ಕ್ರೀಡೆ

ಟೀಮ್ ಇಂಡಿಯಾದ ಆಟಗಾರರ ಹೃದಯ ಗೆದ್ದ ಹಾಂಕಾಂಗ್ ಆಟಗಾರರು! ಡ್ರೆಸಿಂಗ್ ರೂಂಗೆ ತೆರಳಿ ಏನು ಮಾಡಿದ್ರು ನೋಡಿ…

Pinterest LinkedIn Tumblr

ದುಬೈ: ಏಷ್ಯಾಕಪ್ 2018ರ ಟೂರ್ನಿಯ ಮೊದಲ ಪಂದ್ಯದಲ್ಲೇ ಭಾರತ ತಂಡವನ್ನು ಸೋಲಿನ ದವಡೆಗೆ ನೂಕಿದ್ದ ಹಾಂಕಾಂಗ್ ಆಟಗಾರರ ಕೆಚ್ಚೆದೆಯ ಆಟಕ್ಕೆ ಟೀಂ ಆಟಗಾರರು ಅಕ್ಷರಶಃ ಫಿದಾ ಆಗಿದ್ದಾರೆ.

ಹೌದು.. ಮಂಗಳವಾರ ದುಬೈನಲ್ಲಿ ನಡೆದ ಏಷ್ಯಾಕಪ್ 2018 ಟೂರ್ನಿಯಲ್ಲಿ ಭಾರತದ ವಿರುದ್ಧ ಕೆಚ್ಚೆದೆಯ ಆಟವಾಡಿ 26 ರನ್ ಗಳ ವಿರೋಚಿತ ಸೋಲು ಕಂಡಿದ್ದ ಹಾಂಕಾಂಗ್ ಗೆ ಟೀಂ ಆಟಗಾರರು ಫಿದಾ ಆಗಿದ್ದಾರೆ. ಇದೇ ಕಾರಣಕ್ಕೆ ಪಂದ್ಯ ಮುಕ್ತಾಯದ ಬಳಿಕ ಅವರ ಡ್ರೆಸಿಂಗ್ ರೂಂಗೆ ತೆರಳಿ ಆಟಗಾರರು ಅವರನ್ನು ಅಭಿನಂದಿಸಿದ್ದಾರೆ. ಆ ಮೂಲಕ ಟೀಂ ಆಟಗಾರರು ಕ್ರೀಡಾ ಸ್ಫೂರ್ತಿ ಮೆರೆದಿದ್ದಾರೆ. ಪಂದ್ಯ ಮುಗಿದ ತಕ್ಷಣ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ, ತಂಡದ ನಾಯಕ ರೋಹಿತ್​ ಶರ್ಮಾ, ಆರಂಭಿಕ ಆಟಗಾರ ಶಿಖರ್​ ಧವನ್​, ದಿನೇಶ್​ ಕಾರ್ತಿಕ್​ ಸೇರಿದಂತೆ ಇತರ ಆಟಗಾರರು ಹಾಂಕಾಂಗ್​ ಆಟಗಾರರ ಡ್ರೆಸ್ಸಿಂಗ್​ ರೂಂಗೆ ತೆರಳಿ ಅವರೊಂದಿಗೆ ಮಾತುಕತೆ ನಡೆಸಿ ಅವರಿಗೆ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿದ್ದಾರೆ. ಜತೆಗೆ ಅವರೊಂದಿಗೆ ಸೆಲ್ಫಿ ಕೂಡ ತೆಗೆದುಕೊಂಡು ಸಂಭ್ರಮಿಸಿದ್ದಾರೆ.

ಶ್ರೀಲಂಕಾದಂತೆ ಮೊದಲ ಸುತ್ತಿನಲ್ಲೇ ಹೊರಬೀಳುವ ಆತಂಕ ಎದುರಿಸಿದರೂ ಕ್ರಿಕೆಟ್ ಶಿಶು ಹಾಂಕಾಂಗ್ ತಂಡದ ದಿಟ್ಟ ಹೋರಾಟವನ್ನು ಕೊನೇ ಹಂತದಲ್ಲಿ ಬಗ್ಗುಬಡಿಯುವ ಮೂಲಕ ಭಾರತ ತಂಡ ಏಷ್ಯಾಕಪ್​ನಲ್ಲಿ ಸವಾಲು ಜೀವಂತ ಇರಿಸಿಕೊಂಡಿತು. ಆದರೆ ಈ ಗೆಲುವು ಭಾರತಕ್ಕೆ ಸೋಲಿನಂತೆಯೇ ಕಂಡರೆ, ಹಾಂಕಾಂಗ್ ತಂಡಕ್ಕೆ ಸೋಲಿನಲ್ಲೂ ಗೆಲುವು ಲಭಿಸಿತು. ಈ ವೀರೋಚಿತ ಹೋರಾಟದ ಮೂಲಕ ಹಾಂಕಾಂಗ್ ಕ್ರಿಕೆಟ್ ಪ್ರೇಮಿಗಳು ಮಾತ್ರವಲ್ಲದೆ, ಟೀಮ್ ಇಂಡಿಯಾದ ಆಟಗಾರರ ಹೃದಯವನ್ನೂ ಗೆದ್ದಿತು. ಹೀಗಾಗಿ ಪಂದ್ಯದ ನಂತರ ಹಂಗಾಮಿ ನಾಯಕ ರೋಹಿತ್ ಶರ್ಮ, ಎಂಎಸ್ ಧೋನಿ ಸಹಿತ ಭಾರತ ತಂಡದ ಕೆಲ ಆಟಗಾರರು ಹಾಂಕಾಂಗ್ ತಂಡದ ಡ್ರೆಸ್ಸಿಂಗ್ ರೂಮ್ ಗೆ ತೆರಳಿ ಪರಸ್ಪರ ಆಟಗಾರರನ್ನು ಆಲಂಗಿಸಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದರು.

