ಕ್ರೀಡೆ

ಕೇಂದ್ರ ಸರ್ಕಾರ ಪಾಕಿಸ್ತಾನದ ವಿರುದ್ಧ ವಿಶ್ವಕಪ್ ಕ್ರಿಕೆಟ್ ಆಡುವುದು ಬೇಡ ಎಂದು ನಿರ್ಧರಿಸಿದರೆ ಖಂಡಿತಾ ಆಡುವುದಿಲ್ಲ: ಬಿಸಿಸಿಐ

Pinterest LinkedIn Tumblr

ಮುಂಬೈ: ಮುಂಬರುವ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಯಾವುದೇ ಕಾರಣಕ್ಕೂ ಪಾಕಿಸ್ತಾನದ ವಿರುದ್ಧ ಆಡಬಾರದು ಎಂಬ ಕೂಗು ಬಲವಾಗಿ ಕೇಳಿಬರುತ್ತಿರುವಂತೆಯೇ ಈ ವಿಚಾರಕ್ಕೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಸಿಸಿಐ ತನ್ನ ಸ್ಪಷ್ಟನೆ ನೀಡಿದೆ.

ಪುಲ್ವಾಮ ಉಗ್ರ ದಾಳಿ ಬಳಿಕ ಇಂಡೋ-ಪಾಕ್ ಕ್ರಿಕೆಟ್ ಸಂಪೂರ್ಣ ಸ್ಥಗಿತವಾಗುವ ಭೀತಿ ಎದುರಾಗಿದ್ದು, ದ್ವಿಪಕ್ಷೀಯ ಸರಣಿ ಬಿಡಿ, ವಿಶ್ವಕಪ್ ಸರಣಿಯಲ್ಲೂ ಸಾಂಪ್ರದಾಯಿಕ ಬದ್ಧ ವೈರಿಗಳ ಕದನದ ಮೇಲೆ ಕಾರ್ಮೋಡ ಕವಿದಿದೆ. ಪಾಕಿಸ್ತಾನ ತನ್ನ ಕೈಯ್ಯಾರೆ ತಾನೇ ತನ್ನ ಭವಿಷ್ಯದ ಮೇಲೆ ಕಾರ್ಮೋಡ ಎಳೆದುಕೊಂಡಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಸಿಸಿಐ, ಕೇಂದ್ರ ಸರ್ಕಾರ ಪಾಕಿಸ್ತಾನದ ವಿರುದ್ಧ ಕ್ರಿಕೆಟ್ ಆಡುವುದು ಬೇಡ ಎಂದು ನಿರ್ಧರಿಸಿದರೆ ಖಂಡಿತಾ ತಾನು ಆ ದೇಶದ ತಂಡದ ವಿರುದ್ಧ ಕ್ರಿಕೆಟ್ ಆಡುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದೆ.

ಈ ಬಗ್ಗೆ ಬಿಸಿಸಿಐ ಪದಾಧಿಕಾರಿಗಳು ತಮ್ಮ ಆಂತರಿಕ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದಾರೆ ಎನ್ನಲಾಗಿದ್ದು, ಕೇಂದ್ರ ಸರ್ಕಾರ ಕೈಗೊಳ್ಳುವ ಯಾವುದೇ ನಿರ್ಣಯಕ್ಕೆ ತಾವು ಬದ್ಧರಾಗಿರಲು ಬಿಸಿಸಿಐ ಪದಾಧಿಕಾರಿಗಳು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಅಂತೆಯೇ ಐಸಿಸಿ ವಿಶ್ವಕಪ್ ಕುರಿತೂ ಮಾಹಿತಿ ನೀಡಿರುವ ಬಿಸಿಸಿಐ, ಈಗಾಗಲೇ ವಿಶ್ವಕಪ್ ಸರಣಿಯ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಸರಣಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇವೆ. ಹೀಗಾಗಿ ಈಗಾಗಲೇ ಸರಣಿಯ ಸಿದ್ಧತಾ ಕಾರ್ಯಗಳು ಶುರುವಾಗಿದ್ದು, ಈ ಹಂತದಲ್ಲಿ ಐಸಿಸಿ ಕೂಡ ಏನೂ ಮಾಡಲು ಸಾಧ್ಯವಿಲ್ಲ. ಅಂತೆಯೇ ಭಾರತ ಸರ್ಕಾರ ನಿರ್ಣಯ ಕೈಗೊಂಡರೆ ಅದರ ಸಂಬಂಧವೂ ಐಸಿಸಿ ನಿರ್ಣಯ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.

ಅಂತೆಯೇ ವಿಶ್ವಕಪ್ ಸರಣಿ ಆರಂಭಕ್ಕೆ ಕೆಲ ತಿಂಗಳುಗಳ ಕಾಲ ಬಾಕಿ ಇದ್ದು, ಅಷ್ಟು ಹೊತ್ತಿಗಾಗಲೇ ಪರಿಸ್ಥಿತಿ ತಿಳಿಗೊಳ್ವುವ ವಿಶ್ವಾಸವನ್ನೂ ಬಿಸಿಸಿಐ ವ್ಯಕ್ತಪಡಿಸಿದೆ.

Comments are closed.