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಭದ್ರಾ ನದಿಯಲ್ಲಿ ತೆಪ್ಪದ ಮೂಲಕ ಸಾಗಿಸಿ, ಕಣ್ಣೀರಿಡುತ್ತಿರುವ ಕರುಣಾಜನಕ ಕಥೆ ಇದು.
ತುಂಬಿ ಹರಿಯುತ್ತಿರುವ ಭದ್ರಾ ನದಿ. ನದಿ ದಡದ ಬಳಿ ತೆಪ್ಪದಲ್ಲಿ ಮೃತ ದೇಹ. ಜೀವದ ಹಂಗನ್ನು ತೊರೆದು ಮೃತದೇಹದೊಂದಿಗೆ ತೆಪ್ಪದಲ್ಲಿ ನದಿ ದಾಟುತ್ತಿರುವ ಜನ. ಸರ್ಕಾರದ ನಿರ್ಲಕ್ಷ್ಯದಿಂದ ಇಂದಿಗೂ ಇಂತಹ ಹೋರಾಟದ ಬದುಕು ಸಾಗಿಸುತ್ತಿದ್ದಾರೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಮಾಗುಂಡಿ ಸಮೀಪದ ಹೊಳೆಕುಡಿಗೆ ಜನ. ಇವರಿಗೆ ರಸ್ತೆ ಇಲ್ಲದೆ ಭದ್ರಾ ನದಿಯಲ್ಲಿ ತೆಪ್ಪದ ಮೂಲಕ ಜೀವ ಭಯದಿಂದ ಶವವನ್ನು ಸಾಗಿಸುವಂತಹ ಸ್ಥಿತಿ ಇಂದಿಗೂ ಜೀವಂತವಾಗಿದೆ.
ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಮೃತಪಟ್ಟ ಗ್ರಾಮದ ಯುವಕ ರಾಘವೇಂದ್ರ (29 ವರ್ಷ ) ಮೃತ ದೇಹವನ್ನು ಪ್ರವಾಹದ ಮಟ್ಟ ಮೀರಿ ಹರಿಯುತ್ತಿರುವ ಭಧ್ರಾ ನದಿಯಲ್ಲಿ ತೆಪ್ಪದ ಮೂಲಕ ಮನೆಗೆ ರವಾನೆ ಮಾಡಿರುವ ಕರುಣಾಜನಕ ಕಥೆ ಇದು. ಆದಿವಾಸಿ ಕುಟುಂಬಗಳೇ ಇರುವ ಗ್ರಾಮ ಹೊಳೆಕುಡಿಗೆ. ಈ ಗ್ರಾಮದ ರಾಘವೇಂದ್ರ ಎಂಬವರು ನಿನ್ನೆ ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಮೃತ ದೇಹವನ್ನು ಗ್ರಾಮಕ್ಕೆ ಸಾಗಿಸಲು ರಸ್ತೆ ಮಾರ್ಗವಿಲ್ಲದೆ ಭದ್ರಾ ನದಿಯಲ್ಲಿ ತೆಪ್ಪದ ಮೂಲಕ ಜೀವ ಭಯದಲ್ಲೇ ಕುಟುಂಬಸ್ಥರು ಸಾಗಿಸಿದ್ದಾರೆ.
ಈ ಗ್ರಾಮದ ಜನ ರಸ್ತೆಗಾಗಿ 3 ದಶಕದಿಂದಲೂ ಜಿಲ್ಲಾಡಳಿತ, ತಾಲೂಕು ಆಡಳಿತಕ್ಕೆ ಮನವಿ ಮಾಡಿಕೊಂಡು ಬಂದಿದ್ದಾರೆ. ಆದರೆ, ವ್ಯವಸ್ಥೆ ಇವರ ನೋವಿಗೆ ಎಂದಿಗೂ ಸ್ಪಂದಿಸಿಲ್ಲ. ಇದರಿಂದ ಭದ್ರಾ ನದಿಯೇ ಇವರಿಗೆ ದಾರಿ. ನದಿ ಎಷ್ಟೇ ಪ್ರಮಾಣದಲ್ಲಿ ಹರಿಯುತ್ತಿದ್ದರೂ ಇವರಿಗೆ ಬೇರೆ ದಾರಿ ಇಲ್ಲ. ಭದ್ರೆ ವೇಗವಾಗಿ ಹರಿಯುವಾಗ ಕೆಲವೊಮ್ಮೆ ವಾರಗಟ್ಟಲೇ ಮನೆಯಿಂದ ಹೊರಬಾರದ ಸ್ಥಿತಿಯೂ ನಿರ್ಮಾಣವಾಗಿದೆ. ಮಕ್ಕಳು ವಾರಗಟ್ಟಲೇ ಶಾಲೆಗೆ ಹೋಗದ ಸ್ಥಿತಿ ಜೀವಂತವಾಗಿದೆ.
