ಕ್ರೀಡೆ

ವಿರಾಟ್ ಕೊಹ್ಲಿ ನಾಯಕತ್ವದ ಚೊಚ್ಚಲ ಪಂದ್ಯದಲ್ಲಿ ಇಂಗ್ಲೆಂಡ್ ಎದುರು ಅವಿಸ್ಮರಣೀಯ ಜಯ ದಾಖಲಿಸಿದ ಭಾರತ

Pinterest LinkedIn Tumblr

ಪುಣೆ: ನಾಯಕತ್ವ ವಹಿಸಿದ ಚೊಚ್ಚಲ ಪಂದ್ಯದಲ್ಲಿ ಮಿಂಚಿದ ವಿರಾಟ್ ಕೊಹ್ಲಿ ಮತ್ತು ಸ್ಥಳೀಯ ಹೀರೊ ಕೇದಾರ್ ಜಾಧವ್ ಅವರ ಶತಕಗಳ ಬಲದಿಂದ ಭಾರತ ತಂಡವು ಇಂಗ್ಲೆಂಡ್ ಎದುರು ಅವಿಸ್ಮರಣೀಯ ಜಯ ದಾಖಲಿಸಿತು.

ಭಾನುವಾರ ರಾತ್ರಿ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಆತಿಥೇಯ ತಂಡವು 3 ವಿಕೆಟ್‌ಗಳಿಂದ ಇಂಗ್ಲೆಂಡ್ ತಂಡವು ಒಡ್ಡಿದ್ದ ಕಠಿಣ ಸವಾಲನ್ನು ಮೀರಿ ನಿಂತಿತು. ಮೂರು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿತು. ಮಹೇಂದ್ರಸಿಂಗ್ ದೋನಿ ಅವರು ನಾಯಕತ್ವ ತ್ಯಜಿಸಿದ ನಂತರ ನಾಯಕತ್ವ ವಹಿಸಿಕೊಂಡಿರುವ ಕೊಹ್ಲಿ (122; 105ಎ, 8ಬೌಂ, 5ಸಿ) ಮತ್ತು ಕೇದಾರ್ (120; 76ಎ, 12ಬೌಂ, 4ಸಿ) ಅವರ 5ನೇ ವಿಕೆಟ್ ಜೊತೆಯಾಟದಲ್ಲಿ ಸೇರಿಸಿದ 200 ರನ್‌ಗಳ ಜೊತೆಯಾಟ ದಿಂದ ಗೆಲುವು ಸುಲಭವಾಯಿತು.

ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ತಂಡವು 50 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 350 ರನ್ ಪೇರಿಸಿತ್ತು. ಕಠಿಣ ಸವಾಲು ಬೆನ್ನಟ್ಟಿದ ಭಾರತ ತಂಡವು 48.1 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 356 ರನ್‌ ಗಳಿಸಿತು. ಸಪಾಟಾದ ಪಿಚ್‌ನಲ್ಲಿ ಹರಿದ ಒಟ್ಟು 705 ರನ್‌ಗಳ ಪ್ರವಾಹದಲ್ಲಿ 42 ಸಾವಿರ ಪ್ರೇಕ್ಷಕರು ಕೊಚ್ಚಿಹೋದರು.

ಕೇದಾರ್ ದಿಟ್ಟ ಬ್ಯಾಟಿಂಗ್: ತಂಡವು 11. 5 ಓವರ್‌ಗಳಲ್ಲಿ 63 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡು ಅಪಾಯದ ಸ್ಥಿತಿಯಲ್ಲಿದ್ದಾಗ ಕ್ರೀಸ್‌ಗೆ ಬಂದ ಪುಣೆಯ ಹುಡುಗ ಕೇದಾರ್ ಜಾಧವ್ ತಮ್ಮ ನಾಯಕ ಕೊಹ್ಲಿಯೊಂದಿಗೆ ಸೇರಿ ತಂಡವನ್ನು ಜಯದ ಹೊಸ್ತಿಲಿಗೆ ತಂದು ನಿಲ್ಲಿಸಿದರು.

