ಕ್ರೀಡೆ

ಮತ್ತೊಂದು ಗ್ರಾಮ ದತ್ತು ಪಡೆದ ಸಚಿನ್ ತೆಂಡೂಲ್ಕರ್!

Pinterest LinkedIn Tumblr


ಮುಂಬೈ: ಭಾರತದ ಕ್ರಿಕೆಟ್ ದಂತಕಥೆ ಹಾಗೂ ರಾಜ್ಯಸಭಾ ಸದಸ್ಯ ಸಚಿನ್ ತೆಂಡೂಲ್ಕರ್ ಅವರು ಸಂಸದರ ಆದರ್ಶ ಗ್ರಾಮ ಯೋಜನೆಯಡಿಯಲ್ಲಿ ಮತ್ತೊಂದು ಗ್ರಾಮವನ್ನು ದತ್ತು ತೆಗೆದುಕೊಂಡಿದ್ದಾರೆ.
ಈ ಹಿಂದೆ ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯ ಪುಟ್ಟಮರಾಜು ಕಂಡ್ರಿಗಾ ಎಂಬ ಕುಗ್ರಾಮವನ್ನು ದತ್ತು ಪಡೆದಿದ್ದ ಸಚಿನ್ ತೆಂಡೂಲ್ಕರ್ ಅವರು ಹಳ್ಳಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಸುಧಾರಿಸುವ ಮೂಲಕ ಇತರ ಸಂಸದರಿಗೆ ಆದರ್ಶವಾಗಿ ನಿಂತಿದ್ದರು. ಇದೀಗ ತಮ್ಮ ಖಾತೆಗೆ ಸಚಿನ್ ತೆಂಡೂಲ್ಕರ್ ಮತ್ತೊಂದು ಗ್ರಾಮವನ್ನು ಸೇರಿಸಿಕೊಂಡಿದ್ದು, ಈ ಬಾರಿ ತಮ್ಮ ತವರು ರಾಜ್ಯ ಮಹಾರಾಷ್ಟ್ರದ ಉಸ್ಮಾನಾಬಾದ್ ನ ಡೋಂಜಾ ಗ್ರಾಮವನ್ನು ದತ್ತು ಪಡೆದಿದ್ದಾರೆ.
ಈ ಗ್ರಾಮಕ್ಕೆ ಈಗಾಗಲೇ ಸಚಿನ್ ತೆಂಡೂಲ್ಕರ್ ಅವರು ಎಂಪಿಲಾಡ್ ಯೋಜನೆಯಡಿಯಲ್ಲಿ ತಮ್ಮ ಸಂಸದರ ನಿಧಿಯಿಂದ ಸುಮಾರು 4 ಕೋಟಿ ರು.ಹಣವನ್ನು ಬಿಡುಗಡೆ ಮಾಡಿದ್ದಾರೆ. ಈ ಹಣದಿಂದ ಗ್ರಾಮದಲ್ಲಿ ಒಳಚರಂಡಿ ಪೈಪ್ ಲೈನ್ ಅಳವಡಿಕೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಅವಸಾನದಡಿಯಲ್ಲಿರುವ ಶಾಲಾ ಕಟ್ಟಡಗಳ ಪುನರ್ ನಿರ್ಮಾಣ, ಹೊಸ ಶಾಲೆಗಳ ನಿರ್ಮಾಣ ಮತ್ತು ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಬಳಕೆ ಮಾಡಲಾಗುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
610 ಮನೆಗಳಲ್ಲಿರುವ ಡೊಂಜಾ ಗ್ರಾಮದಲ್ಲಿ ಸುಮಾರ 400 ಮನೆಗಳಲ್ಲಿ ಶೌಚಾಲಯವೇ ಇರಲಿಲ್ಲ. ಆದರೆ ಸಚಿನ್ ತೆಂಡೂಲ್ಕರ್ ಅವರು ಈ ಗ್ರಾಮವನ್ನು ದತ್ತು ತೆಗೆದುಕೊಂಡ ಮೇಲೆ ಈ ವರೆಗೂ 400 ಮನೆಗಳ ಪೈಕಿ ಈಗಾಗಲೇ 231 ಮನೆಗಳಲ್ಲಿ ಶೌಚಾಲಯ ನಿರ್ಮಿಸಿ ಬಳಕೆ ಕೂಡ ಮಾಡಲಾಗುತ್ತಿದೆ. ಅಲ್ಲದೆ ಡೊಂಜಾ ಗ್ರಾಮದ ನಿವಾಸಿಗಳಿಗೆ ಬ್ಯಾಂಕಿಂಗ್ ಸೌಲಭ್ಯ ನೀಡಲು ಆಕ್ಸಿಜೆನ್ ಫೈನಾನ್ಶಿಯಲ್ ಸರ್ವೀಸ್ ಸಂಸ್ಥೆ ಮುಂದೆ ಬಂದಿದ್ದು, ಒಂದು ಎಟಿಎಂ ಕೇಂದ್ರ ಸ್ಥಾಪನೆಗೆ ಮುಂದಾಗಿದೆ.
ಅಂತೆಯೇ ಉಸ್ಮಾನಾಬಾದ್ ಜಿಲ್ಲಾಧಿಕಾರಿಗಳು ಈ ಅಭಿವೃದ್ಧಿ ಕಾರ್ಯಗಳ ವೀಕ್ಷಣೆಯಲ್ಲಿ ತೊಡಗಿದ್ದು, ಜಿಲ್ಲಾಡಳಿತದಿಂದ ಸಚಿನ್ ಅವರಿಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.

Comments are closed.