ರಾಮನಗರ: ಕಾವೇರಿ ನದಿ ನೀರಿನ ಹಂಚಿಕೆಗೆ ಕುರಿತಾಗಿ ಸುಪ್ರೀಂ ಕೋರ್ಟ್ ತೀರ್ಪಿಗೆ ಪ್ರತಿಯಾಗಿ ನಟ ರಜನಿಕಾಂತ್ ನೀಡಿರುವ ಹೇಳಿಕೆಗೆ ರಾಜ್ಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದು, ರೆಬೆಲ್ ಸ್ಟಾರ್ ಅಂಬರೀಷ್ ಸಹ ತಿರುಗೇಟು ನೀಡಿದ್ದಾರೆ.
ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ರಜನಿಕಾಂತ್ ಹೇಳಿಕೆ ಖಂಡಿಸಿ, ಕನ್ನಡ ಸಂಘಟನೆಗಳ ಕಾರ್ಯಕರ್ತರು ರಜನಿಕಾಂತ್ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದ್ದರು. ರಜನಿಕಾಂತ್ ಹೇಳಿಕೆಗೆ ಶಾಸಕ ಹಾಗೂ ಹಿರಿಯ ನಟ ರೆಬಲ್ ಸ್ಟಾರ್ ಅಂಬರೀಶ್ ತಿರುಗೇಟು ನೀಡಿದ್ದಾರೆ.
ಸುಪ್ರೀಂ ಕೋರ್ಟ್ ತ್ರಿಸದಸ್ಯ ನೀಡಿರುವ ತೀರ್ಪಿನಿಂದ ತಮಿಳುನಾಡು ರೈತರಿಗೆ ಅನ್ಯಾಯವಾಗಿದೆ. ರೈತರಿಗೆ ಮಾರಕವಾಗಿರುವ ತೀರ್ಪು ಪುನರ್ ಪರಿಶೀಲನೆಗೆ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಅರ್ಜಿ ಸಲ್ಲಿಸಬೇಕೆಂದು ರಜನಿಕಾಂತ್ ಹೇಳಿರುವುದಕ್ಕೆ ಅಂಬರೀಶ್ ಖಾರವಾದ ಪ್ರತಿಕ್ರಿಯೆ ನೀಡಿದ್ದಾರೆ. ಕೋರ್ಟ್ ಗೆ ಹೋಗಿ ಮೇಲ್ಮನವಿ ಸಲ್ಲಿಸಲಿ ಆಗ ಗೊತ್ತಾಗುತ್ತದೆ ಎಂದು ಅಂಬರೀಷ್ ಮಾರ್ಮಿಕವಾಗಿ ನುಡಿದಿದ್ದಾರೆ. ಅಷ್ಟೇ ಅಲ್ಲ, ಮೂಲತಃ ಕನ್ನಡಿಗರಾದ ರಜನೀಕಾಂತ್ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.