13ನೇ ಏಕದಿನ ಪಂದ್ಯವಾಡಿದ ಕೇದಾರ್ ಎರಡನೇ ಶತಕ ದಾಖಲಿಸಿ ದಾಗ, ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಅವರ ಅಪ್ಪ–ಅಮ್ಮನ ಕಂಗಳಲ್ಲಿ ಸಂತಸದ ಹನಿಗಳು ಮಿನುಗಿದ್ದವು. ಕೇದಾರ್ ಪಂದ್ಯಶ್ರೇಷ್ಠ ಗೌರವ ಗಳಿಸಿದರು. ಕೇದಾರ್ ಕ್ರೀಸ್‌ಗೆ ಬರುವ ಮುನ್ನ ಕೆ.ಎಲ್. ರಾಹುಲ್ (8) ಮತ್ತು ಶಿಖರ್ ಧವನ್ (1), ಯವರಾಜ್ ಸಿಂಗ್ (15) ಮತ್ತು ಮಹೇಂದ್ರಸಿಂಗ್ ದೋನಿ (6) ಪೆವಿಲಿಯನ್ ಸೇರಿದ್ದರು. ಮಾರ್ಗನ್ ಬಳಗವು ಆತ್ಮವಿಶ್ವಾಸದ ತುತ್ತತುದಿಯಲ್ಲಿತ್ತು. ಆದರೆ, ಕೇದಾರ್ ಮತ್ತು ಕೊಹ್ಲಿ ತಮ್ಮ ಆಕರ್ಷಕ ಬ್ಯಾಟಿಂಗ್‌ನಿಂದ ಆತಂಕ ದೂರ ಮಾಡಿದರು.

ಕೊಹ್ಲಿ ಹ್ಯಾಟ್ರಿಕ್: ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಇದುವರೆಗೆ ಒಟ್ಟು ಆರು ಪಂದ್ಯಗಳಲ್ಲಿ 350 ರನ್‌ಗಳಿಗಿಂತ ಹೆಚ್ಚಿನ ಮೊತ್ತವನ್ನು ಬೆನ್ನತ್ತಿ ಗೆದ್ದಿರುವ ದಾಖಲೆಗಳಿವೆ. ಇಂದಿನ ಪಂದ್ಯವೂ ಸೇರಿದಂತೆ ಭಾರತವು ಮೂರು ಬಾರಿ ಜಯದ ಸಾಧನೆ ಮಾಡಿದೆ. 2013–14ರಲ್ಲಿ ಆಸ್ಟ್ರೇಲಿಯಾ ಎದುರಿನ ಸರಣಿಯ ಎರಡು ಪಂದ್ಯಗಳಲ್ಲಿ ಕ್ರಮ ವಾಗಿ 351 (ನಾಗಪುರ) ಮತ್ತು 360 (ಜೈಪುರ) ಮೊತ್ತವನ್ನು ಮೀರಿ ನಿಂತಿತು. ಈ ಮೂರು ಪಂದ್ಯಗಳಲ್ಲಿಯೂ ವಿರಾಟ್ ಶತಕ ಹೊಡೆದಿದ್ದು ವಿಶೇಷ.

ಪ್ರವಾಸಿ ಬಳಗದ ಬೌಲರ್‌ಗಳ ಗುಡ್‌ಲೆಂಗ್ತ್ ಎಸೆತಗಳನ್ನೂ ಸರಾಗವಾಗಿ ಸಿಕ್ಸರ್‌ಗೆ ಎತ್ತಿದ ವಿರಾಟ್ ಅವರ ಆತ್ಮವಿಶ್ವಾಸದ ಬ್ಯಾಟಿಂಗ್‌ ಚಿತ್ತಾಪಹಾರಿ ಯಾಗಿತ್ತು. ಸ್ಟೋಕ್ಸ್‌ ಎಸೆತವನ್ನು ಸಿಕ್ಸರ್‌ಗೆ ಎತ್ತುವ ಪ್ರಯತ್ನದಲ್ಲಿ ಕೊಹ್ಲಿ ಅವರು ಡೇವಿಡ್‌ ವಿಲ್ಲಿಗೆ ಕ್ಯಾಚಿತ್ತರು.

