ಅಂತರಾಷ್ಟ್ರೀಯ

ಅಕ್ಟೋಬರ್‌ ನಲ್ಲಿ ಇಂಡಿಯಾ – ಪಾಕ್‌ ನಡುವೆ ಯುದ್ಧ: ಪಾಕ್‌ ಸಚಿವ

Pinterest LinkedIn Tumblr


ರಾವಲ್‌ಪಿಂಡಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ ಆರ್ಟಿಕಲ್‌ 370ನ್ನು ರದ್ದುಗೊಳಿಸಿರುವ ಕೇಂದ್ರದ ಕ್ರಮಕ್ಕೆ ಕಿಡಿಕಾರಿರುವ ಪಾಕಿಸ್ತಾನ ಪದೇ ಪದೆ ಭಾರತದ ವಿರುದ್ಧ ಹೇಳಿಕೆಗಳನ್ನು ನೀಡುತ್ತಲೇ ಬಂದಿದೆ. ಇದೀಗ ಪಾಕಿಸ್ತಾನದ ರೈಲ್ವೆ ಸಚಿವ ಶೇಖ್‌ ರಶೀದ್‌ ಅಹ್ಮದ್‌, ಭಾರತ ಮತ್ತು ಪಾಕಿಸ್ತಾನದ ನಡುವೆ ಅಕ್ಟೋಬರ್ ಮತ್ತು ನವೆಂಬರ್‌ ವೇಳೆಗೆ ಪೂರ್ಣ ಪ್ರಮಾಣದ ಯುದ್ಧವಾಗಲಿದೆ ಎಂದು ಅನ್ನಿಸುತ್ತಿದೆ ಹೇಳಿದ್ದಾರೆ.

ಕಾಶ್ಮೀರಿಗಳಿಗೆ ಸಂಬಂಧಿಸಿದಂತೆ ರಾವಲ್‌ಪಿಂಡಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, “ಕಾಶ್ಮೀರದ ವಿಮೋಚನೆಗಾಗಿ ಕೊನೆಯ ಯುದ್ಧದ ಸಮಯ ಬಂದಿದೆ ಮತ್ತು ಈ ಬಾರಿ ಭಾರತದೊಂದಿಗಿನ ಯುದ್ಧವು ಪೂರ್ಣ ಪ್ರಮಾಣದ ಮತ್ತು ಅಂತಿಮವಾಗಿರುತ್ತದೆ. ಈ ಯುದ್ಧ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿದೆ ಎಂದು ಹೇಳಿದ್ದಾರೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಕಾಶ್ಮೀರದಲ್ಲಿ ಸಮಸ್ಯೆಯನ್ನು ಸೃಷ್ಟಿಸಿದ್ದಾರೆ. ಹಿಟ್ಲರ್‌ ಮೋದಿಯಿಂದಾಗಿ ಇದೆಲ್ಲ ಆಗಿದ್ದು, ಕಾಶ್ಮೀರದ ವಿಚಾರವಾಗಿ ನಾವು ಯುದ್ಧವನ್ನು ಮಾಡುತ್ತೇವೆ. ಕಾಶ್ಮೀರದ ಭವಿಷ್ಯವು ಕಾಶ್ಮೀರಿಗಳಿಂದ ನಿರ್ಧಾರವಾಗಬೇಕೇ ಹೊರತು ವಿಶ್ವಸಂಸ್ಥೆಯಿಂದಲ್ಲ. ಕಾಶ್ಮೀರ ಸಮಸ್ಯೆ ಇತ್ಯರ್ಥಕ್ಕೆ ವಿಶ್ವಸಂಸ್ಥೆ ಬಯಸಿದ್ದೇ ಆಗಿದ್ದರೆ ಕಾಶ್ಮೀರದಲ್ಲಿ ಜನಾಭಿಪ್ರಾಯ ಸಂಗ್ರಹ ಮಾಡಬಹುದಿತ್ತು ಎಂದು ಹೇಳಿದ್ದಾರೆ.

ಕಾಶ್ಮೀರ ವಿವಾದದಲ್ಲಿ ವಿಶ್ವ ಸಮುದಾಯವು ಮೌನದಿಂದ ದೂರವಿರಬೇಕು ಎಂದು ಆಗ್ರಹಿಸಿರುವ ಅವರು, ಕಾಶ್ಮೀರ ವಿಷಯದಲ್ಲಿ ಚೀನಾ ಎಂದಿಗೂ ಪಾಕಿಸ್ತಾನದ ಪರವಾಗಿಯೇ ಇರುತ್ತದೆ. ಚೀನಾದಂತಹ ಮಿತ್ರ ರಾಷ್ಟ್ರವನ್ನು ನಾವು ಹೊಂದಿದ್ದೇವೆ ಎಂಬುದು ನಮ್ಮ ಅದೃಷ್ಟ. ಈ ಪ್ರದೇಶ ಮತ್ತು ಅದರಾಚೆಗೆ ಭಾರತದ ಆಧಿಪತ್ಯದ ವಿನ್ಯಾಸಗಳಲ್ಲಿ ಮೋದಿ ಪಾಕಿಸ್ತಾನವನ್ನು ಏಕೈಕ ಅಡಚಣೆಯಾಗಿ ನೋಡುತ್ತಾರೆ. ಮೋದಿ ಅವರ ಕಾರಣದಿಂದಾಗಿ ಕಾಶ್ಮೀರ ಇಂದು ವಿನಾಶದ ಅಂಚಿನಲ್ಲಿದೆ ಎಂದು ದೂರಿದರು.

Comments are closed.