
ಚೆನ್ನೈ: ಅತ್ತ ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ಶಶಿಕಲಾ ಜೈಲು ಪಾಲಾಗುತ್ತಿದ್ದಂತೆಯೇ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಹಂಗಾಮಿ ಸಿಎಂ ಪನ್ನೀರ್ ಸೆಲ್ವಂ ಅವರನ್ನು ವಜಾಗೊಳಿಸಲಾಗಿದೆ.
ಸುಪ್ರೀಂ ಕೋರ್ಟ್ ತೀರ್ಪಿನ ತೀರ್ಪು ಹೊರ ಬೀಳುತ್ತಿದ್ದಂತೆಯೇ ಕೂವತ್ತೂರಿನಲ್ಲಿರುವ ಗೋಲ್ಡನ್ ಬೇ ರೆಸಾರ್ಟ್ ನಲ್ಲಿ ಬೆಂಬಲಿತ ಶಾಸಕರೊಂದಿಗೆ ಸತತ ಸಭೆ ನಡೆಸುತ್ತಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ಶಶಿಕಲಾ, ತಮ್ಮ ವಿರುದ್ಧ ಬಂಡಾಯವೆದ್ದಿರುವ ಪನ್ನೀರ್ ಸೆಲ್ವಂ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ವಜಾಗೊಳಿಸಿದ್ದಾರೆ. ಅಲ್ಲದೆ ಎಐಎಡಿಎಂಕೆ ಶಾಸಕಾಂಗ ಪಕ್ಷದ ನಾಯಕರಾಗಿ ಜಯಾ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಎಡಪ್ಪಾಡಿ ಕೆ ಪಳನಿ ಸ್ವಾಮಿ ಅವರನ್ನು ಆಯ್ಕೆ ಮಾಡಿದ್ದಾರೆ.
ಆ ಮೂಲಕ ತಮ್ಮ ವಿರುದ್ಧ ಬಂಡಾಯವೆದ್ದಿರುವ ಪನ್ನೀರ್ ಸೆಲ್ವಂ ಅವರನ್ನು ಸಂಪೂರ್ಣವಾಗಿ ಪಕ್ಷದಿಂದ ಹೊರ ಹಾಕುವ ಬಗ್ಗೆ ಶಶಿಕಲಾ ತೀರ್ಮಾನ ಕೈಗೊಂಡಿದ್ದಾರೆ. ಅಂತೆಯೇ ಕೇವಲ ಪನ್ನೀರ್ ಸೆಲ್ವಂ ಮಾತ್ರವಲ್ಲದೇ ಅವರಿಗೆ ಬೆಂಬಲ ಘೋಷಣೆ ಮಾಡಿದ್ದ 11 ಸಂಸದರು ಮತ್ತು 20 ಮಂದಿ ಶಾಸಕರನ್ನೂ ಕೂಡ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಸಿಎಂ ಸ್ಥಾನಕ್ಕೆ ಜಯಾ ಸಂಬಂಧ ಜೆ.ದೀಪಕ್?
ಇದೇ ವೇಳೆ ಶಶಿಕಲಾ ಅನುಪಸ್ಥಿತಿಯಲ್ಲಿ ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿ ಯಾರಿಗೆ ನೀಡಬೇಕು ಎನ್ನುವ ಕುರಿತು ಭಾರಿ ಚರ್ಚೆಗಳು ನಡೆದಿದ್ದು, ಈ ವೇಳೆ ಶಶಿಕಲಾ, ನಟರಾಜನ್ ಅಥವಾ ಅವರ ಸಹೋದರ ಪಕ್ಷವನ್ನು ಮುನ್ನಡೆಸಬೇಕು ಎಂದು ಶಾಸಕರು ಆಗ್ರಹಿಸಿದ್ದರು. ಈ ವೇಳೆ ಜಯಲಲಿತಾ ಅವರ ಸಹೋದರನ ಪುತ್ರ ಜೆ ದೀಪಕ್ ಅವರ ಹೆಸರನ್ನು ಶಶಿಕಲಾ ಪ್ರಬಲವಾಗಿ ಸಮರ್ಥಿಸಿಕೊಂಡಿದ್ದರು. ಆ ಮೂಲಕ ಶಶಿಕಲಾ ಅನುಪಸ್ಥಿತಿಯಲ್ಲಿ ಜೆ ದೀಪಕ್ ಮುಖ್ಯಮಂತ್ರಿಯಾಗುವ ಅಥವಾ ಪಕ್ಷದಲ್ಲಿ ಉನ್ನತ ಹುದ್ದೆ ಪಡೆಯುವುದು ನಿಚ್ಚಳವಾಗಿದೆ ಎಂದು ಹೇಳಲಾಗುತ್ತಿದೆ.
ರಾಷ್ಟ್ರೀಯ
Comments are closed.