ಕ್ರೀಡೆ

ಅಪಘಾತಗೊಂಡ ಶಮಿಯನ್ನು ಕಾಣಲು ಹಾತೊರೆಯುತ್ತಿದ್ದಾರೆ ಪತ್ನಿ ಹಸೀನ್ ಜಹಾನ್ !

Pinterest LinkedIn Tumblr

ಕೊಲ್ಕತ್ತಾ: ಕ್ರಿಕೆಟಿಗ ಮಹಮದ್ ಶಮಿ ವಿರುದ್ಧ ಅಕ್ರಮ ಸಂಬಂಧ, ದೈಹಿಕ ಹಲ್ಲೆ, ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಪತ್ನಿ ಹಸೀನ್ ಜಹಾನ್ ಈಗ ಪತಿ ಮಹಮದ್ ಶಮಿಯನ್ನು ನೋಡಲು ಹಾತೊರೆಯುತ್ತಿದ್ದಾರಂತೆ.

ಇತ್ತೀಚೆಗೆ ಕಾರು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಟೀಂ ಇಂಡಿಯಾದ ವೇಗಿ ಮಹಮ್ಮದ್​ ಶಮಿ ಅವರನ್ನು ಭೇಟಿ ಮಾಡಬೇಕು ಎಂದು ಪತ್ನಿ ಹಸೀನ್ ಜಬಹಾನ್ ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆ. ಪತಿ ಶಮಿಯ ವಿರುದ್ಧ ಕಿರುಕುಳ ಹಾಗೂ ದಾಂಪತ್ಯ ದ್ರೋಹ ಪ್ರಕರಣದಡಿಯಲ್ಲಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿ ಪತಿಯಿಂದ ದೂರ ಉಳಿದು ಕಾನೂನು ಹೋರಾಟ ನಡೆಸುತ್ತಿರುವ ಪತ್ನಿ ಹಸೀನ್​ ಜಹಾನ್, ಇದೀಗ ಪತಿಯನ್ನು ಭೇಟಿ ಮಾಡುವ ಮನಸ್ಸು ಮಾಡಿದ್ದಾರೆ.​

ಈ ಬಗ್ಗೆ ಸೋಮವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಹಸೀನ್ ಜಹಾನ್, ‘ನನ್ನ ಹೋರಾಟ ಪತಿ ನನಗೆ ಮಾಡಿದ ಅನ್ಯಾಯದ ವಿರುದ್ಧವೇ ಹೊರತು ಆತನಿಗೆ ದೈಹಿಕವಾಗಿ ನೋವುಂಟು ಮಾಡುವ ಉದ್ದೇಶವಿಲ್ಲ. ಇನ್ನೆಂದು ಅವರು ನನ್ನ ಪತ್ನಿಯಾಗಿ ಸ್ವೀಕರಿಸದೇ ಇರಬಹುದು. ಆದರೆ, ಇಂದಿಗೂ ನಾನು ಅವರನ್ನು ಪ್ರೀತಿಸುತ್ತಿದ್ದೇನೆ. ಏಕೆಂದರೆ ಅವರು ನನ್ನ ಗಂಡ’ ಎಂದು ಹೇಳಿದ್ದಾರೆ.

‘ಅವರು ಬೇಗ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ನಾನು ಮತ್ತು ನನ್ನ ಮಗಳು ಅವರನ್ನು ಭೇಟಿ ಮಾಡಲು ತುದಿಗಾಲಲ್ಲಿ ನಿಂತಿದ್ದೇವೆ. ಆದರೆ, ನಾವು ಕರೆ ಮಾಡಿದರೆ ಅವರು ಯಾವುದೇ ಉತ್ತರ ನೀಡುತ್ತಿಲ್ಲ. ಅಲ್ಲದೆ, ಅವರ ಕುಟುಂಬದವರು ಕೂಡ ಅವರಿರುವ ಸ್ಥಳದ ಬಗ್ಗೆ ಮಾಹಿತಿ ನೀಡುತ್ತಿಲ್ಲ. ನಾನು ಅಸಹಾಯಕಳಾಗಿದ್ದೇನೆ ಎಂದು ಹಸೀನ್ ಜಹಾನ್ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಕಿರುಕುಳ ಮತ್ತು ಅಕ್ರಮ ಸಂಬಂಧದ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವ ಹಸೀನ್ ಜಹಾನ್ ವಿರುದ್ಧ ಮಹಮದ್ ಶಮಿ ಕುಟುಂಬ ಅಸಮಾಧಾನಗೊಂಡಿದ್ದು, ಇದೇ ಕಾರಣಕ್ಕೆ ಶಮಿ ಭೇಟಿಗೆ ಹಸೀನ್ ಜಹಾನ್ ಗೆ ಅವಕಾಶ ನೀಡುತ್ತಿಲ್ಲ ಎನ್ನಲಾಗಿದೆ. ಅಲ್ಲದೆ ಉದ್ದೇಶ ಪೂರ್ವಕವಾಗಿಯೇ ಹಸೀನ್ ಜಹಾನ್ ಳನ್ನು ಶಮಿಯಿಂದ ದೂರವಿಡಲಾಗಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.

ಕಳೆದ ಮಾರ್ಚ್​ 24 ರಂದು ಡೆಹ್ರಾಡೂನ್​ನಿಂದ ದೆಹಲಿಗೆ ತೆರಳುವಾಗ ಶಮಿ ಅವರಿದ್ದ ಕಾರಿಗೆ ಟ್ರಕ್​ವೊಂದು ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ಗಾಯಗೊಂಡಿದ್ದ ಅವರನ್ನು ಡೆಹ್ರಾಡೂನ್​ನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಅವರಿಗೆ ಚಿಕಿತ್ಸೆ ನೀಡಿದ್ದು, ತಲೆಯ ಭಾಗಕ್ಕೆ ಹೊಲಿಗೆ ಹಾಕಲಾಗಿದೆ. ಪ್ರಸ್ತುತ ಶಮಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Comments are closed.