ಕರಾವಳಿ

ಹದಿನಾಲ್ಕು ರತ್ನಗಳಲ್ಲೊಂದಾದ “ಪಾರಿಜಾತ” ಹೂವಿನ ಕೆಲವು ವಿಶಿಷ್ಟ ಗುಣಗಳು

Pinterest LinkedIn Tumblr

ದೇವಾಸುರರ ‘ಸಮುದ್ರ ಮಂಥನ’ದ ಕಾಲದಲ್ಲಿ ಕ್ಷೀರ ಸಮುದ್ರದಿಂದ ಉದಿಸಿದ ಹದಿನಾಲ್ಕು ರತ್ನಗಳಲ್ಲಿ ಐದು ಕಲ್ಪವೃಕ್ಷಗಳು ಹುಟ್ಟಿದವೆಂದು ಪ್ರತೀತಿ ಇದೆ. ಅವುಗಳೆಂದರೆ ಪಾರಿಜಾತ,(ದೇವಕುಸುಮ) ಮಂದಾರ, ಸಂತಾನ, ಕಲ್ಪವೃಕ್ಷ, ಹರಿಚಂದನಗಳಾಗಿವೆ. ಸುರಭಿ ಮತ್ತು ವಾರುಣಿಯ ನಂತರ ಜನಿಸಿದ ಪಾರಿಜಾತವನ್ನು ದೇವತೆಗಳು ದೇವೇಂದ್ರನಿಗೆ ಕೊಟ್ಟರು. ಕೃಷ್ಣಾವತಾರದ ಕಾಲದಲ್ಲಿ ಕೃಷ್ಣನು ದೇವಲೋಕದಿಂದ ಪಾರಿಜಾತ ಗಿಡವನ್ನು ತಂದು ಸತ್ಯಭಾಮೆಯ ಅಂಗಳದಲ್ಲಿ ನೆಡುತ್ತಾನೆ. ಅದರ ಹೂವುಗಳು ರುಕ್ಮಿಣಿಯ ಅಂಗಳಕ್ಕೆ ಬೀಳುತ್ತಿದ್ದು, ಈ ಪ್ರಸಂಗದಲ್ಲಿ ಸತ್ಯಭಾಮೆಯಲ್ಲಿನ ಅಹಂಕಾರ ನಿರ್ಮೂಲವಾಯಿತು ಎನ್ನವುದು ಪುರಾಣದ ಸ್ವಾರಸ್ಯಕರ ಕಥೆ.

ಇನ್ನೊಂದು ಕಥೆಯ ಪ್ರಕಾರ ಪಾರಿಜಾತಕ ಎಂಬ ರಾಜಕುಮಾರಿ ಸೂರ್ಯನನ್ನು ಪ್ರೀತಿಸುತ್ತಿದ್ದಳು. ಸೂರ್ಯ ಅವಳನ್ನು ತೊರೆದಾಗ ವಿರಹದಿಂದ ಅಗ್ನಿಗೆ ಆತ್ಮಾರ್ಪಣೆ ಮಾಡಿಕೊಂಡ ಪಾರಿಜಾತಕಳ ಬೂದಿಯಿಂದ ಪಾರಿಜಾತ ಗಿಡವು ಹುಟ್ಟಿತು. ಅವಳು ಬತ್ತದ ತನ್ನ ಪ್ರೀತಿಯ ಧಾರೆಯ ಅಮೃತ ಸಿಂಚನವನ್ನು ಬೆಳಗಿನ ಸೂರ್ಯನಿಗೆ ಸಮರ್ಪಿಸುತ್ತಾಳೆ. ಸೂರ್ಯನು ಅಸ್ತಮಿಸಿದ ನಂತರ ಅರಳಿ ಸೂರ್ಯ ಬರುವ ಮೊದಲೇ ಉದುರುವ ಇದು ಸೂರ್ಯನನ್ನು ಇನ್ನೆಂದಿಗೂ ನೋಡ ಲಾರೆನೆಂಬ ಪ್ರತಿಜ್ಞೆಯನ್ನು ಇಂದಿಗೂ ಪಾಲಿಸುತ್ತಿದೆ ಎನ್ನುತ್ತಾರೆ. ಸೂರ್ಯನ ಪ್ರಖರ ಕಿರಣ ತಾಳಲಾರದೇ ಉದುರುವ ಈ ಕೋಮಲ ಹೂವಿನ ನೋವಿನ ಕಥೆಯ ಈ ಮರಕ್ಕೆ ಸೊರಗಿದ ಮರವೆಂತಲೂ ಹೆಸರಿದೆ.

ಪಾರಿಜಾತದಲ್ಲಿ ಸಾಮಾನ್ಯವಾಗಿ ಎರಡು ಬಗೆ ಕಂಡು ಬರುತ್ತದೆ. ಆರು ದಳಗಳು ಬಿಡಿಬಿಡಿ ಇದ್ದು ಹಿಂದಕ್ಕೆ ಮುದುರಿದಂತಿರುವುದು ಒಂದು ಬಗೆಯಾದರೆ, ಇನ್ನೊಂದು ದಳ ಅಗಲವಿದ್ದು ಒಂದಕ್ಕೊಂದು ಸೇರಿದಂತಿರುತ್ತದೆ. ಎಲೆಗಳ ಆಕಾರದಲ್ಲೂ ವ್ಯತ್ಯಾಸವಿದೆ ಸುವಾಸನೆ ಸೂಸುವ ಈ ಸುಂದರ ಹೂವು ಕೆಂಪು ತೊಟ್ಟು, ಬಿಳಿಯ ಮೃದುವಾದ ಎಸಳುಗಳನ್ನು ಹೊಂದಿ ಮುಟ್ಟಿದರೆ ಬಾಡುವುದೇನೋ ಎಂಬಷ್ಟು ಕೋಮಲತೆ ಹೊಂದಿದೆ.

