ಕ್ರೀಡೆ

ವಿಶ್ವಕಪ್‌; ದಕ್ಷಿಣ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ ಆರು ವಿಕೆಟುಗಳ ಭರ್ಜರಿ ಗೆಲುವು; ರೋಹಿತ್ ಶರ್ಮಾ ಸ್ಫೋಟಕ ಬ್ಯಾಟಿಂಗ್

Pinterest LinkedIn Tumblr

ಸೌತಾಂಪ್ಟನ್: ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಬುಧವಾರ ನಡೆದ ತನ್ನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ ಆರು ವಿಕೆಟುಗಳ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ಇದರೊಂದಿಗೆ ಕೊನೆಯ ತಂಡವಾಗಿ ಅಭಿಯಾನ ಆರಂಭಿಸಿರುವ ಟೀಮ್ ಇಂಡಿಯಾ ಗೆಲುವಿನೊಂದಿಗೆ ಶುಭಾರಂಭ ಮಾಡಿಕೊಂಡಿದೆ. ಅತ್ತ ಹ್ಯಾಟ್ರಿಕ್ ಸೋಲಿಗೆ ಗುರಿಯಾಗಿರುವ ದಕ್ಷಿಣ ಆಫ್ರಿಕಾ ಭಾರಿ ಮುಖಭಂಗಕ್ಕೊಳಗಾಗಿದೆ. ಅಲ್ಲದೆ ಸೆಮಿಫೈನಲ್ ಹಾದಿ ಮತ್ತಷ್ಟು ಕಠಿಣವೆನಿಸಿದೆ.

ಮೊದಲು ಚಹಲ್ (51/4) ಹಾಗೂ ಬುಮ್ರಾ (35/2) ದಾಳಿಗೆ ಕುಸಿತ ಕಂಡ ದಕ್ಷಿಣ ಆಫ್ರಿಕಾ ಒಂಬತ್ತು ವಿಕೆಟ್ ನಷ್ಟಕ್ಕೆ 227 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಬಳಿಕ ಗುರಿ ಬೆನ್ನಟ್ಟಿದ ಭಾರತಕ್ಕೆ ಉಪನಾಯಕ ರೋಹಿತ್ ಶರ್ಮಾ (122*) ಸಮಯೋಚಿತ ಅಜೇಯ ಶತಕದ ನೆರವಿನೊಂದಿಗೆ ನಾಲ್ಕು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ಸವಾಲಿನ ಮೊತ್ತ ಬೆನ್ನಟ್ಟಿದ ಟೀಮ್ ಇಂಡಿಯಾ ಆರಂಭ ಉತ್ತಮವಾಗಿರಲಿಲ್ಲ. ಕಗಿಸೋ ರಬಾಡ ದಾಳಿಯಲ್ಲಿ ಎಂಟು ರನ್ ಗಳಿಸಿದ ಶಿಖರ್ ಧವನ್ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು.

ಈ ನಡುವೆ ಜೀವದಾನದ ಪ್ರಯೋಜನ ಪಡೆದ ರೋಹಿತ್, ರಬಾಡ ಓವರ್‌ವೊಂದರಲ್ಲಿ 15 ರನ್ ಸಿಡಿಸಿದರು. ಆದರೂ ಭಾರತ 10 ಓವರ್‌ಗಳಲ್ಲಿ 34 ರನ್‌ಗಳನ್ನಷ್ಟೇ ಗಳಿಸಿತ್ತು. ಇನ್ನೊಂದೆಡೆ ನಾಯಕ ವಿರಾಟ್ ಕೊಹ್ಲಿ ಸಹ ನಿಧಾನಗತಿಯ ಆರಂಭ ಪಡೆದರು.

