ಕರ್ನಾಟಕ

ಗಾಜಿನ ಮನೆಯಲ್ಲಿ ಕೂತಿದ್ದೀರಿ…ಈಗಿರುವ ಸರಕಾರ ನಮ್ಮದು, ಸ್ವಲ್ಪ ಎಚ್ಚರಿಕೆಯಿಂದ ಮಾತನಾಡಿ: ಬಿಎಸ್ ವೈಗೆ ಸಿಎಂ ಎಚ್ ಡಿಕೆ ಎಚ್ಚರಿಕೆ

Pinterest LinkedIn Tumblr

ಬೆಂಗಳೂರು: ಗಾಜಿನ ಮನೆಯಲ್ಲಿ ಕೂತಿದ್ದೀರಿ.. ಸ್ವಲ್ಪ ಎಚ್ಚರಿಕೆಯಿಂದ ಮಾತನಾಡಿ.. ಇದು ನಮ್ಮದೇ ಸರ್ಕಾರ, ಒಂದೇ ದಿನದಲ್ಲಿ ಏನು ಬೇಕಾದರೂ ಆಗಬಹುದು ಎಂದು ಸಿಎಂ ಕುಮಾರಸ್ವಾಮಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ವಿರುದ್ಧ ಗುಡುಗಿದ್ದಾರೆ.

ನಗರದ ಮಲ್ಲೇಶ್ವರದಲ್ಲಿರುವ ಅಪೋಲೋ ಆಸ್ಪತ್ರೆಯಲ್ಲಿ ದಾಖಲಾಗಿರುವ ಸಚಿವ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ‘ಯಡಿಯೂರಪ್ಪ ಅವರು ನನಗಿಂತಲೂ ಹಿರಿಯರು, ಪದ ಬಳಕೆಯ ಮೇಲೆ ಅವರು ನಿಗಾ ವಹಿಸಬೆಕು. ಅಪ್ಪ ಮಕ್ಕಳು ಜೈಲಿಗೆ ಹೋದವರು ಎಂದು ಈ ಹಿಂದೆ ಹೇಳಿದ್ದರು. ಆದರೆ ಹೋಗಿ ಬಂದವರು ಯಾರು ಎಂಬುದನ್ನು ತಿಳಿದುಕೊಳ್ಳಬೇಕು. ಬಿಎಸ್​ವೈ ಪರ್ಸೆಂಟೇಜ್​ ಸರ್ಕಾರದ ಜನಕ. ಅವರು ಗಾಜಿನ ಮನೆಯಲ್ಲಿ ಕುಳಿತಿದ್ದಾರೆ ಎಂದು ಎಚ್​ಡಿಕೆ ಕಿಡಿಕಾರಿದರು.

‘ನಮ್ಮ ಕುಟುಂಬವನ್ನು ಜೈಲಿಗೆ ಅಟ್ಟುವ ಕುರಿತು ಬಿಎಸ್ ವೈ ಮಾತನಾಡುತ್ತಿದ್ದಾರೆ. ಅದರೆ ಅವರು ಗಾಜಿನ ಮನೆಯಲ್ಲಿ ಕುಳಿತಿದ್ದೇನೆ ಎಂಬುದನ್ನು ಮರೆಯಬಾರದು. ನಮ್ಮ ಕುಟುಂಬದ ಬಗ್ಗೆ ಮಾತನಾಡುವಾಗ ನಾಲಿಗೆ ಹಿಡಿತದಲ್ಲಿರಲಿ. ನಾನು ಅಧಿಕಾರದಲ್ಲಿದ್ದೇನೆ, ನಮ್ಮದೇ ಸರ್ಕಾರ, ಒಂದು ದಿನದಲ್ಲಿ ಏನು ಬೇಕಾದ್ರೂ ಮಾಡಬಹುದು. ಮಾತನಾಡುವಾಗ ಬಹಳ ಎಚ್ಚರಿಕೆಯಿಂದ ಮಾತನಾಡಬೇಕು. ಹೈಕೋರ್ಟ್ ನಲ್ಲಿ ಶಿವರಾಂ ಕಾರಂತ ಬಡಾವಣೆ ಡಿನೋಟಿಫಿಕೇಷನ್ ಪ್ರಕರಣದ ವಿಚಾರಣೆ ನಡೆಯುತ್ತಿದೆ. ನಾನು ಈ ವರೆಗೂ ಸಮಾಧಾನದಿಂದ ಇದ್ದೇನೆ. ಇದನ್ನು ಅವರು ಅರ್ಥ ಮಾಡಿಕೊಳ್ಳಬೇಕು ಎಂದು ಎಚ್ ಡಿಕೆ ಹೇಳಿದರು.

