ಕ್ರೀಡೆ

ಕ್ರಿಸ್ ಗೇಯ್ಲ್ ಅವರ ಸಿಡಿಲಬ್ಬರದ ಬ್ಯಾಟಿಂಗ್ ! ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕಿಂಗ್ಸ್ ಇಲೆವನ್ ಪಂಜಾಬ್ ಗೆ ರೋಚಕ ಜಯ

Pinterest LinkedIn Tumblr

ಮೊಹಾಲಿ: ಮೊಹಾಲಿಯಲ್ಲಿ ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಕಿಂಗ್ಸ್ ಇಲೆವನ್ ಪಂಜಾಬ್ ತಂಡ ನಾಲ್ಕು ರನ್ ಗಳ ರೋಚಕ ಜಯ ಸಾಧಿಸಿದೆ.

ಪಂಜಾಬ್ ನೀಡಿದ್ದ 197 ರನ್ ಗಳ ಬೃಹತ್ ಮೊತ್ತದ ಗುರಿ ಬೆನ್ನು ಹತ್ತಿದ ಚೆನ್ನೈ ತಂಡ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 193 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ತೀವ್ರ ಪೈಪೋಟಿಯಿಂದ ಕೂಡಿದ್ದ ಈ ಪಂದ್ಯದಲ್ಲಿ ಚೆನ್ನೈ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ (ಅಜೇಯ 79 ರನ್) ಮತ್ತು ಅಂಬಾಟಿ ರಾಯುಡು (49 ರನ್)ಗಳ ಅಮೋಘ ಬ್ಯಾಟಿಂಗ್ ಹೊರತಾಗಿಯೂ ಚೆನ್ನೈ ತಂಡ ವಿರೋಚಿತ ಸೋಲು ಅನುಭವಿಸಿತು.

ನಿಯಮಿತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ್ದ ಚೆನ್ನೈ ತಂಡಕ್ಕ ಅಂಬಾಟಿ ರಾಯುಡು ಆಸರೆಯಾದರು. ರಾಯುಡು 49 ರನ್ ಗಳಿಸಿದ್ದಾಗ ಅಶ್ವಿನ್ ಅವರನ್ನು ರನ್ ಔಟ್ ಮಾಡಿದರು. ಬಳಿಕ ಬಂದ ಧೋನಿ ತಂಡಕ್ಕೆ ಗೆಲುವಿನ ಆಸೆ ಮೂಡಿಸಿದರು. ನಿಧಾನಗತಿಯಲ್ಲಿ ಬ್ಯಾಟಿಂಗ್ ಆರಂಭಿಸಿದರೂ ಬಳಿಕ ಲಯ ಕಂಡುಕೊಂಡ ಧೋನಿ ಕ್ರಮೇಣ ರನ್ ಗತಿ ಹೆಚ್ಚಿಸಿದರು. ನೋಡ ನೋಡುತ್ತಿದ್ದಂತೆಯೇ ಅರ್ಧಶತಕ ಸಿಡಿಸಿದ ಧೋನಿ, 5 ಸಿಕ್ಸರ್ ಮತ್ತು 6 ಬೌಂಡರಿಗಳ ಮೂಲಕ 79 ರನ್ ಗಳಿಸಿ ಅಜೇಯರಾಗಿ ಉಳಿದರು.

ಅಂತಿಮ ಹಂತದಲ್ಲಿ ಧೋನಿಗಿ ರವೀಂದ್ರ ಜಡೇಜಾ (19 ರನ್) ಸಾಥ್ ನೀಡಿದರಾದರೂ, ಅಂತ್ಯದಲ್ಲಿ ವಿಕೆಟ್ ಒಪ್ಪಿಸಿ ಹೊರ ನಡೆದರು. ಅಂತಿಮವಾಗಿ ಚೆನ್ನೈ ತಂಡ ನಿಗದಿತ 20 ಓವರ್ ಗಳಲ್ಲಿ 193 ರನ್ ಗಳನ್ನಷ್ಟೇ ಗಳಿಸಿ 4 ರನ್ ಗಳ ಅಂತರದಲ್ಲಿ ವಿರೋಚಿತ ಸೋಲು ಅನುಭವಿಸಿತು.

ಇದಕ್ಕೊ ಮೊದಲು ಬ್ಯಾಟಿಂಗ್ ಮಾಡಿದ್ದ ಪಂಜಾಬ್ ತಂಡ ಕ್ರಿಸ್ ಗೇಯ್ಲ್ ಅವರ ಸಿಡಿಲಬ್ಬರದ ಬ್ಯಾಟಿಂಗ್ (63 ರನ್), ಕೆಎಲ್ ರಾಹುಲ್ (37 ರನ್) ಉತ್ತಮ ಬ್ಯಾಟಿಂಗ್ ನೆರವಿನಿಂದ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 197 ರನ್ ಗಳಿಸಿತ್ತು.

Comments are closed.