ಪಂದ್ಯದ ಬಳಿಕ ಹಾಂಕಾಂಗ್ ಡ್ರೆಸ್ಸಿಂಗ್ ರೂಮ್ ಗೆ ತೆರಳಿ ಯುವ ಆಟಗಾರರ ಜತೆ ಬೆರೆತ ಭಾರತ ತಂಡದ ಆಟಗಾರರು, ತಮ್ಮ ಅನುಭವವನ್ನು ಹಂಚಿಕೊಂಡರು. ಅಲ್ಲದೆ ಹಾಂಕಾಂಗ್ ಕ್ರಿಕೆಟಿಗರ ಜತೆಗೆ ಛಾಯಾಚಿತ್ರಗಳಿಗೂ ಪೋಸ್ ನೀಡಿದರು. ಧೋನಿಯನ್ನು ಶೂನ್ಯಕ್ಕೆ ಔಟ್ ಮಾಡಿ ಬೀಗಿದ್ದ ಸ್ಪಿನ್ನರ್ ಎಹಸಾನ್ ಖಾನ್, ಧೋನಿ ಜತೆಗೇ ಪೋಸ್ ನೀಡಿ ಸಂಭ್ರಮಿಸಿದರು. ‘ಈ ಕ್ಷಣಕ್ಕಾಗಿ ನಾನು 10 ವರ್ಷಗಳಿಂದ ಕಾಯುತ್ತಿದ್ದೆ. ಇದು ಕನಸು ನನಸಾದ ಕ್ಷಣ’ ಎಂದು ಎಹಸಾನ್ ಹೇಳಿದ್ದಾರೆ. ಅರ್ಹತಾ ಸುತ್ತಿನಲ್ಲಿ ಗೆದ್ದು ಏಷ್ಯಾಕಪ್ ಪ್ರಧಾನ ಹಂತಕ್ಕೇರಿದ್ದ ಹಾಂಕಾಂಗ್ ಈ ಸೋಲಿನಿಂದ ತವರಿಗೆ ನಿರ್ಗಮಿಸಿದೆ.

ಭಾರತ ತಂಡದ 286 ರನ್ ಸವಾಲಿಗೆ ದಿಟ್ಟ ಉತ್ತರವನ್ನೇ ನೀಡಿದ ಹಾಂಕಾಂಗ್ ತಂಡ ಆರಂಭಿಕರಾದ ನಿಜಾಕತ್ ಖಾನ್ (92) ಮತ್ತು ಅಂಶುಮಾನ್ ರಾತ್ (73) ಮೊದಲ ವಿಕೆಟ್​ಗೆ ಸೇರಿಸಿದ 174 ರನ್ ನೆರವಿನಿಂದ ಐತಿಹಾಸಿಕ ಗೆಲುವಿನತ್ತ ಮುನ್ನಡೆದಿತ್ತು. ಇನಿಂಗ್ಸ್​ನ 35ನೇ ಓವರ್​ನಲ್ಲಿ ಕೊನೆಗೂ ಕುಲದೀಪ್ ಯಾದವ್ (42ಕ್ಕೆ 2) ಈ ಜೋಡಿಯನ್ನು ಬೇಧಿಸಿದರು. ನಂತರ ಖಲೀಲ್ ಅಹ್ಮದ್ (48ಕ್ಕೆ 3) ಮತ್ತು ಯಜುವೇಂದ್ರ ಚಾಹಲ್ (46ಕ್ಕೆ 3) ಹಾಂಕಾಂಗ್​ಗೆ ಕಡಿವಾಣ ಹಾಕಿದರು. ಇದರಿಂದ ಹಾಂಕಾಂಗ್ 8 ವಿಕೆಟ್​ಗೆ 259 ರನ್ ಸೇರಿಸಲಷ್ಟೇ ಶಕ್ತವಾಗಿ, 26 ರನ್​ಗಳಿಂದ ಭಾರತಕ್ಕೆ ಶರಣಾಯಿತು.

ಕ್ರಿಕೆಟ್​ ಜಗತ್ತಿನಲ್ಲಿ ಈಗಷ್ಟೇ ಅಂಬೆಗಾಲಿಡುತ್ತಿರುವ ಹಾಂಕಾಂಗ್​ ಭಾರತದ ವಿರುದ್ಧದ ಪಂದ್ಯದಲ್ಲಿ ಅತ್ಯುತ್ತಮ ನಿರ್ವಹಣೆ ತೋರುವ ಮೂಲಕ ತಾವು ಮುಂದೊಂದು ದಿನ ಉತ್ತಮ ತಂಡವಾಗಿ ಬೆಳೆಯುವ ಸಾಮರ್ಥ್ಯ ಇರುವ ತಂಡ ಎಂಬ ಸೂಚನೆಯನ್ನು ರವಾನಿಸಿದೆ.

Comments are closed.