ಬೆಂಗಳೂರು: ಸೋಲದೇವನಹಳ್ಳಿ ಬಳಿ ನಡೆದ ಶೂಟೌಟ್‌ನಲ್ಲಿ ಹತ್ಯೆಯಾದ ವಕೀಲ ಅಮಿತ್ ಮತ್ತು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಶ್ರುತಿಗೌಡ ಅವರದ್ದು ಫೇಸ್‌ಬುಕ್ ಲವ್. ಅಷ್ಟೇ ಅಲ್ಲ, ಈ ಪ್ರೇಮ ಪ್ರಕರಣದ ಬಗ್ಗೆ ಶ್ರುತಿಯ ಪತಿ ರಾಜೇಶ್‌ಗೆ ಮಾಹಿತಿ ನೀಡಿದ್ದು ಅಮಿತ್‌ನ ಪತ್ನಿ…
ವಕೀಲ ಅಮಿತ್ ಹತ್ಯೆ ಬಳಿಕ ಪೊಲೀಸರಿಗೆ ಶರಣಾಗಿರುವ ಕಗ್ಗಲೀಪುರ ನಿವಾಸಿ ರಾಜೇಶ್ ಮತ್ತು ಗೋಪಾಲಕೃಷ್ಣ ಈ
ಸಂಗತಿಯನ್ನು ತನಿಖಾಧಿಕಾರಿಗಳ ಬಳಿ ಬಾಯಿಬಿಟ್ಟಿದ್ದಾರೆ. ಹೆಸರಘಟ್ಟದ ಎಂಇಐ ಲೇಔಟ್ ನಿವಾಸಿಯಾಗಿರುವ ವಕೀಲ ಅಮಿತ್ ಮತ್ತು ಕಗ್ಗಲೀಪುರ ನಿವಾಸಿಯಾಗಿರುವ ಪಿಡಿಓ ಶ್ರುತಿಗೌಡ ಅವರ ನಡುವೆ ಏಳೆಂಟು ತಿಂಗಳ ಹಿಂದೆ ಫೇಸ್‌ಬುಕ್‌ನಲ್ಲಿ ಸ್ನೇಹ ವಾಗಿತ್ತು. ಈ ಸ್ನೇಹ ಮುಂದುವರಿಸಿದ್ದ ಇಬ್ಬರೂ ಪ್ರತಿನಿತ್ಯ ಗಂಟೆ ಗಟ್ಟಲೆ ಫೇಸ್‌ಬುಕ್‌ನಲ್ಲಿ ಚಾಟ್ ಮಾಡುತ್ತಿದ್ದರು. ಜತೆಗೆ ತಮ್ಮ ಮೊಬೈಲ್ ಸಂಖ್ಯೆಯನ್ನೂ ವಿನಿಮಯ ಮಾಡಿಕೊಂಡಿದ್ದರು. ಹೀಗೆ ಬೆಳೆದ ಸ್ನೇಹದಿಂದಾಗಿ ಇಬ್ಬರೂ ಆಗಾಗ್ಗೆ ಭೇಟಿಯಾಗುವುದು, ಒಟ್ಟಿಗೆ ಸುತ್ತಾಡುವುದನ್ನು ಮುಂದುವರಿಸಿದ್ದರು.
ಪತಿಯ ವರ್ತನೆಯಿಂದ ಅನುಮಾನಗೊಂಡ ಅಮಿತ್‌ನ ಪತ್ನಿ ನಾಲ್ಕೈದು ತಿಂಗಳ ಹಿಂದೆ ಆತನ ಫೇಸ್‌ಬುಕ್ ಖಾತೆ ಪರಿಶೀಲಿಸಿ ದಾಗ ಪರಸ್ತ್ರೀಗೆ ತಮ್ಮ ಖಾತೆಯಿಂದ ಸಲುಗೆಯ ಸಂದೇಶಗಳನ್ನು ರವಾನಿಸಿರುವುದು ಗೊತ್ತಾಯಿತು.
