ಕ್ರೀಡೆ

ಈ ಇಬ್ಬರು ಇದ್ದರೆ ಈ ಸಲ ವಿಶ್ವಕಪ್ ನಮ್ದೇ: ರಿಕಿ ಪಾಂಟಿಂಗ್

Pinterest LinkedIn Tumblr


ಸಿಡ್ನಿ: ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್ ತಂಡ ಕೂಡಿಕೊಂಡರೆ, ಆಸ್ಟ್ರೇಲಿಯಾ ತಂಡವು ಖಂಡಿತವಾಗಿಯೂ ಏಕದಿನ ವಿಶ್ವಕಪ್ ತಮ್ಮಲ್ಲೇ ಉಳಿಸಿಕೊಳ್ಳಲಿದೆ ಎಂದು ಇತ್ತೀಚೆಗಷ್ಟೇ ಸಹಾಯಕ ಕೋಚ್ ಆಗಿ ನೇಮಕವಾಗಿರುವ ರಿಕಿ ಪಾಂಟಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗಷ್ಟೇ ಭಾರತ ಹಾಗೂ ದಕ್ಷಿಣ ಆಫ್ರಿಕಾ ಎದುರು ಸರಣಿ ಸೋತು ಹೈರಾಣಾಗಿರುವ ಆಸಿಸ್ ತಂಡಕ್ಕೆ ಸಹಾಯಕ ಕೋಚ್ ಆಗಿ ನೇಮಕವಾಗಿರುವ ರಿಕಿ ಪಾಂಟಿಂಗ್, ಇಂಗ್ಲೆಂಡ್’ನಲ್ಲಿ ಜರುಗಲಿರುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯ ಮತ್ತೊಮ್ಮೆ ಚಾಂಪಿಯನ್ ಪಟ್ಟಕ್ಕೇರಿಸುವ ಗುರಿ ಹೊಂದಿದ್ದಾರೆ. ಬಾಲ್ ಟ್ಯಾಂಪರಿಂಗ್ ಮಾಡಿ ಒಂದು ವರ್ಷ ನಿಷೇಧಕ್ಕೆ ಗುರಿಯಾಗಿರುವ ಡೇವಿಡ್ ವಾರ್ನರ್ ಹಾಗೂ ಸ್ಟೀವ್ ಸ್ಮಿತ್ ತಂಡ ಕೂಡಿಕೊಂಡರೆ ಆಸಿಸ್ ಬಲಿಷ್ಠವಾಗಲಿದೆ ಎಂದು ಪಾಂಟಿಂಗ್ ಹೇಳಿದ್ದಾರೆ.

ಸದ್ಯಕ್ಕೆ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಮೇಲ್ನೋಟಕ್ಕೆ ಬಲಾಢ್ಯ ತಂಡಗಳೆನಿಸಿವೆ. ಆದರೆ ಸ್ಮಿತ್-ವಾರ್ನರ್ ತಂಡ ಸೇರಿಕೊಂಡರೆ ಉಳಿದೆಲ್ಲ ತಂಡಗಳಿಗಿಂತ ಆಸ್ಟ್ರೇಲಿಯಾ ಬಲಿಷ್ಠವಾಗಲಿದೆ ಎಂದು ಪಾಂಟಿಂಗ್ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. ವಾರ್ನರ್-ಸ್ಮಿತ್ ಮೇಲಿನ ನಿಷೇಧ ಮಾರ್ಚ್ 29ಕ್ಕೆ ಅಂತ್ಯವಾಗಲಿದೆ. ಆಸಿಸ್ ಪರ 5 ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಿ ಮೂರು ಬಾರಿ ವಿಜೇತ ತಂಡದ ಸದಸ್ಯರಾಗಿ ಅನುಭವವಿರುವ ರಿಕಿ ಪಾಂಟಿಂಗ್ ಉಪಸ್ಥಿತಿ ಆಸ್ಟ್ರೇಲಿಯಾ ತಂಡಕ್ಕೆ ಇನ್ನಷ್ಟು ಆತ್ಮಸ್ಥೈರ್ಯ ತಂದುಕೊಡಬಹುದು ಎನ್ನುವ ಲೆಕ್ಕಾಚಾರದಲ್ಲಿದೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ. 2019ರ ಏಕದಿನ ವಿಶ್ವಕಪ್ ಟೂರ್ನಿಯು ಮೇ 30ರಿಂದ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಆತಿಥ್ಯ ವಹಿಸಿರುವ

ಇಂಗ್ಲೆಂಡ್ ತಂಡವು ದಕ್ಷಿಣ ಆಫ್ರಿಕಾ ಎದುರು ಸೆಣಸಲಿದೆ. ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತನ್ನ ಅಭಿಯಾನವನ್ನು ಜೂನ್ 01ರಂದು ಆಪ್ಘಾನಿಸ್ತಾನದ ವಿರುದ್ಧ ಆರಂಭಿಸಲಿದೆ.

Comments are closed.