ಕ್ರೀಡೆ

ಭಾರತ ಕ್ರಿಕೆಟ್ ತಂಡದ ನಾಯಕನಾಗಲಿದ್ದಾರೆಯೇ ರೋಹಿತ್ ಶರ್ಮಾ !

Pinterest LinkedIn Tumblr


ಹೊಸದಿಲ್ಲಿ: ಕಳೆದ 4 ವರ್ಷದಿಂದ ವಿರಾಟ್ ಕೊಹ್ಲಿ ನಾಯಕನಾಗಿ ಭಾರತ ತಂಡವನ್ನು ಮೂರು ಮಾಧರಿಯ ಕ್ರಿಕೆಟ್​ನಲ್ಲಿ ಮುನ್ನಡೆಸುತ್ತಿದ್ದು, ತಂಡದಲ್ಲಿ ಸಾಕಷ್ಟು ಬದಲಾವಣೆ ಜೊತೆ ಬೆಳವಣಿಗೆಯನ್ನು ತಂದಿದ್ದಾರೆ. ಆದರೆ ಕಳೆದ ಕೆಲ ಸಮಯಗಳಿಂದ ಕೊಹ್ಲಿ ನಾಯಕತ್ವ ಯಾಕೋ ಮಂಕಾದಂತಿದೆ. ಅದರಲ್ಲು ಇತ್ತೀಚೆಗಷ್ಟೇ ಆಂಗ್ಲರ ನಾಡಲ್ಲಿ ನಡೆದ ಏಕದಿನ ಹಾಗೂ 5 ಟೆಸ್ಟ್​ ಪಂದ್ಯಗಳ ಸರಣಿಯನ್ನು ಭಾರತ ಕೈ ಚೆಲ್ಲಿದ್ದು ಕೊಹ್ಲಿ ನಾಯಕತ್ವಕ್ಕೆ ಮತ್ತಷ್ಟು ಹೊಡೆತ ಬಿದ್ದಂತಾಗಿದೆ. ಈ ಮಧ್ಯೆ ಕೊಹ್ಲಿ ನಾಯಕತ್ವಕ್ಕೆ ಫೀಟ್ ಅಲ್ಲ ಎಂಬ ಮಾತುಗಳು ಕೂಡ ಕೇಳಿಬಂದಿದ್ದವು. ಸದ್ಯ ಇದಕ್ಕೆ ಪುಷ್ಟಿ ಎಂಬಂತೆ ಭಾರತ ಕ್ರಿಕೆಟ್ ತಂಡಕ್ಕೆ ರೋಹಿತ್ ಶರ್ಮಾ ನಾಯಕನಾಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ನಿನ್ನೆಯಷ್ಟೇ ಮುಕ್ತಾಯಗೊಂಡ 14ನೇ ಏಷ್ಯಾ ಕಪ್​ ಟೂರ್ನಿಯಲ್ಲಿ ಭಾರತ 7ನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಇದು ರೋಹಿತ್ ನಾಯಕನಾಗಿ ಸಾಧಿಸಿದ ಶ್ರೇಷ್ಠ ಸಾಧನೆಯಾಗಿದೆ. ತನ್ನ ನಾಯಕತ್ವದ ಬಗ್ಗೆ ಸ್ವತಃ ರೋಹಿತ್ ಅವರೇ ಮಾತನಾಡಿದ್ದು, ತಂಡದ ನಾಯಕತ್ವ ವಹಿಸಿಕೊಳ್ಳುವಂತಹ ಪರಿಸ್ಥಿತಿ ಬಂದರೆ ಖಂಡಿತ ನಾನು ಭಾರತ ಕ್ರಿಕೆಟ್ ತಂಡದ ನೇತೃತ್ವ ವಹಿಸಲು ತಯಾರಾಗಿದ್ದೇನೆ ಎಂದಿದ್ದಾರೆ. ಈ ಮೂಲಕ ಟೀಂ ಇಂಡಿಯಾ ಕ್ಯಾಪ್ಟನ್ ಆಗಲು ನಾನು ಸಿದ್ಧ ಎಂಬ ಸಂದೇಶ ರವಾನಿಸಿದ್ದಾರೆ.

ಇದರ ಜೊತೆ ಕೋಚ್ ರವಿ ಶಾಸ್ತ್ರಿ ಅವರು ರೋಹಿತ್ ನಾಯಕತ್ವದ ಬಗ್ಗೆ ಹಾಡಿ ಹೊಗಳಿದ್ದಾರೆ. ‘ರೋಹಿತ್ ನಾಯಕತ್ವ ಭಾರತ ತಂಡಕ್ಕೆ ಹೊಸ ಗಾಳಿ ಸಿಕ್ಕಂತಾಗಿದೆ. ಅವರದ್ದು ಶಾಂತ ಸ್ವಭಾವ. ನಾಯಕತ್ವದಲ್ಲೂ ಶಾಂತತೆ ಎದ್ದು ಕಾಣುತ್ತಿತ್ತು. ಏಷ್ಯಾ ಕಪ್​​ನಲ್ಲಿ ಬಲಿಷ್ಠ ತಂಡಗಳನ್ನು ಎದುರಿಸುವಾಗಲು ತಂಡವನ್ನು ಶಾಂತ ರೀತಿಯಲ್ಲಿ ನಿಭಾಯಿಸಿದ್ದಾರೆ’ ಎಂದು ಹೇಳಿದ್ದಾರೆ.

ಇನ್ನು ರೋಹಿತ್ ಶರ್ಮಾ ಅವರ ನಾಯಕತ್ವದ ಬಗ್ಗೆ ನೋಡುವುದಾದರೆ, ಏಕದಿನ ಕ್ರಿಕೆಟ್​ನಲ್ಲಿ ನಾಯಕನಾಗಿ ರೋಹಿತ್ ಶೇ. 87 ರಷ್ಟು ಯಶಸ್ಸು ಸಾಧಿಸಿದ್ದಾರೆ. ಅಂತೆಯೆ ಟಿ-20 ಕ್ರಿಕೆಟ್​ನಲ್ಲಿ ಶೇ. 88 ರಷ್ಟು ಪಂದ್ಯ ರೋಹಿತ್ ನಾಯಕತ್ವದಲ್ಲಿ ಜಯ ಸಾಧಿಸಿದೆ. ಇದರ ಜೊತೆ ಐಪಿಎಲ್​​​ನಲ್ಲಿ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ವಹಿಸಿದ ಬಳಿಕ ಮೂರು ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಇದನ್ನೆಲ್ಲಾ ಗಮನಿಸಿದರೆ ಭಾರತ ಕ್ರಿಕೆಟ್ ತಂಡದ ನಾಯಕನಾಗುವ ಎಲ್ಲಾ ಅರ್ಹತೆ ರೋಹಿತ್ ಶರ್ಮಾರಲ್ಲಿದೆ ಎಂಬುದು ಗೋಚರಿಸುತ್ತಿದೆ.

Comments are closed.