ಜಯದ ಸಿಕ್ಸರ್‌ ಬಾರಿಸಿದ ಪಾಂಡ್ಯ
40ನೇ ಓವರ್‌ನಲ್ಲಿ ಕೇದಾರ್ ಔಟಾದಾಗ ತಂಢಧ ಗೆಲುವಿಗೆ 60 ರನ್‌ಗಳ ಅಗತ್ಯವಿತ್ತು. ಕ್ರೀಸ್‌ನಲ್ಲಿದ್ದ ಹಾರ್ದಿಕ್ ಪಾಂಡ್ಯ 7ನೇ ವಿಕೆಟ್ ಜೊತೆಯಾಟದಲ್ಲಿ ರವೀಂದ್ರ ಜಡೇಜ ಜೊತೆಗೆ 27 ರನ್ ಸೇರಿಸಿದರು. ನಂತರ ಅಶ್ವಿನ್ ಜೊತೆಗೆ ಮುರಿಯದ ಎಂಟನೇ ವಿಕೆಟ್ ಜೊತೆಯಾಟದಲ್ಲಿ 32 ರನ್‌ ಸೇರಿಸಿದರು, ಕೊನೆಯ ಏಳು ರನ್‌ಗಳಿಗಾಗಿ ಅವರು ಎರಡು ಅಮೋಘ ಸಿಕ್ಸರ್‌ಗಳನ್ನು ಸಿಡಿಸಿದರು.

ಅದರೊಂದಿಗೆ ಇಂಗ್ಲೆಂಡ್‌ ತಂಡದ ಜಾಸನ್ ರಾಯ್ (73 ರನ್), ಜೋ ರೂಟ್ (78ರನ್) ಮತ್ತು ಬೆನ್ ಸ್ಟೋಕ್ಸ್‌ (62 ರನ್) ಅವರು ಗಳಿಸಿದ್ದ ಅರ್ಧಶತಕ ಗಳು ವ್ಯರ್ಥವಾದವು.

ಸ್ಕೋರ್‌ಕಾರ್ಡ್‌

ಇಂಗ್ಲೆಂಡ್‌ 7ಕ್ಕೆ350 (50 ಓವರ್‌ಗಳಲ್ಲಿ)

ಜೇಸನ್ ರಾಯ್ ಸ್ಟಂಪ್ಡ್ ಮಹೇಂದ್ರಸಿಂಗ್ ದೋನಿ ಬಿ ರವೀಂದ್ರ ಜಡೇಜ 73
ಅಲೆಕ್ಸ್ ಹೆಲ್ಸ್ ರನ್‌ಔಟ್ (ಬುಮ್ರಾ) 09
ಜೋ ರೂಟ್ ಸಿ ಹಾರ್ದಿಕ್ ಪಾಂಡ್ಯ ಬಿ ಜಸ್‌ಪ್ರೀತ್ ಬೂಮ್ರಾ 78
ಏಯಾನ್ ಮಾರ್ಗನ್ ಸಿ ಮಹೇಂದ್ರಸಿಂಗ್ ದೋನಿ ಬಿ ಹಾರ್ದಿಕ್ ಪಾಂಡ್ಯ 28
ಜಾಸ್ ಬಟ್ಲರ್ ಸಿ ಶಿಖರ್ ಧವನ್ ಬಿ ಹಾರ್ದಿಕ್ ಪಾಂಡ್ಯ 31
ಬೆನ್ ಸ್ಟೋಕ್ಸ್‌ ಸಿ ಉಮೇಶ್ ಯಾದವ್ ಬಿ ಜಸ್‌ಪ್ರೀತ್ ಬೂಮ್ರಾ 62
ಮೊಹಿನ್ ಅಲಿ ಬಿ ಉಮೇಶ್ ಯಾದವ್ 28
ಕ್ರಿಸ್ ವೋಕ್ಸ್ ಔಟಾಗದೆ 09
ಡೇವಿಡ್ ವಿಲ್ಲಿ ಔಟಾಗದೆ 10
ಇತರೆ: (ಬೈ 1, ಲೆಗ್‌ಬೈ 11, ವೈಡ್ 6, ನೋಬಾಲ್ 4) 22
ವಿಕೆಟ್‌: 1–39 (ಹೆಲ್ಸ್‌; 6.2), 2–108 (ರಾಯ್; 18.3), 3–157 (ಮಾರ್ಗನ್; 26.6), 4–220 (ಬಟ್ಲರ್; 37.5), 5-244 (ರೂಟ್; 41.4), 6–317 (ಸ್ಟೋಕ್ಸ್‌; 47.1), 7–336 (ಅಲಿ; 48.4)
ಬೌಲಿಂಗ್‌: ಉಮೇಶ್ ಯಾದವ್ 7–0–63–1 (ನೋಬಾಲ್ 1, ವೈಡ್ 3), ಹಾರ್ದಿಕ್ ಪಾಂಡ್ಯ 9–0–46–2, ಜಸ್‌ಪ್ರೀತ್ ಬೂಮ್ರಾ 10–0–79–2 (ನೋಬಾಲ್ 3, ವೈಡ್ 1), ರವೀಂದ್ರ ಜಡೇಜ 10–0–50–1, ಆರ್. ಅಶ್ವಿನ್ 8–0–63–0 (ವೈಡ್ 2), ಕೇದಾರ್ ಜಾಧವ್ 4–0–23 –0, ಯುವರಾಜ್ ಸಿಂಗ್ 2–0–14–0
ಭಾರತ 7ಕ್ಕೆ356 (48.1 ಓವರ್‌ಗಳಲ್ಲಿ)

