ಕ್ರೀಡೆ

ಚಾಂಪಿಯನ್ಸ್ ಟ್ರೋಫಿ ಬದಲು ವಿಶ್ವ ಟಿ20 ಲೀಗ್ ! ಮೊದಲ ಟೂರ್ನಿ ಭಾರತದಲ್ಲೇ ಆಯೋಜನೆ

Pinterest LinkedIn Tumblr

ಕೋಲ್ಕತಾ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ತೀವ್ರ ವಿರೋಧದ ನಡುವೆಯೇ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಐಸಿಸಿ, ಚಾಂಪಿಯನ್ಸ್ ಟ್ರೋಫಿ ಸರಣಿಯನ್ನು ಕೈಬಿಡಲು ನಿರ್ಧರಿಸಿದ್ದು, 16 ತಂಡಗಳನ್ನೊಳಗೊಂಡ ವಿಶ್ವ ಟಿ20 ಲೀಗ್ ಆಯೋಜನೆಗೆ ನಿರ್ಧರಿಸಿದೆ.

ಕೋಲ್ಕತಾದಲ್ಲಿ ನಡೆಯುತ್ತಿರುವ ಐಸಿಸಿ ಸಭೆಯಲ್ಲಿ ಇಂತಹುದೊಂದು ನಿರ್ಧಾರಕ್ಕೆ ಐಸಿಸಿ ಬಂದಿದ್ದು, 2020ರಲ್ಲಿ ನಡೆಯಬೇಕಿದ್ದ ಚಾಂಪಿಯನ್ಸ್ ಟ್ರೋಫಿ ಸರಣಿಯನ್ನು ರದ್ದು ಮಾಡಿದೆ. ಅದರ ಬದಲಿಗೆ 2021ರಲ್ಲಿ ವಿಶ್ವ ಟಿ20 ಲೀಗ್ ಆಯೋಜನೆ ಮಾಡುವುದಾಗಿ ಐಸಿಸಿ ತಿಳಿಸಿದೆ. ಅಂತೆಯೇ 2024ರಿಂದ ಪ್ರತೀ 2 ವರ್ಷಕ್ಕೊಮ್ಮೆ ವಿಶ್ವ ಟಿ20 ಲೀಗ್ (ಟಿ20 ವಿಶ್ವಕಪ್ ಟೂರ್ನಿ) ಮತ್ತು ಪ್ರತೀ ನಾಲ್ಕು ವರ್ಷಕ್ಕೊಮ್ಮೆ 50 ಓವರ್ ಗಳ ಏಕದಿನ ವಿಶ್ವಕಪ್ ಟೂರ್ನಿ ನಡೆಯಲಿದೆ ಎಂದು ಐಸಿಸಿ ಸ್ಪಷ್ಟಪಡಿಸಿದೆ.

ಪ್ರಮುಖವಾಗಿ ಇಂದು ಐಸಿಸಿ ನಿರ್ಧಾರ ಕೈಗೊಳ್ಳುವಾಗ ಬಿಸಿಸಿಐನ ಪ್ರತಿನಿಧಿಯಾಗಿದ್ದ ಅಮಿತಾಬ್ ಚೌದರಿ ಚಾಂಪಿಯನ್ಸ್ ಟ್ರೋಫಿ ಪರ ಮಾತನಾಡಿದರಾದರೂ, ಬಳಿಕ ಮಾತನಾಡಿದ ಐಸಿಸಿ ಸಿಇಒ ರಿಚರ್ಡ್ ಸನ್ ವಿಶ್ವ ಟಿ20 ಲೀಗ್ ಆಯೋಜನೆ ಸಂಬಂಧ ಸದಸ್ಯ ರಾಷ್ಟ್ರಗಳು ಅವಿರೋಧ ನಿರ್ಣಯ ಕೈಗೊಂಡಿವೆ ಎಂದು ಹೇಳಿದರು. ಇದೇ ವೇಳೆ ಭವಿಷ್ಯದ ಸರಣಿಗಳು (ಎಫ್ ಟಿಪಿ-Future Tours Progamme)ಕುರಿತು ಮಾತನಾಡಿದ ರಿಚರ್ಡ್ಸನ್ 2019ರಿಂದ 2023ರವರೆಗೂ ಸತತ ದ್ವಿಪಕ್ಷೀಯ ಸರಣಿಗಳು ಆಯೋಜನೆಯಾಗಿದ್ದು, 2 ಹಂತಗಳಲ್ಲಿ ವೇಳಾಪಟ್ಟಿ ಸಿದ್ಧಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇನ್ನು ಇತ್ತೀಚೆಗಷ್ಟೇ ಚಾಂಪಿಯನ್ಸ್ ಟ್ರೋಫಿಯನ್ನು ಟಿ20 ಲೀಗ್ ಆಗಿ ಪರಿವರ್ತಿಸುವ ಐಸಿಸಿ ನಿರ್ಧಾರಕ್ಕೆ ಬಿಸಿಸಿಐ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಹೀಗಾಗಿ ಇಡೀ ಚಾಂಪಿಯನ್ಸ್ ಟ್ರೋಫಿ ಸರಣಿಯನ್ನೇ ಐಸಿಸಿ ಕೈ ಬಿಟ್ಟಿದ್ದು, ವಿಶ್ವ ಟಿ20 ಲೀಗ್ ಗೆ ಮಣೆ ಹಾಕಿದೆ. ಐಸಿಸಿಯ ಈ ನಿರ್ಧಾರದ ಹಿಂದೆ ವಾಣಿಜ್ಯಾತ್ಮಕ ಲಾಭದ ಉದ್ದೇಶವಿದ್ದು, ಏಕದಿನ ಮಾದರಿಗಿಂತ ಟಿ20 ಮಾದರಿಯ ಕ್ರಿಕೆಟ್ ನಲ್ಲಿ ಐಸಿಸಿ ಬೊಕ್ಕಸಕೆ ಹೆಚ್ಚಿನ ಹಣದ ಹರಿವು ಇದೆ ಎಂಬುದೇ ಐಸಿಸಿ ಈ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ.

ಇದೇ ಕಾರಣಕ್ಕೆ ನಿನ್ನೆಯಷ್ಟೇ ಇದೇ ಐಸಿಸಿ ತನ್ನ ಎಲ್ಲ 104 ಸದಸ್ಯ ರಾಷ್ಟ್ರಗಳಿಗೂ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಸ್ಥಾನ ಮಾನ ನೀಡಿತ್ತು.

Comments are closed.