ಗ್ರಾಮದಲ್ಲಿ ಇಷ್ಟೆಲ್ಲಾ ತೊಂದರೆಗಳಿದ್ದರೂ ತಾಲೂಕು ಹಾಗೂ ಜಿಲ್ಲಾಡಳಿತ ಇವರ ನೋವಿಗೆ ಸ್ಪಂದಿಸಲೇ ಇಲ್ಲ. ಇದರಿಂದ ನಿತ್ಯವೂ ಹೊಳೆಕುಡಿಗೆ ಗ್ರಾಮದಿಂದ ನಗರ ಪ್ರದೇಶಗಳಿಗೆ ತೆರಳಬೇಕಾದರೆ ಭದ್ರೆಯನ್ನು ತೆಪ್ಪದ ಮೂಲಕ ದಾಟ ಬೇಕಾದ ಅನಿರ್ವಾಯತೆ ಗ್ರಾಮಸ್ಥರದ್ದು. ಜೊತೆಗೆ ಅಕ್ಕದಲ್ಲಿ ಇರುವ ಆವಂತಿ ಎಸ್ಟೇಟ್ ಮಾಲೀಕರಾದ ಫಿಲ್ಮಿನಿಯ ಫಿರಿಸ್ಸ್ ಎಂಬವರು ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿದ್ದು ಆ ಜಾಗದಲ್ಲಿ ರಸ್ತೆ ಮಾರ್ಗವಿದೆ. ಅದಕ್ಕೆ ಬೇಲಿ ಹಾಕಿ ಕೋರ್ಟ್ ನಿಂದ ತಡೆಯಾಜ್ಞೆಯನ್ನು ತಂದಿರುವುದರಿಂದ ಈ ಸಮಸ್ಯೆ ಉದ್ಬವಾಗಿದೆ ಎನ್ನುವ ಆರೋಪ ಕೂಡ ಇದೆ.
ಒಟ್ಟಾರೆ ರಸ್ತೆ ಇದ್ದೂ ಇಲ್ಲದಂತೆ ಆದಿವಾಸಿಗಳು ಆದಿವಾಸಿಗಳ ಬದುಕನ್ನೇ ಸಾಗಿಸುತ್ತಿದ್ದಾರೆ. ಪ್ರವಾಹದ ಮಟ್ಟ ಮೀರಿ ಹರಿಯುತ್ತಿರುವ ಭದ್ರೆಯಲ್ಲಿ ತೆಪ್ಪದ ಮೂಲಕ ಜೀವ ಭಯದಿಂದ ನಿತ್ಯವೂ ಬದುಕನ್ನ ಕಟ್ಟಿ ಕೊಂಡಿರುವ ಆದಿವಾಸಿ ಜನಾಂಗವಿರುವ ಹೊಳೆಕುಡಿಗೆ ಗ್ರಾಮಕ್ಕೆ ಜಿಲ್ಲಾಡಳಿತ ಮತ್ತು ಅಧಿಕಾರಿಗಳು ಒತ್ತುವರಿಯಾಗಿರುವ ರಸ್ತೆಯನ್ನು ಬಿಡಿಸಿಕೊಡಲಾಗದಂತಹ ಸ್ಥಿತಿ ಬಂದಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ದುರಂತವೇ ಸರಿ.
Comments are closed.