
ಸಾಮಾಜಿಕ ಜಾಲತಾಣದಲ್ಲಿ ಜನರು ತಮ್ಮ ಅಭಿರುಚಿಗೆ ತಕ್ಕಂತ ಪೋಸ್ಟ್ಗಳನ್ನು ಮಾಡುತ್ತಾರೆ ಹಾಗೂ ಹುಡುಕುತ್ತಾರೆ. ಇನ್‍ಸ್ಟಾಗ್ರಾಂನಲ್ಲಿ ಟ್ರೆಂಡ್ ಹಾಗೂ ಫ್ಯಾಷನ್ಗೆ ಸಂಬಂಧಿಸಿದ ವಿಷಯಗಳಿಗೇನೂ ಕಡಿಮೆ ಇಲ್ಲ. ಇನ್ನು ಈ ವೇದಿಕೆಯಲ್ಲಿ ಸಾಕಷ್ಟು ಮಂದಿ ಫ್ಯಾಷನ್ ಇನ್ಫ್ಲುಯೆನ್ಸರ್ಗಳಿದ್ದಾರೆ. ಈಗ ಇಂತಹವರಿಗೆ ಒಂದು ಶಾಕ್ ಕೊಡುವ ಸುದ್ದಿ ಇದೆ. ಅವರಿಗೆಲ್ಲ ಒಬ್ಬರು ಪ್ರಬಲ ಪ್ರತಿಸ್ಪರ್ಧಿ ಹುಟ್ಟಿಕೊಂಡಿದ್ದಾರೆ. ಅವರು ಯಾರು ಗೊತ್ತೆ? 76 ವರ್ಷದ ಅಜ್ಜಿ. ಸುಂದರ ರೂಪದರ್ಶಿಗಳು ಮತ್ತು ಫ್ಯಾಷನ್ ಇನ್‍ಫ್ಲುಯೆನ್ಸರ್‌ಗಳ ಮಧ್ಯೆ ಅಜ್ಜಿಗೇನು ಕೆಲಸ ಎಂದು ಮೂಗು ಮುರಿಯಬೇಡಿ. ಇವರು ಅಂತಿಂತ ಅಜ್ಜಿಯಲ್ಲ. ಹೌದು, ಸುಂದರವಾದ ಉಡುಪು ಬದಲಾವಣೆಯ ರೀಲ್ ಆಗಿರಲಿ ಅಥವಾ ಆಕರ್ಷಕ ಪಾದರಕ್ಷೆಗಳನ್ನು ಧರಿಸುವ ಸ್ಪರ್ಧೆಯೇ ಇರಲಿ, ಈ ಅಜ್ಜಿ ಎಲ್ಲದಕ್ಕೂ ಸೈ. ಅಜ್ಜಿ ಇಂಟರ್‌ನೆಟ್‌ನಲ್ಲಿ ಟ್ರೆಂಡ್ ಆಗುವ ಎಲ್ಲಾ ಸ್ಪರ್ಧೆಗಳಲ್ಲಿ ಪೈಪೋಟಿ ನೀಡಲು ಸದಾ ಸಿದ್ಧವಾಗಿರುತ್ತಾರೆ. “ಮಿಸ್ಟರ್ ಆ್ಯಂಡ್ ಮಿಸಸ್ ವರ್ಮಾ” ಎಂಬ ಇನ್‍ಸ್ಟಾಗ್ರಾಂ ಖಾತೆಯ ಮೂಲಕ, ತನ್ನ ವಿಭಿನ್ನ ಫ್ಯಾಷನ್ ಟ್ರೆಂಡ್‍ಗಳ ಮೂಲಕ ಬಹಳಷ್ಟು ಮಂದಿ ಸಾಮಾಜಿಕ ಮಾಧ್ಯಮ ಬಳಕೆದಾರರ ಮೆಚ್ಚುಗೆ ಪಡೆದಿರುವ ಈ ಅಜ್ಜಿ, ಇನ್‍ಸ್ಟಾಗ್ರಾಂನಲ್ಲಿ 11,000 ಹಿಂಬಾಲಕರನ್ನು ಹೊಂದಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಈ ಅಜ್ಜಿಯ ಹಲವಾರು ವೈರಲ್ ಟ್ರೆಂಡ್‍ಗಳ ವಿಡಿಯೋಗಳನ್ನು ಕಾಣಬಹುದು. ಇನ್‍ಸ್ಟಾಗ್ರಾಂ ಖಾತೆಯಲ್ಲಿ ಅಜ್ಜಿ ತನ್ನ ಪತಿಯ ಜೊತೆ ಕಾಣಿಸಿಕೊಳ್ಳುತ್ತಾರೆ, ಇಬ್ಬರೂ ಮಾರುಕಟ್ಟೆಯಲ್ಲಿ ಇರುವ ಹೊಸ ಟ್ರೆಂಡ್‍ಗಳನ್ನು ಪ್ರಯೋಗ ಮಾಡಿ ನೋಡುತ್ತಾರೆ. ಅವರ ಖಾತೆಯಲ್ಲಿರುವ ವಿಡಿಯೋಗಳನ್ನು ನೋಡಿದಾಗ, ಸಾಮಾಜಿಕ ಮಾಧ್ಯಮದಲ್ಲಿ ತೊಡಗಿಕೊಳ್ಳಲು ಅವರ ಮೊಮ್ಮಗಳು ಪ್ರೋತ್ಸಾಹ ನೀಡಿರುವುದು ತಿಳಿಯುತ್ತದೆ. ಅದೇನೆ ಇದ್ದರೂ ಇಂತಹ ವಿಷಯಗಳಲ್ಲಿ ತೊಡಗಿಕೊಳ್ಳುವುದಕ್ಕೆ ಯಾವುದೇ ವಯಸ್ಸಿನ ಮಿತಿ ಇಲ್ಲ ಎಂಬುದನ್ನು ದಂಪತಿ ಜಗತ್ತಿಗೆ ತೋರಿಸಿದ್ದಾರೆ.
