ಕ್ರೀಡೆ

ನಕಲಿ ಖಾತೆಯಿಂದ ಅಂಬೇಡ್ಕರ್ ಕುರಿತು ಟ್ವೀಟ್: ಸ್ಪಷ್ಟನೆ ನೀಡಿದ ಹಾರ್ದಿಕ್ ಪಾಂಡ್ಯ

Pinterest LinkedIn Tumblr

ಜೋಧ್ ಪುರ(ರಾಜಸ್ಥಾನ): ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಟೀಕಿಸಿ ಟ್ವೀಟ್ ಮಾಡಿದ ಆರೋಪವನ್ನು ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಸ್ಪಷ್ಟವಾಗಿ ತಳ್ಳಿಹಾಕಿದ್ದು, ಅದು ನಕಲಿ ಖಾತೆ. ತಮ್ಮ ಅಧಿಕೃತ ಖಾತೆ ಅಲ್ಲ ಎಂದು ಗುರುವಾರ ಸ್ಪಷ್ಟಪಡಿಸಿದ್ದಾರೆ.

ಕ್ರಿಕೆಟಿಗನ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಪ.ಜಾತಿ/ಪ.ಪಂಗಡಗಳ ವಿಶೇಷ ನ್ಯಾಯಾಲಯ ಪೋಲೀಸರಿಗೆ ಆದೇಶ ನೀಡಿದ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ ಈ ಸ್ಪಷ್ಟನೆ ನೀಡಿದ್ದಾರೆ.

ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು, ಭಾರತ ಸಂವಿಧಾನವನ್ನು ಮತ್ತು ಭಾರತದ ಹಲವು ಸಮುದಾಯಗಳನ್ನು ನಾನು ಗೌರವಿಸುತ್ತೇನೆ. ನಾನು ಯಾವುದೇ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವಂತಹ ಮತ್ತು ಅವಮಾನಕರವಾದ ಹೇಳಿಕೆ ಅಥವಾ ಟ್ವೀಟ್ ಮಾಡಿಲ್ಲ ಎಂದು ಪಾಂಡ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಮ್ಮ ಭಾವಚಿತ್ರ ಮತ್ತು ಹೆಸರು ಬಳಸಿ ನಕಲಿ ಖಾತೆಯಿಂದ ಅಂಬೇಡ್ಕರ್ ವಿರುದ್ಧ ಟ್ವೀಟ್ ಮಾಡಲಾಗಿದೆ ಎಂದು ಕ್ರಿಕೆಟಿಗ ತಿಳಿಸಿದ್ದಾರೆ.

ಡಿಸೆಂಬರ್ 26, 2017 ರಂದು ಪಾಂಡ್ಯ ಹೆಸರಿನ ಟ್ವಿಟ್ಟರ್ ಖಾತೆ ಮೂಲಕ ಅಂಬೇಡ್ಕರ್ ಅವರನ್ನು ಅವಮಾನಿಸುವಂತಹಾ ಕಮೆಂಟ್ ಒಂದನ್ನು ಹಾಕಿದ್ದರು. ಇದು ತಮ್ಮ ಸಮುದಾಯದ ಜನರ ಭಾವನೆಗಳನ್ನು ಘಾಸಿಗೊಳಿಸುತ್ತದೆ ಎಂದು ಪಾಂಡ್ಯ ವಿರುದ್ಧ ಡಿ.ಆರ್. ಮೇಘವಾಲ್ ಎಂಬುವವರು ದೂರು ನೀಡಿದ್ದರು.

“ಯಾವ ಅಂಬೇಡ್ಕರ್??? ಅಡ್ಡ ಕಾನೂನುಗಳಿರುವ ಸಂವಿಧಾನವನ್ನು ರಚಿಸಿದವರೊ ಅಥವಾ ದೇಶದ ತುಂಬೆಲ್ಲಾ ಮೀಸಲಾತಿ ಎನ್ನುವ ರೋಗ ಹರಡಲು ಕಾರಣರಾದವರೆ?” ಎಂದು ನಕಲಿ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದರು.

Comments are closed.