ಕ್ರೀಡೆ

ಟೀಂ ಇಂಡಿಯಾ ಮ್ಯಾನೇಜರ್ ಆಗಿ ಕನ್ನಡಿಗ, ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಆಯ್ಕೆ?

Pinterest LinkedIn Tumblr


ಮುಂಬೈ: ಮಹತ್ವದ ಬೆಳವಣಿಗೆಯಲ್ಲಿ ಟೀಂ ಇಂಡಿಯಾ ಮ್ಯಾನೇಜರ್ ಹುದ್ದೆಗೆ ಮಾಜಿ ಕ್ರಿಕೆಟಿಗ ಹಾಗೂ ಕರ್ನಾಟಕದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಸಂದರ್ಶನ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಸುದ್ದಿಸಂಸ್ಥೆಯೊಂದು ವರದಿ ಮಾಡಿರುವಂತೆ ಕೋಚ್ ರವಿಶಾಸ್ತ್ರಿ ನೇಮಕದ ಬಳಿಕ ನೆನೆಗುದಿಗೆ ಬಿದ್ದಿದ್ದ ಟೀಂ ಇಂಡಿಯಾ ಮ್ಯಾನೇಜರ್ ಹುದ್ದೆಯ ಆಯ್ಕೆಗೆ ಸಂಬಂಧಿಸಿದಂತೆ ಬಿಸಿಸಿಐ ಸಂದರ್ಶನ ನಡೆಸಿದ್ದು, ಈ ಸಂದರ್ಶನಕ್ಕೆ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಹಾಜರಾಗಿದ್ದರು ಎಂದು ಹೇಳಲಾಗಿದೆ. ವಿಶೇಷವೆಂದರೆ ಮ್ಯಾನೇಜರ್ ಹುದ್ದೆಗೆ ಬಿಸಿಸಿಐ ನಡೆಸಿದ ಸಂದರ್ಶನಕ್ಕೆ ಹಾಜರಾದ ಏಕೈಕ ವ್ಯಕ್ತಿ ವೆಂಕಟೇಶ್ ಪ್ರಸಾದ್ ಎಂದು ಹೇಳಲಾಗಿದೆ. ಹೀಗಾಗಿ ಟೀಂ ಇಂಡಿಯಾ ಜನರಲ್ ಮ್ಯಾನೇಜರ್ ಆಗಿ ವೆಂಕಟೇಶ್ ಪ್ರಸಾದ್ ಆಯ್ಕೆ ಖಚಿತ ಎಂದೂ ಹೇಳಲಾಗುತ್ತಿದೆ.

ಈ ಹಿಂದೆ ಟೀಂ ಇಂಡಿಯಾ ಕೋಚ್ ಹುದ್ದೆಗೆ ಆಯ್ಕೆ ನಡೆದ ಸಂದರ್ಭದಲ್ಲಿ ವೆಂಕಟೇಶ್ ಪ್ರಸಾದ್ ಅವರ ಹೆಸರು ಬಲವಾಗಿ ಕೇಳಿಬಂದಿತ್ತು. ಆದರೆ ಕಾರಣಾಂತರಗಳಿಂದ ಪ್ರಸಾದ್ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲಾಗಲಿಲ್ಲ. ಇದೀಗ ಮತ್ತೆ ಪ್ರಸಾದ್ ಟೀಂ ಇಂಡಿಯಾ ಬಳಗ ಸೇರುವ ಕಾಲ ಸನ್ನಿಹಿತವಾಗಿದ್ದು, ತಂಡದ ಮ್ಯಾನೇಜರ್ ಆಗಿ ಟೀಂ ಇಂಡಿಯಾ ನಿರ್ವಹಣೆಯಲ್ಲಿ ಕೋಚ್ ರವಿಶಾಸ್ತ್ರಿ ಅವರಿಗೆ ಸಾಥ್ ನೀಡಲಿದ್ದಾರೆ.

ತ್ರಿಮೂರ್ತಿಗಳ ಫೇವರಿಟ್ ಆಗಿದ್ದ ವೆಂಕಿ
ಇನ್ನು ಈ ಹಿಂದೆ ಟೀಂ ಇಂಡಿಯಾ ಕೋಚ್ ಆಗಿದ್ದ ಅನಿಲ್ ಕುಂಬ್ಳೆ ತಮ್ಮ ಸ್ಥಾನ ತೊರೆದ ಬಳಿಕ ವೆಂಕಟೇಶ್ ಪ್ರಸಾದ್ ಅವರನ್ನು ಕೋಚ್ ಆಗಿ ಆಯ್ಕೆ ಮಾಡಬಹುದು ಎಂದು ಹೇಳಲಾಗುತ್ತಿತ್ತು. ಆ ಸಂದರ್ಭದಲ್ಲಿ ಸ್ವತಃ ಭಾರತ ಕ್ರಿಕೆಟ್ ತಂಡದ ತ್ರಿಮೂರ್ತಿ ಸಲಹೆಗಾರರಾಗಿದ್ದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಹಾಗೂ ವಿವಿಎಸ್ ಲಕ್ಷ್ಮಣ್ ಅವರು ವೆಂಕಟೇಶ್ ಪ್ರಸಾದ್ ಅವರ ಪರ ಒಲವು ಹೊಂದಿದ್ದರು. ಆದರೆ ಕೊನೆಯ ಕ್ಷಣದಲ್ಲಿ ವೆಂಕಿ ಹಿಂದೆ ಸರಿದಿದ್ದರಿಂದ ರವಿಶಾಸ್ತ್ರಿ ಅವರ ಹಾದಿ ಸುಗಮವಾಗಿತ್ತು ಎಂದು ಹೇಳಲಾಗಿದೆ.

ಒಟ್ಟಾರೆ ಈ ಹಿಂದೆ ತಂಡದ ಬೌಲಿಂಗ್ ಕೋಚ್ ಅಗಿದ್ದ ಪ್ರಸಾದ್ ಮತ್ತೆ ಮ್ಯಾನೇಜರ್ ರೂಪದಲ್ಲಿ ಮತ್ತೆ ತಂಡಕ್ಕೆ ವಾಪಸ್ ಆದರೆ ಭಾರತ ಕ್ರಿಕೆಟ್ ತಂಡದ ಸಾಮರ್ಥ್ಯ ಮತ್ತಷ್ಟು ಹೆಚ್ಚುವುದರಲ್ಲಿ ಎರಡು ಮಾತಿಲ್ಲ.

Venkatesh Prasad has given interview for post of General manager (cricket operations): BCCI Sources
— ANI (@ANI) November 2, 2017

Comments are closed.