ಇದಾದ ಬಳಿಕ ಶ್ರುತಿಯ ಪತಿ ರಾಜೇಶ್ ಅವರನ್ನು ಮೊಬೈಲ್ ಮೂಲಕ ಸಂಪರ್ಕಿ ಸಿದ ಅಮಿತ್‌ನ ಪತ್ನಿ, “ನನ್ನ ಪತಿ ಮತ್ತು ನಿಮ್ಮ ಪತ್ನಿ ಗಂಟೆಗಟ್ಟಲೆ ಫೇಸ್‌ಬುಕ್‌ನಲ್ಲಿ ಚಾಟ್ ಮಾಡುತ್ತಿದ್ದಾರೆ. ಇವರಿಬ್ಬರ ನಡುವೆ ಅಕ್ರಮ ಸಂಬಂಧ ಇದೆ ಎಂದೆನ್ನಿಸುತ್ತಿದೆ. ನಿಮ್ಮ ಪತ್ನಿಯನ್ನು ಹದ್ದುಬಸ್ತಿನಲ್ಲಿಡಿ’ ಎಂದು ಹೇಳಿದ್ದರು.
ಶ್ರುತಿಗೆ ಪತಿಯ ಎಚ್ಚರಿಕೆ: ಅಮಿತ್ ಜತೆ ತನ್ನ ಪತ್ನಿ ಸ್ನೇಹದಿಂದ ಇರುವ ಬಗ್ಗೆ ರಾಜೇಶ್ ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ್ದ ಶ್ರುತಿ, ಅಮಿತ್ ನನಗೆ ಫೇಸ್‌ಬುಕ್ ಪರಿಚಯವಷ್ಟೇ ಹೊರತು ನಮ್ಮಿಬ್ಬರ ನಡುವೆ ಬೇರೆ ಏನೂ ಇಲ್ಲ ಎಂದು ಸಮಜಾಯಿಷಿ ನೀಡಿದ್ದರು. ಬಳಿಕ ರಾಜೇಶ್ ಕೂಡ ಸುಮ್ಮನಾಗಿದ್ದರು. ಆದರೆ, ರೈಲ್ವೆ ಗೊಲ್ಲಹಳ್ಳಿಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿದ್ದ (ಪಿಡಿಓ) ಶ್ರುತಿ ಮನೆಗೆ ತಡವಾಗಿ ಬರುತ್ತಿದ್ದರು. ಇದನ್ನು ಪ್ರಶ್ನಿಸಿದರೆ,
ನಾನು ಪಿಡಿಒ. ಸಾಕಷ್ಟು ಕೆಲಸ ಇರುತ್ತದೆ. ಸುಖಾಸುಮ್ಮನೆ ಪ್ರಶ್ನೆ ಮಾಡುತ್ತೀರಾ ಎಂದು ಜಗಳ ತೆಗೆಯುತ್ತಿದ್ದಳು ಎನ್ನಲಾಗಿದೆ.
ಸರ್ವಿಸ್ ನೆಪದಲ್ಲಿ ಜಿಪಿಎಸ್: ಪತ್ನಿಯ ವರ್ತನೆಯಿಂದ ಬೇಸತ್ತ ಪತಿ ರಾಜೇಶ್ ಇತ್ತೀಚೆಗೆ ಶ್ರುತಿಯ ಕಾರನ್ನು ಸರ್ವೀಸ್
ಮಾಡಿಸುವ ನೆಪದಲ್ಲಿ ತೆಗೆದುಕೊಂಡು ಹೋಗಿ ಆಕೆಗೆ ತಿಳಿಯದಂತೆ ಕಾರಿಗೆ ಜಿಪಿಎಸ್ ಅಳವಡಿಸಿದ್ದರು. ಇದು ಶ್ರುತಿಗೆ ತಿಳಿದಿರಲಿಲ್ಲ. ಹೀಗಾಗಿ ಶ್ರುತಿ ಮತ್ತು ಅಮಿತ್ ಒಟ್ಟಿಗೆ ಓಡಾಡುತ್ತಿದ್ದ ಸಂಗತಿ ಅವರಿಗೆ ಸ್ಪಷ್ಟವಾಗಿತ್ತು.
