ಕ್ರೀಡೆ

ಶಮಿ ಪ್ರಕರಣಕ್ಕೆ ಹೊಸ ಟ್ವಿಸ್ಟ್ ! ಕೊನೆಗೂ ಮೌನ ಮುರಿದ ಪಾಕಿಸ್ತಾನ ಮೂಲದ ರೂಪದರ್ಶಿ ಅಲಿಶ್ಬಾ

Pinterest LinkedIn Tumblr

ನವದೆಹಲಿ: ಭಾರತ ಕ್ರಿಕೆಟ್ ತಂಡದ ಬೌಲರ್ ಮೊಹಮ್ಮದ್ ಶಮಿ ಅವರು ಪಾಕಿಸ್ತಾನಿ ಯುವತಿ ಅಲಿಶ್ಬಾ ಅವರಿಂದ ಹಣ ಪಡೆದಿದ್ದಾರೆ ಎಂದು ಶಮಿ ಪತ್ನಿ ಹಸೀನ್ ಜೋಹಾನ್ ಮಾಡಿರುವ ಆರೋಪದ ಬಗ್ಗೆ ಅಲಿಶ್ಬಾ ಅವರು ಮೌನ ಮುರಿದಿದ್ದಾರೆ.

‘ನಾನು ಶಮಿ ಅವರ ಅಭಿಮಾನಿ. ಅವರ ಆಪ್ತ ಸ್ನೇಹಿತೆಯಾಗಲು ಹೇಗೆ ಸಾಧ್ಯ’ ಎಂದು ಅಲಿಶ್ಬಾ ಪ್ರಶ್ನಿಸಿದ್ದಾರೆ.

ಅಲಿಶ್ಬಾ ಅವರು ಹೇಳಿರುವ ಪ್ರಕಾರ, ಇಂಗ್ಲೆಂಡ್‌ನಲ್ಲಿ 2017ರಲ್ಲಿ ನಡೆದ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ತಂಡ ಸೋತ ಬಳಿಕ ಅಲಿಶ್ಬಾ ಮತ್ತು ಶಮಿ ಅವರ ನಡುವೆ ಬಾಂಧವ್ಯ ಪ್ರಾರಂಭವಾಯಿತು.

‘ಶಮಿ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಭೇಟಿ ಮಾಡಿದೆ. ಬಳಿಕ ನಾವು ಸ್ನೇಹಿತರಾದೆವು’ ಎಂದು ಅಲಿಶ್ಬಾ ಹೇಳಿದ್ದಾರೆ. ಅಲ್ಲದೆ, ‘ನಾನು ಶಮಿ ಅವರ ಅಭಿಮಾನಿ. ಅವರ ಆಪ್ತ ಸ್ನೇಹಿತೆಯಾಗಲು ಹೇಗೆ ಸಾಧ್ಯ? ಅವರಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಅದರಲ್ಲಿ ನಾನೊಬ್ಬ ಸಾಮಾನ್ಯ ಅಭಿಮಾನಿ. ನಾನೂ ಅವರಿಗೆ ಸಂದೇಶಗಳನ್ನು ಮಾತ್ರ ಕಳುಹಿಸಿದ್ದೆ’ ಎಂದು ಹೇಳಿದ್ದಾರೆ.

‘ಸಾಮಾನ್ಯ ಮನುಷ್ಯಳಾಗಿ ನಾನು ಅವರನ್ನು ಬಹಳ ಇಷ್ಟಪಡುತ್ತೇನೆ. ತಮ್ಮ ಇಷ್ಟದ ಸೆಲೆಬ್ರಿಟಿಯನ್ನು ಆರಾಧಿಸುವ ಪ್ರತಿಯೊಬ್ಬರೂ ಅವರನ್ನು ಜೀವನದಲ್ಲಿ ಒಮ್ಮೆಯಾದರೂ ಭೇಟಿಯಾಗಬೇಕು ಎಂದು ಕನಸು ಕಾಣುತ್ತಾರೆ. ಅವರ ಮೇಲೆ ನನಗೆ ಬಹಳ ಅಭಿಮಾನವಿದೆ. ನಮ್ಮಿಬ್ಬರ ನಡುವೆ ಸಾಮಾನ್ಯ ಮಾತುಕತೆ ನಡೆದಿದೆಯಷ್ಟೆ’ ಎಂದು ಅಲಿಶ್ಬಾ ಹೇಳಿದ್ದಾರೆ.

‘ಶಮಿ ವಿವಾಹೇತರ ಸಂಬಂಧ ಹೊಂದಿದ್ದಾರೆ. ನನ್ನನ್ನು ಹೆಂಡತಿಯಾಗಿ ಕಂಡಿಲ್ಲ ಎಂದು ಆರೋಪಿಸಿ’ ಅವರ ಪತ್ನಿ ಹಸೀನ್ ಜಹಾನ್ ದೂರು ದಾಖಲಿಸಿದ್ದರು. ಅಲ್ಲದೇ ಇಂಗ್ಲೆಂಡ್ ಮೂಲದ ಉದ್ಯಮಿ ‘ಮೊಹಮದ್ ಭಾಯ್’ ಎನ್ನುವವರ ಸೂಚನೆಯ ಮೇರೆಗೆ ಪಾಕಿಸ್ತಾನದ ಯುವತಿ ‘ಅಲಿಶ್ಬಾ’ ಎನ್ನುವವರಿಂದ ಶಮಿ ಹಣ ಪಡೆದುಕೊಂಡಿದ್ದಾರೆ ಎಂದೂ ಜಹಾನ್ ಆರೋಪ ಮಾಡಿದ್ದರು.

ಈ ಆರೋಪದ ಬಗ್ಗೆ ಶಮಿ ವಿರುದ್ಧ ತನಿಖೆ ನಡೆಸಬೇಕು ಎಂದು ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ದಳದ (ಎಸಿಯು) ಮುಖ್ಯಸ್ಥ ನೀರಜ್ ಕುಮಾರ್​ಗೆ ಆಡಳಿತಾಧಿಕಾರಿಗಳ ಸಮಿತಿ (ಸಿಒಎ) ಅಧ್ಯಕ್ಷ ವಿನೋದ್ ರಾಯ್ ಸೂಚನೆ ನೀಡಿದ್ದರು.

Comments are closed.