ಕ್ರೀಸಿನಲ್ಲಿ ನೆಲೆಯೂರಲು ಸಾಕಷ್ಟು ಪ್ರಯತ್ನಪಟ್ಟ ಕೊಹ್ಲಿ ಕೊನೆಗೂ ತಮ್ಮ ಹೋರಾಟವನ್ನು ಅಂತ್ಯಗೊಳಿಸಿದರು. ಈ ವೇಳೆಯಲ್ಲ ಭಾರತದ ಸ್ಕೋರ್ 15.3 ಓವರ್‌ಗಳಲ್ಲಿ 54/2. 34 ಎಸೆತಗಳನ್ನು ಎದುರಿಸಿದ ಕೊಹ್ಲಿ ಬೌಂಡರಿ ನೆರವಿನಿಂದ 18 ರನ್ ಗಳಿಸಿದರು. ಈ ಮೂಲಕ ವಿಶ್ವಕಪ್ ಮೊದಲ ಪಂದ್ಯದಲ್ಲಿ ಹ್ಯಾಟ್ರಿಕ್ ಶತಕದಿಂದ ವಂಚಿತವಾದರು. ಈ ಹಿಂದೆ 2011 ಹಾಗೂ 2015ರ ವಿಶ್ವಕಪ್‌ನ ಮೊದಲ ಪಂದ್ಯಗಳಲ್ಲಿ ಶತಕಗಳ ಸಾಧನೆ ಮಾಡಿದರು.

ಬಳಿಕ ಕೆಎಲ್ ರಾಹುಲ್ ಜತೆ ಸೇರಿದ ರೋಹಿತ್ ತಂಡವನ್ನು ಮುನ್ನಡೆಸಿದರು. ಕಠಿಣ ಪಿಚ್‌ನಲ್ಲೂ ಅರ್ಪಣಾ ಮನೋಭಾವನ್ನು ತೋರಿದ ರೋಹಿತ್ 69 ಎಸೆತಗಳಲ್ಲಿ ಆಕರ್ಷಕ ಅರ್ಧಶತಕ ಸಾಧನೆ ಮಾಡಿದರು.

25 ಓವರ್‌ಗಳ ಅಂತ್ಯಕ್ಕೆ ಭಾರತದ ಸ್ಕೋರ್ 95/2. ರೋಹಿತ್ ಜತೆಗೆ ರಾಹುಲ್ ಸಹ ಕ್ರೀಸಿನಲ್ಲಿ ನೆಲೆಯೂರುವ ಮೂಲಕ ತಂಡವನ್ನು ನಿಧಾನಗತಿಯಿಂದ ಮುನ್ನಡೆಸಿದರು. ಈ ಮೂಲಕ ನಾಲ್ಕನೇ ಕ್ರಮಾಂಕದಲ್ಲಿ ಆಡಲು ತಾವೇ ಸಮರ್ಥರು ಎಂಬುದನ್ನು ಸಾಬೀತು ಮಾಡಿದರು.

ರೋಹಿತ್-ರಾಹುಲ್ ಜೋಡಿಯು ಎಚ್ಚರಿಕೆಯ ಜತೆಗೆ ಕಳಪೆ ಎಸೆತಗಳನ್ನು ದಂಡಿಸುತ್ತಲೇ ಸಾಗಿದರು. ಈ ಮೂಲಕ ಮಹತ್ವದ ಜತೆಯಾಟದಲ್ಲಿ ಭಾಗಿಯಾದರು.

ಈ ನಡುವೆ ದಾಳಿಗಿಳಿದ ರಬಾಡ ಮಗದೊಮ್ಮೆ ಜತೆಯಾಟವನ್ನು ಮುರಿದರು. ಉತ್ತಮವಾಗಿ ಆಡುತ್ತಿದ್ದ ರಾಹುಲ್ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದರು. 42 ಎಸೆತಗಳನ್ನು ಎದುರಿಸಿದ ರಾಹುಲ್ ಎರಡು ಬೌಂಡರಿಗಳಿಂದ 26 ರನ್ ಗಳಿಸಿದರು. ಆದರೂ ಮೂರನೇ ವಿಕೆಟ್‌ಗೆ 85 ರನ್‌ಗಳ ಜತೆಯಾಟದಲ್ಲಿ ಭಾಗಿಯಾದರು.

