ಕ್ರೀಡೆ

ಗೆದ್ದದ್ದು ಭಾರತ, ಅಗ್ರಸ್ಥಾನ ಮಾತ್ರ ಪಾಕಿಸ್ತಾನಕ್ಕೆ!

Pinterest LinkedIn Tumblr


ನವದೆಹಲಿ: ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ 53 ರನ್ ಗಳ ಭರ್ಜರಿ ಜಯಸಾಧಿಸುತ್ತಿದ್ದಂತೆಯೇ ಅತ್ತ ಪಾಕಿಸ್ತಾನ ತಂಡ ಟಿ20 ರ್ಯಾಂಕಿಂಗ್ ನಲ್ಲಿ ಅಗ್ರ ಸ್ಥಾನಕ್ಕೇರಿದೆ..

ಅರೆ ಇದೇನಿದು…ಗೆದ್ದಿದ್ದು ಭಾರತವಾದರೆ ಪಾಕಿಸ್ತಾನಕ್ಕೆ ಅಗ್ರ ಸ್ಥಾನವೇ ಎಂದು ನೀವು ಹೇಳುವುದು ಸಹಜ.. ಆದರೆ ಇದಕ್ಕೆ ಕಾರಣ ತಂಡಗಳ ಅಂಕಗಳ ಬಲಾಬಲ..ಹೌದು..ಭಾರತದ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ 125 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿತ್ತು. 124 ಅಂಕಗಳಿಸಿದ್ದ ಪಾಕಿಸ್ತಾನ ಎರಡನೇ ಸ್ಥಾನದಲ್ಲಿತ್ತು. ಆದರೆ ಇಂದಿನ ಭಾರತದ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ 53 ರನ್ ಗಳ ಹೀನಾಯ ಸೋಲು ಕಾಣುವದರೊಂದಿಗೆ ರ್ಯಾಂಕಿಂಕ್ ಪಟ್ಟಿಯಲ್ಲಿ ತನ್ನ ನಾಲ್ಕು ಅಂಕಗಳನ್ನು ಕಳೆದುಕೊಳ್ಳುವುದಷ್ಚೇ ಅಲ್ಲದೇ ಅಗ್ರ ಸ್ಥಾನದಿಂದ 2ನೇ ಸ್ಥಾನಕ್ಕೆ ಕುಸಿದಿದೆ.

ಇನ್ನು ಇಂದಿನ ಪಂದ್ಯದ ಗೆಲುವಿನೊಂದಿಗೆ 2 ಅಂಕಗಳನ್ನು ತನ್ನ ಖಾತೆಗೆ ಹಾಕಿಕೊಂಡಿರುವ ಭಾರತ ಅಂಕಗಳಿಕೆಯನ್ನು 118ಕ್ಕೆ ಏರಿಸಿಕೊಂಡಿದ್ದು, ರ್ಯಾಂಕಿಂಗ್ ಪಟ್ಟಿಯಲ್ಲಿ ಇಂಗ್ಲೆಂಡ್ ತಂಡಕ್ಕೆ ತೀವ್ರ ಪೈಪೋಟಿ ನೀಡುತ್ತಿದೆ. ಪ್ರಸ್ತುತ ಇಂಗ್ಲೆಂಡ್ ತಂಡ 119 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದ್ದು, 118 ಅಂಕಗಳಿಸಿರುವ ಭಾರತ 5ನೇ ಸ್ಥಾನದಲ್ಲಿದೆ. ಉಳಿದಂತೆ 120 ಅಂಕಗಳೊಂದಿಗೆ ವೆಸ್ಟ್ ಇಂಡೀಸ್ ತಂಡ 3ನೇ ಸ್ಥಾನದಲ್ಲಿ ಮುಂದುವರೆದಿದೆ. ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳು ತಲಾ 111 ಅಂಕಗಳೊಂದಿಗೆ 6 ಮತ್ತು 7ನೇ ಸ್ಥಾನದಲ್ಲಿ ಮುಂದುವರೆದಿವೆ.

ಇನ್ನು ಪ್ರಸ್ತುತ ದ್ವಿತೀಯ ಸ್ಥಾನಕ್ಕೆ ಕುಸಿದಿರುವ ನ್ಯೂಜಿಲೆಂಡ್ ಭಾರತದ ವಿರುದ್ಧದ ಮುಂದಿನ 2 ಪಂದ್ಯಗಳನ್ನು ಜಯಿಸಿದರೆ ಮತ್ತೆ ಅಗ್ರ ಸ್ಥಾನಕ್ಕೇರುವ ಸಾಧ್ಯತೆ ಇದೆ. ಇದೇ ನವೆಂಬರ್ 4 ರಂದು ಮತ್ತು ದಿನಾಂಕ 7ರಂದು ಕ್ರಮವಾಗಿ ರಾಜ್ ಕೋಟ್ ಮತ್ತು ತಿರುವನಂತಪುರಂ ನಲ್ಲಿ ಮುಂದಿನ ಪಂದ್ಯಗಳು ನಡೆಯಲಿವೆ.

Comments are closed.