ಕೆ.ಎಲ್. ರಾಹುಲ್ ಬಿ ಡೇವಿಡ್ ವಿಲ್ಲಿ 08
ಶಿಖರ್ ಧವನ್ ಸಿ ಮೊಹಿನ್ ಅಲಿ ಬಿ ಡೇವಿಡ್ ವಿಲ್ಲಿ 01
ವಿರಾಟ್ ಕೊಹ್ಲಿ ಸಿ ಡೇವಿಡ್ ವಿಲ್ಲಿ ಬಿ ಬೆನ್ ಸ್ಟೋಕ್ಸ್ 122
ಯುವರಾಜ್ ಸಿಂಗ್ ಸಿ ಜಾಸ್ ಬಟ್ಲರ್ ಬಿ ಬೆನ್ ಸ್ಟೋಕ್ಸ್ 15
ಮಹೇಂದ್ರಸಿಂಗ್ ದೋನಿ ಸಿ ಡೇವಿಡ್ ವಿಲ್ಲಿ ಬಿ ಜೇಕ್ ಬಾಲ್ 06
ಕೇದಾರ್ ಜಾಧವ್ ಸಿ ಬೆನ್ ಸ್ಟೋಕ್ಸ್‌ ಬಿ ಜೇಕ್ ಬಾಲ್ 120
ಹಾರ್ದಿಕ್ ಪಾಂಡ್ಯ ಔಟಾಗದೆ 40
ರವೀಂದ್ರ ಜಡೇಜ ಸಿ ರಶೀದ್ ಬಿ ಜೇಕ್ ಬಾಲ್ 13
ಆರ್. ಅಶ್ವಿನ್ ಔಟಾಗದೆ 15
ಇತರೆ: (ಬೈ 1, ಲೆಗ್‌ಬೈ 4, ವೈಡ್ 11) 15
ವಿಕೆಟ್‌: 1–13 (ಧವನ್; 3.6), 2–24 (ರಾಹುಲ್; 5.5), 3–56 (ಯುವರಾಜ್; 10.2), 4–63 (ದೋನಿ; 11.5), 5–263 (ಕೊಹ್ಲಿ; 36.2), 6–291 (ಜಾಧವ್; 39.5), 7–318 (ಜಡೇಜ; 44.1)
ಬೌಲಿಂಗ್‌: ಕ್ರಿಸ್ ವೋಕ್ಸ್‌ 8–0–44–0 (ವೈಡ್ 2), ಡೇವಿಡ್ ವಿಲ್ಲಿ 6–0–47–2 (ವೈಡ್ 3), ಜೇಕ್ ಬಾಲ್ 10–0–67–3 (ವೈಡ್ 4), ಬೆನ್ ಸ್ಟೋಕ್ಸ್ 10–0–73–2 (ವೈಡ್ 2), ಆದಿಲ್ ರಶೀದ್ 5–0–50–0, ಮೊಹಿನ್ ಅಲಿ 6.1–0–48–0, ಜೋ ರೂಟ್ 3–0–22–0

ಫಲಿತಾಂಶ: ಭಾರತಕ್ಕೆ 3 ವಿಕೆಟ್‌ಗಳ ಜಯ. ಸರಣಿಯಲ್ಲಿ 1–0 ಮುನ್ನಡೆ
ಪಂದ್ಯಶ್ರೇಷ್ಠ: ಕೇದಾರ್‌ ಜಾಧವ್‌ (ಭಾರತ)
ಮುಂದಿನ ಪಂದ್ಯ: ಜ. 19, ಸ್ಥಳ: ಕಟಕ್

Comments are closed.