ಮುಂಬೈ

ಸುಳ್ಳು ಮಾಹಿತಿ ನೀಡಿ ಮಹಿಳಾ ಮಾರಾಟ ಪ್ರತಿನಿಧಿಗೆ ಥಳಿಸಿದ ಪುಂಡರ ಗುಂಪು

Pinterest LinkedIn Tumblr


ಮುಂಬಯಿ: ಸುಳ್ಳು ಮಾಹಿತಿ ನೀಡಿ ವಿವಿಧ ಬಗೆಯ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಜನಸಾಮಾನ್ಯರನ್ನು ಯಾಮಾರಿಸುತ್ತಿದ್ದಾರೆಂದು ಆರೋಪಿಸಿ ಮಹಿಳಾ ಮಾರಾಟ ಪ್ರತಿನಿಧಿಯೊಬ್ಬರನ್ನು ಸಾರ್ವಜನಿಕವಾಗಿಯೇ ಥಳಿಸಿರುವ ಘಟನೆ ಮುಂಬಯಿನಲ್ಲಿ ನಡೆದಿದೆ. ಸುಷ್ಮಾ ಪಾಂಡೆ (32) ಹಲ್ಲೆಗೊಳಗಾದ ಮಹಿಳೆ.

ಬ್ಯಾಗ್‌ನಲ್ಲಿ ವಿವಿಧ ಬಗೆಯ ವಸ್ತುಗಳನ್ನಿಟ್ಟುಕೊಂಡು ಮಾರಾಟ ಮಾಡುತ್ತಿದ್ದ ಮಹಿಳೆಯನ್ನು ಪುಂಡರ ಗುಂಪೊಂದು ಎಳೆದಾಡುತ್ತಿರುವ ದೃಶ್ಯಗಳೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಷ್ಟೇ ಅಲ್ಲದೆ, ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಬಂದರೂ ಹಲ್ಲೆಕೋರರನ್ನು ತಡೆಯುವಲ್ಲಿ ವಿಫಲರಾದರು ಎಂದು ಮಹಿಳೆ ಆರೋಪಿಸಿದ್ದಾರೆ.

ಸುಷ್ಮಾ ಪಾಂಡೆ ಸೇರಿದಂತೆ ಕೆಲ ಮಹಿಳಾ ಮಾರಾಟ ಪ್ರತಿನಿಧಿಗಳು ಮುಂಬಯಿನ ವಸಾಯ್ ಪ್ರದೇಶದಲ್ಲಿ ವಾಷಿಂಗ್ ಪೌಡರ್ ಹಾಗೂ ಸೌಂದರ್ಯ ವರ್ಧಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.

‘ನನ್ನ ಬಳಿ ಇರುವ ವಸ್ತುಗಳನ್ನು ಮಾರಾಟ ಮಾಡಲು ವಸತಿ ಸಮುಚ್ಚಯವೊಂದಕ್ಕೆ ಹೋಗಿದ್ದೆ. ಆದರೆ, ಅಲ್ಲಿ ಮಾರಾಟ ಪ್ರತಿನಿಧಿಗಳಿಗೆ ಪ್ರವೇಶವಿಲ್ಲ ಎನ್ನುವುದನ್ನು ಸ್ಥಳೀಯರು ತಿಳಿಸಿದ ಬಳಿಕ ವಾಪಸಾಗುತ್ತಿದ್ದೆ. ಈ ಸಂದರ್ಭದಲ್ಲಿ ಪುರುಷರ ಗುಂಪೊಂದು ನನ್ನ ತಡೆದು ಮಾರಾಟದ ವಸ್ತುಗಳ ಬಗ್ಗೆ ಪ್ರಶ್ನಿಸಿತು. ನನ್ನ ಬಳಿ ಇರುವ ಮಾರಾಟದ ವಸ್ತುಗಳ ಬಗ್ಗೆ ಸಮಗ್ರ ಮಾಹಿತಿ ನೀಡುತ್ತಿದ್ದೆ. ವಸ್ತುಗಳ ಬಗ್ಗೆ ಸುಳ್ಳು ಮಾಹಿತಿ ನೀಡುತ್ತಿದ್ದೀಯಾ ಎಂದು ಆರೋಪಿಸಿ ನನ್ನ ಮೇಲೆ ಹಲ್ಲೆ ಮಾಡಿದರು’ ಎಂದು ಮಹಿಳೆ ಆರೋಪಿಸಿದ್ದಾರೆ.

ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ವಸಾಯ್‌ಗಾಂವ್ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳನ್ನು ಗಮನಿಸಿ ಆರೋಪಿಗಳನ್ನು ಪತ್ತೆ ಮಾಡುವುದಾಗಿ ಭರವಸೆ ನೀಡಿದ್ದಾರೆ.

ಘಟನೆ ಖಂಡಿಸಿ ಸುಷ್ಮಾ ಪಾಂಡೆ ಸಹಿತ ನೂರಾರು ಸೇಲ್ಸ್‌ವುಮೆನ್‌ಗಳು ವಸಾಯ್‌ಗಾಂವ್ ಠಾಣೆ ಬಳಿ ಪ್ರತಿಭಟನೆ ನಡೆಸಿದ್ದು, ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

Comments are closed.