ಬೀಜದಿಂದಲೂ ಸಸ್ಯಾಭಿವೃದ್ಧಿಯಾಗುವ ಇದನ್ನು ಮಳೆಗಾಲದಲ್ಲಿ ಗೆಲ್ಲುಗಳನ್ನು ನೆಟ್ಟು ಸಸ್ಯಾಭಿವೃದ್ಧಿ ಮಾಡಬಹುದು. ಹತ್ತರಿಂದ ಹದಿನೈದು ಅಡಿವರೆಗೆ ಬೆಳೆಯಬಲ್ಲ ಇದು ದೊಡ್ಡ ಗಿಡವಾದಷ್ಟೂ ಹೆಚ್ಚು ಹೂವು ಸುರಿಸುತ್ತದೆ. ನಿಕಾಂಥಿಸ್ ಅರ್ಬಸ್ಟ್ರಿಸ್ಟಿಸ್ ಎಂಬ ಇದರ ವೈಜ್ಞಾನಿಕ ಹೆಸರು, ‘ರಾತ್ರಿ ವೇಳೆ ಹೂವರಳಿಸುವ ದುಃಖತಪ್ತ ಮರ’ ಎಂಬ ಅರ್ಥವನ್ನು ಸೂಚಿಸುತ್ತದೆ. ಸಂಸ್ಕೃತದಲ್ಲಿ ಶೆಫಾಲಿಕಾ, ಬೆಂಗಾಲಿಯಲ್ಲಿ ಹರ್‌­ಸಿಂಗಾರ್, ಮಲಯಾಳದಲ್ಲಿ ಪವಿಳ ಮಲ್ಲಿಗೆ, ತಮಿಳಿನಲ್ಲಿ ಮಂಜು ಹೂವು ಎನ್ನುವರು.

ಸುಶ್ರುತ ಸಂಹಿತೆಯಲ್ಲಿ ಇದರ ಔಷಧಿಯ ಗುಣದ ಬಗ್ಗೆ ಹೇಳಲಾಗಿದ್ದು,
ತೊಗಟೆಯ ಕಷಾಯದಿಂದ ಗಾಯಗಳನ್ನು ತೊಳೆದರೆ ಪರಿಣಾಮಕಾರಿ,
ಎಲೆಯ ರಸ ಜಂತುಹುಳ ನಿವಾರಕ.
ಪಾರಿಜಾತ ಹಾಗೂ ತುಳಸಿಯ ಎಲೆಯ ಕಷಾಯ ಕೆಮ್ಮು ನೆಗಡಿಗೆ ಉಪಕಾರಿ.
ಹೂವು ಸುಗಂಧ ದ್ರವ್ಯ ತಯಾರಿಕೆಯಲ್ಲಿ ಉಪಯೋಗವಾಗುತ್ತದೆ. ಹಿತವಾದ ಇದರ ಕಂಪು ತೀಕ್ಷ್ಣತೆ ಇಲ್ಲದ ಇದರ ಸುಗಂಧ ತಲೆನೋವನ್ನು ಹೋಗಲಾಡಿಸುತ್ತದೆ.
ಹೂವು ಮನೆಯೊಳಗಿದ್ದರೆ ಜೇನಿನಂಥ ಪರಿಮಳದ ಅನುಭವವಾಗುತ್ತದೆ.
ಹೂವನ್ನು ಅರೆದು ಮುಖಕ್ಕೆ ಪ್ಯಾಕ್ ಹಾಕಿ ಅರ್ಧ ಗಂಟೆಯ ನಂತರ ತೊಳೆದರೆ ಮುಖ ಕೋಮಲ ಹಾಗೂ ಕಾಂತಿಯುತವಾಗುತ್ತದೆ.
ತಲೆಯಲ್ಲಾಗುವ ಗಾಯಗಳಿಗೆ ಪಾರಿಜಾತದ ಎಲೆ ದಾಸವಾಳದ ಎಲೆಯನ್ನು ಅರೆದು ಪ್ಯಾಕ್ ಹಾಕಿ ಒಂದೆರಡು ಗಂಟೆ ಬಿಟ್ಟು ತೊಳೆಯಬೇಕು.
ಹಿಂದೆ ಪಾರಿಜಾತದ ಕೆಂಪು ತೊಟ್ಟಿನಿಂದ ಬಟ್ಟೆಗೆ ಹಾಕುವ ಕಾವಿ ಬಣ್ಣವನ್ನು ತಯಾರಿಸುತ್ತಿದ್ದರು.

ಪಾರಿಜಾತದ ಹೂವು ದೇವರ ಪೂಜೆಗೆ ಬಹಳ ಶ್ರೇಷ್ಠವಾದ ಹೂವು. ಸಾಮಾನ್ಯವಾಗಿ ನೆಲದ ಮೇಲೆ ಉದುರಿದ ಹೂವನ್ನು ದೇವರಿಗೆ ಸಮರ್ಪಿಸುವುದಿಲ್ಲ. ಆದರೆ ಪಾರಿಜಾತ ಮತ್ತು ಬಕುಳದ ಹೂವಿಗೆ ಇದರಿಂದ ರಿಯಾಯಿತಿ ಇದೆ.

Comments are closed.