“ಪ್ಲೇಯಿಂಗ್ ಕೂಲ್ ಆಫ್ಟರ್ ಸೆವೆಂಟೀಸ್” ಎಂದು ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿರುವ ಈ ಲವಲವಿಕೆಯ ವೃದ್ಧ ದಂಪತಿ, ತಮ್ಮ ಹಿಂಬಾಲಕರಿಗೆ ನಿತ್ಯವೂ ಮನರಂಜನೆಯ ಡೋಸ್ ನೀಡುವುದರಲ್ಲಿ ಹಿಂದೆ ಬಿದ್ದಿಲ್ಲ.
ಪ್ರತಿದಿನ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಅಜ್ಜ- ಅಜ್ಜಿ ಇಬ್ಬರೂ ಕಾಣಿಸಿಕೊಂಡರೂ, ಮಿಂಚುವುದು ಮಾತ್ರ ಅಜ್ಜಿ. ತಮ್ಮ ಮೊಮ್ಮಗಳ ಉಡುಪಿನಲ್ಲಿ ಚಿತ್ರವಿಚಿತ್ರವಾಗಿ ಕಾಣುವ, ಆದರೂ ಮುದ್ದು ಎಂದೆನಿಸುವ ಅಜ್ಜಿ, ಫ್ಯಾಷನ್ ಇನ್‍ಫ್ಲುಯೆನ್ಸರ್‌ಗಳಿಗೆ ಭಾರಿ ಪೈಪೋಟಿ ನೀಡುವುದರಲ್ಲಿ ಸಂದೇಹವಿಲ್ಲ. ಅಜ್ಜಿ ಯಾವ ಉಡುಪಿನಲ್ಲಿ ಕಾಣಿಸಿಕೊಂಡರೂ ನೆಟ್ಟಿಗರಿಗೆ ಈಗ ಅಚ್ಚುಮೆಚ್ಚು.
ಇನ್‍ಸ್ಟಾಗ್ರಾಂ ಖಾತೆಯಲ್ಲಿರುವ ಅಜ್ಜಿ ಶೂ ಚಾಲೆಂಜ್ ವಿಡಿಯೋ, 1.2 ಮಿಲಿಯನ್ ವೀಕ್ಷಣೆಗಳನ್ನು ಕಂಡಿದೆ. ಆ ವಿಡಿಯೋದಲ್ಲಿ, ಸಾಂಪ್ರದಾಯಿಕ ಉಡುಪಿನಲ್ಲಿ ಕುಳಿತಿರುವ ಅಜ್ಜಿ, ಶೂ ಎಸೆಯುವುದು, ಮರುಕ್ಷಣವೇ ಅಜ್ಜಿ ಅದೇ ಶೂ ಮತ್ತು ಶಾರ್ಟ್ ಸ್ಕರ್ಟ್ ಧರಿಸಿ ಅಜ್ಜಿ ಆತ್ಮವಿಶ್ವಾಸದಿಂದ ಕುಳಿತಿರು ದೃಶ್ಯವಿದೆ.
ಅಜ್ಜಿಯ ಇನ್‍ಸ್ಟಾಗ್ರಾಂ ಖಾತೆ ಆ ವಿಶಿಷ್ಟ ವಿಡಿಯೋಗೆ ತುಂಬಾ ಪ್ರೋತ್ಸಾಹ ದೊರಕಿದೆ. ಆ ವಿಡಿಯೋಗೆ ಓರ್ವ ಸಾಮಾಜಿಕ ಮಾಧ್ಯಮ ಬಳಕೆದಾರರು, “ಅಜ್ಜಿ ಅದ್ಭುತವಾಗಿ ಕಾಣಿಸುತ್ತಿದ್ದೀರಿ” ಎಂದು ಬರೆದರೆ, ಇನ್ನೊಬ್ಬರು ಆಕೆಯ ರೂಪವನ್ನು ಹೊಗಳುತ್ತಾ, ‘ಅಜ್ಜಿ ಓರ್ವ ಮಹಾರಾಣಿಯಂತೆ ಕಾಣಿಸುತ್ತಿದ್ದಾರೆ” ಎಂದು ಪ್ರತಿಕ್ರಿಯಿಸಿದ್ದಾರೆ.
Comments are closed.