ಗುಂಡು ಹಾರಿಸಿದ್ದು ಪತಿ ರಾಜೇಶ್
ಜ. 13ರಂದು ಮಧ್ಯಾಹ್ನ ರಾಜೇಶ್ ತಮ್ಮ ಪತ್ನಿ ಶ್ರುತಿಯ ಮೊಬೈಲ್‌ಗೆ ಕರೆ ಮಾಡಿದಾಗ ಕರೆ ಸ್ವೀಕರಿಸಿದ ಆಕೆ, ನಾನು
ತಾಲೂಕು ಅಧಿಕಾರಿಗಳ ಸಭೆಯಲ್ಲಿದ್ದೇನೆ. ನಾಲ್ಕೈದು ಗಂಟೆ ಕರೆ ಮಾಡಬೇಡಿ ಎಂದು ಹೇಳಿದ್ದರು. ಅಲ್ಲದೆ, ಈ ಹಿಂದೆ
ತಾಲೂಕು ಅಧಿಕಾರಿಗಳ ಸಭೆಯಲ್ಲಿ ತೆಗೆದಿದ್ದ ಫೋಟೋವನ್ನು ವಾಟ್ಸ್‌ಆ್ಯಪ್ ಮೂಲಕ ಪತಿಯ ಮೊಬೈಲ್‌ಗೆ ಕಳುಹಿಸಿದ್ದರು.
ಆದರೆ, ಅನುಮಾನಗೊಂಡ ರಾಜೇಶ್ ಪತ್ನಿಯ ಕಾರಿಗೆ ಅಳವಡಿಸಿದ್ದ ಜಿಪಿಎಸ್ ಪರಿಶೀಲಿಸಿದಾಗ ಕಾರು ಸೋಲದೇವನ ಹಳ್ಳಿ ಬಳಿ ಇರುವ ಆಚಾರ್ಯ ಕಾಲೇಜು ಸಮೀಪ ಇರುವುದು ಗೊತ್ತಾಗಿದೆ. ಈ ವಿಚಾರವನ್ನು ತಂದೆ ಗೋಪಾಲಕೃಷ್ಣ ಅವರಿಗೆ ತಿಳಿಸಿದ ರಾಜೇಶ್, ಪತ್ನಿ ಇದ್ದ ಸ್ಥಳಕ್ಕೆ ಹೊರಡಲು ಮುಂದಾದಾಗ ಗೋಪಾಲಕೃಷ್ಣ ಕೂಡ ಮಗನ ಜತೆ ಹೊರಟಿದ್ದರು.
ಅದರಂತೆ ಅವರಿಬ್ಬರೂ ಆಚಾರ್ಯ ಕಾಲೇಜು ಬಳಿ ಬಂದು ಹುಡುಕಿದಾಗ ಕಾಲೇಜು ಹಿಂಬದಿ ಇರುವ ನೀಲಗಿರಿ
ತೋಪಿನ ಬಳಿ ಪತ್ನಿಯ ಸ್ವಿಫ್ಟ್ ಕಾರು ನಿಂತಿದ್ದು ಕಾಣಿಸಿತು. ಸ್ವಲ್ಪ ದೂರದಲ್ಲಿ ತಮ್ಮ ಕಾರು ನಿಲ್ಲಿಸಿದ ರಾಜೇಶ್ ಇಳಿದು ಪತ್ನಿ ಇದ್ದ ಕಾರಿನ ಬಳಿ ಹೋದಾಗ ಒಳಗೆ ಅಮಿತ್ ಜತೆ ಶ್ರುತಿ ಇರುವುದು ಕಂಡುಬಂತು. ಈ ವೇಳೆ ಅವರು ಕುಳಿತಿದ್ದ ಭಂಗಿ ಕಂಡು ಕೋಪದಲ್ಲಿ ರಾಜೇಶ್ ಅಮಿತ್ ಮೇಲೆ ಗುಂಡು ಹಾರಿಸಿದರು.
