ಸೆಂಚೂರಿಯನ್: ವಿಶ್ವವಿಖ್ಯಾತ ಆಟಗಾರರೊಂದಿಗೆ ನನ್ನನ್ನು ಹೋಲಿಸಬೇಡಿ ಎಂದು ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮನವಿ ಮಾಡಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಏಕದಿನ ಪಂದ್ಯದಲ್ಲಿ ಭಾರತ 5-1 ಅಂತರದಿಂದ ಗೆಲುವು ಸಾಧಿಸಿದೆ. ಕೊಹ್ಲಿ 3 ಸೆಂಚುರಿ ಸೇರಿದಂತೆ 558 ರನ್‍ಗಳನ್ನು ಗಳಿಸಿರುವುದರಿಂದ, ಅವರನ್ನು ಖ್ಯಾತ ಬ್ಯಾಟ್ಸ್ ಮನ್ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ನಾನು ನಾನಾಗಿಯೇ ಇರುತ್ತೇನೆ. ನನ್ನನ್ನು ಯಾವುದೇ ವಿಶ್ವದರ್ಜೆಯ ಅತ್ಯುತ್ತಮ ಬ್ಯಾಟ್ಸ್ ಮೆನ್ ಗಳಿಗೆ ಹೋಲಿಕೆ ಮಾಡಬೇಡಿ ಎಂದಿದ್ದಾರೆ.
ನಾನು ಬ್ಯಾಟ್ ಹಿಡಿದು ಮೈದಾನಕ್ಕಿಳಿದಾಗ ಯಾವ ರೀತಿಯ ಆಟ ಆಡಬೇಕು, ನನ್ನ ಗೇಮ್‍ಪ್ಲಾನ್ ಏನು ಎಂಬುದನ್ನು ಮನ ದಟ್ಟು ಮಾಡಿಕೊಂಡು ಆಟ ಆನಂದಿಸುತ್ತ ಆಡುತ್ತೇನೆ. ಅದೇ ನನ್ನ ಗೆಲುವಿನ ಗುಟ್ಟು. ನಾನು ನನ್ನ ತಂಡದ ಗೆಲುವಿಗಾಗಿ ಆಡುತ್ತೇನೆ ಅಷ್ಟೆ. ನಾನು ಚೆನ್ನಾಗಿ ಆಡಿದಾಗ ಹೆಡ್‍ಲೈನ್ಸ್ ಮಾಡುತ್ತಾರೆ. ಆದರೆ, ಮುಂದಿನ ಪಂದ್ಯದಲ್ಲಿ ಕಳಪೆ ಆಟ ಆಡಿದರೆ ಹೀಯಾ ಳಿಸುವುದು ತಪ್ಪುವುದಿಲ್ಲ.
ನನ್ನನ್ನು ಹೀಯಾಳಿಸಿದವರೇ ಹೆಚ್ಚು. ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಚೆನ್ನಾಗಿ ಆಡಿದಾಗ ಹೊಗಳುತ್ತಾರೆ. ಅದಕ್ಕೆ ನಾನು ಬೆಲೆ ಕೊಡುವುದಿಲ್ಲ. ನನ್ನ ಆಟ ನಾನು ಆಡುತ್ತೇನೆ ಎಂದು ಖಡಕ್ ಉತ್ತರ ನೀಡಿದ್ದಾರೆ.