ಮಹೇಂದ್ರ ಸಿಂಗ್ ಧೋನಿ ಕ್ರೀಸಿಗಿಳಿದ ಪಂದ್ಯವು ಮತ್ತಷ್ಟು ರೋಚಕ ಹಂತವನ್ನು ತಲುಪಿತು. ಆದರೆ ಎಂದಿಗಿಂತಲೂ ವಿಭಿನ್ನವಾಗಿ ಆಡಿದ ರೋಹಿತ್ ಯಾವುದೇ ತರಾತುರಿಯನ್ನು ತೋರಲೇ ಇಲ್ಲ. ಅಲ್ಲದೆ ಕೆಟ್ಟ ಎಸೆತಗಳನ್ನು ಮಾತ್ರ ದಂಡಿಸಿ ಭಾರತದ ಮೇಲುಗೈಯನ್ನು ಖಾತ್ರಿಪಡಿಸಿದರು.

40 ಓವರ್‌ಗಳ ವೇಳೆಗೆ ಭಾರತದ ಸ್ಕೋರ್ 171/3. ಅಂದರೆ ಅಂತಿಮ 60 ಎಸೆತಗಳಲ್ಲಿ ಗೆಲುವಿಗೆ 57 ರನ್‌ಗಳ ಅವಶ್ಯಕತೆಯಿತ್ತು. ಅತ್ತ ಸಮಯೋಚಿತ ಇನ್ನಿಂಗ್ಸ್ ಕಟ್ಟಿದ ರೋಹಿತ್ 128 ಎಸೆತಗಳಲ್ಲಿ ಶತಕ ಸಾಧನೆ ಮಾಡಿದರು.

ಗೆಲುವಿನಂಚಿನಲ್ಲಿ ರೋಹಿತ್ ಮಗದೊಂದು ಜೀವದಾನ ಪಡೆದರು. ಇದರಿಂದಾಗಿ ದ.ಆಫ್ರಿಕಾದ ಕಳಪೆ ಫೀಲ್ಡಿಂಗ್ ಮುಂದುವರಿಯಿತು. ಈ ನಡುವೆ ಮಾಜಿ ನಾಯಕ ಧೋನಿ ಎಡವಿ ಬಿದ್ದರು. 46 ಎಸೆತಗಳನ್ನು ಎದುರಿಸಿದ ಧೋನಿ ಎರಡು ಬೌಂಡರಿಗಳಿಂದ 34 ರನ್ ಗಳಿಸಿದರು. ಅಲ್ಲದೆ ರೋಹಿತ್ ಜತೆಗೆ ನಾಲ್ಕನೇ ವಿಕೆಟ್‌ಗೆ 74 ರನ್‌ಗಳ ಜತೆಯಾಟದಲ್ಲಿ ಭಾಗಿಯಾದರು.

ಬಳಿಕ ಕ್ರೀಸಿಗಿಳಿದ ಹಾರ್ದಿಕ್ ಪಾಂಡ್ಯ ಗೆಲುವಿನ ಔಪಚಾರಿಕತೆಯ್ನು ಪೂರ್ಣಗೊಳಿಸಿದರು. 7 ಎಸೆತಗಳನ್ನು ಎದುರಿಸಿದ ಪಾಂಡ್ಯ ಮೂರು ಬೌಂಡರಿಗಳಿಂದ 15 ರನ್ ಗಳಿಸಿ ಔಟಾಗದೆ ಉಳಿದರು.

ಇನ್ನೊಂದೆಡೆ ಆರಂಭಿಕನಾಗಿ ಕಣಕ್ಕಿಳಿದು ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ ರೋಹಿತ್ 144 ಎಸೆತಗಳಲ್ಲಿ 13 ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳಿಂದ 122 ರನ್ ಗಳಿಸಿ ಅಜೇಯರಾಗುಳಿದರು. ಈ ಮೂಲಕ 2.3 ಓವರ್‌ಗಳು ಬಾಕಿ ಉಳಿದಿರುವಂತೆಯೇ 47.3 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ದಕ್ಷಿಣ ಆಫ್ರಿಕಾ ಪರ ರಬಾಡ ಎರಡು ವಿಕೆಟ್ ಕಬಳಿಸಿದರು.

Comments are closed.