ಅಶ್ಲೀಲ ಭಂಗಿಯಲ್ಲಿ ಕುಳಿತಿದ್ದರು!
ರಾಜೇಶ್ ಕಾರಿನ ಬಳಿ ಹೋಗಿ ನೋಡಿದಾಗ ಡ್ರೈವರ್ ಸೀಟಿನಲ್ಲಿ ಶ್ರುತಿ ಮತ್ತು ಪಕ್ಕದ ಸೀಟಿನಲ್ಲಿ ಅಮಿತ್ ಅಶ್ಲೀಲ ಭಂಗಿಯಲ್ಲಿ ಕುಳಿತಿದ್ದರು. ಇದರಿಂದ ಕೋಪಗೊಂಡ ರಾಜೇಶ್, ಅಮಿತ್ ಕಾರಿನಿಂದ ಕೆಳಗೆ ಇಳಿಯದಂತೆ ಬಾಗಿಲ ಬಳಿ ನಿಂತರು. ಈ ಸಂದರ್ಭದಲ್ಲಿ ಪಿಸ್ತೂಲ್‌ನೊಂದಿಗೆ ಸ್ಥಳಕ್ಕೆ ಬಂದ ಗೋಪಾಲಕೃಷ್ಣ ಅವರು ತಮ್ಮ ಸೊಸೆ ಇನ್ನೊಬ್ಬನೊಂದಿಗೆ ಇರುವುದನ್ನು ಕಂಡು ಆಕ್ರೋಶಗೊಂಡು ಏಕಾಏಕಿ ಗುಂಡು ಹಾರಿಸಿದ್ದಾರೆ. ಈ ಗುಂಡು ಅಮಿತ್ ಕೈಗೆ ಹೊಕ್ಕಿ ಎದೆಗೆ ತಲುಪಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಮಿತ್‌ಗೆ ಗುಂಡು ತಗುಲುತ್ತಿದ್ದಂತೆ ಚಾಲಕನ ಸೀಟಿನಲ್ಲಿ ಕುಳಿತಿದ್ದ ಶ್ರುತಿ ತಕ್ಷಣವೇ ಕಾರು ಚಲಾಯಿಸಿಕೊಂಡು ಹೆಸರಘಟ್ಟ ಸಮೀಪ ಇರುವ ಖಾಸಗಿ ಆಸ್ಪತ್ರೆಗೆ ತೆರಳಿ ಅಮಿತ್‌ನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಅಲ್ಲಿಂದ ಪಕ್ಕದಲ್ಲೇ ಇದ್ದ ಲಾಡ್ಜ್ಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡರು. ಇತ್ತ ಆಸ್ಪತ್ರೆಗೆ ದಾಖಲಾಗಿದ್ದ ಅಮಿತ್ ಕೂಡ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದರು.
ಎರಡು ಹೆಣ್ಣು ಮಕ್ಕಳ ತಾಯಿ: ಶ್ರುತಿ ಗೌಡ ಸುಮಾರು 11 ವರ್ಷಗಳ ಹಿಂದೆ ಕಗ್ಗಲೀಪುರ ನಿವಾಸಿ ರಾಜೇಶ್ ಜತೆ
ವಿವಾಹವಾಗಿದ್ದು, ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿವೆ. ವಕೀಲ ಅಮಿತ್‌ಗೆ ವಿವಾಹವಾಗಿ ಒಂದು ಮಗುವಿದ್ದು, ಇವರ ಕುಟುಂಬ ಹೆಸರುಘಟ್ಟ ಸಮೀಪದ ಎಂಇಐ ಲೇಔಟ್ ಬಳಿ ವಾಸವಿದೆ.
Comments are closed.