ಡಿಕೆಶಿಯನ್ನು ಭೇಟಿಯಾದ ಸಿಎಂ
ಇದೇ ವೇಳೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್​ ಅವರನ್ನು ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ. ನಗರದ ಮಲ್ಲೇಶ್ವರಂನಲ್ಲಿರುವ ಅಪೋಲೋ ಆಸ್ಪತ್ರೆಗೆ ಗುರುವಾರ ಬೆಳಗ್ಗೆ ಸಿಎಂ ತೆರಳಿ ಅವರ ಆರೋಗ್ಯ ವಿಚಾರಿಸಿ ಕೆಲಕಾಲ ಮಾತುಕತೆ ನಡೆಸಿದರು. ಡಿಕೆಶಿಯನ್ನು ಭೇಟಿಯಾದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ಅವರು ಮೂರು ದಿನ ಕಲಬುರಗಿ ಪ್ರವಾಸ ಮಾಡಿದ್ದರು. ಅಲ್ಲಿನ ಆಹಾರದಿಂದಾಗಿ ಫುಡ್​ ಪಾಯ್ಸನ್​ ಆಗಿದೆ. ಅವರ ಆರೋಗ್ಯದ ಜತೆಗೆ ಬಿಜೆಪಿ ರಾಜಕೀಯದ ಬಗ್ಗೆಯೂ ಮಾತುಕತೆ ನಡೆಸಿದೆ ಎಂದು ತಿಳಿಸಿದರು. ಸಿಎಂಗೆ ಸಚಿವ ಬಂಡೆಪ್ಪ ಕಾಶಂಪುರ್​ ಸಾಥ್​ ನೀಡಿದರು.

ನಿನ್ನೆಯಷ್ಟೇ ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದ್ದ ಬಿಎಸ್ ವೈ, ಸರ್ಕಾರ ಯಾವುದೇ ಕ್ಷಣದಲ್ಲಿಯೂ ಉರುಳಬಹುದು. ಜಾರಕಿಹೊಳಿ ಸಹೋದರರ ನಡುವಿನ ಭಿನ್ನಮತದಿಂದಾಗಿ ಸರ್ಕಾರ ಅಲುಗಾಡುತ್ತಿದ್ದು, ಸರ್ಕಾರವನ್ನು ಉಳಿಸಿಕೊಳ್ಳಲು ಬಿಜೆಪಿ ಶಾಸಕರನ್ನು ಸೆಳೆಯಲು ಕಾಂಗ್ರೆಸ್ ಹಾಗೂ ಜೆಡಿಎಸ್ ಪ್ರಯತ್ನಿಸುತ್ತಿವೆ, ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಬಿಜೆಪಿ ಶಾಸಕರನ್ನು ತಮ್ಮ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದರು. ಅಲ್ಲದೆ ಸಭೆಯಲ್ಲಿ ಸಚಿವ ಸ್ಥಾನ ನೀಡುವುದಾಗಿ ಮುಖ್ಯಮಂತ್ರಿ ತಮ್ಮನ್ನು ಒತ್ತಾಯಿಸುತ್ತಿದ್ದಾರೆ ಎಂಬ ಶಾಸಕ ಸುಭಾಷ್ ಗುತ್ತೇದಾರ್ ಆರೋಪ ಕುರಿತು ಪ್ರಸ್ತಾಪಿಸಿದ ಯಡಿಯೂರಪ್ಪ, ಮುಖ್ಯಮಂತ್ರಿಯೇ ಬಿಜೆಪಿ ಶಾಸಕರನ್ನು ಸೆಳೆಯಲು ನಿಂತಿರುವುದರಿಂದ ಅಸ್ಥಿರ ಸರ್ಕಾರದ ಸ್ಪಷ್ಟ ಗೋಚರವಾಗುತ್ತಿದ್ದು ಸರ್ಕಾರ ಯಾವಾಗ ಬೇಕಾದರೂ ಪತನಗೊಳ್ಳಬಹುದು ಎಂದು ಹೇಳಿದ್ದರು. ಅಲ್ಲದೆ ಇದು ಪರ್ಸೆಂಟೇಜ್ ಸರ್ಕಾರ ಎಂದು ಕಿಡಿಕಾರಿದ್ದ ಬಿಎಸ್ ವೈ, ಅಪ್ಪಮಕ್ಕಳು ಯಾವಾಗ ಬೇಕಾದರೂ ಜೈಲು ಸೇರಬಹುದು ಎಂದು ಹೇಳಿದ್ದರು.

Comments are closed.