ಮನೋರಂಜನೆ

ಕೊರೊನಾದಿಂದ ಬಳಲುತ್ತಿದ್ದ ಖ್ಯಾತ ಕಿರುತೆರೆ ನಟಿ ವಿಧಿವಶ!

Pinterest LinkedIn Tumblr


‘ಯೇ ರಿಷ್ತಾ ಕ್ಯಾ ಕೆಹ್ಲಾತ ಹೈ’ ಖ್ಯಾತಿಯ ಕಿರುತೆರೆ ನಟಿ ದಿವ್ಯಾ ಭಟ್ನಾಗರ್ (34) ಮುಂಬೈನಲ್ಲಿ ಸೋಮವಾರ (ಡಿ.7) ನಿಧನರಾಗಿದ್ದಾರೆ. ಅವರಿಗೆ ಕೆಲ ವಾರಗಳ ಹಿಂದೆ ಕೊರೊನಾ ವೈರಸ್ ತಗುಲಿತ್ತು. ಆ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ, ದಿನ ಕಳೆದಂತೆ ಅವರ ಆರೋಗ್ಯ ಸ್ಥಿತಿ ಗಂಭೀರವಾಗುತ್ತಲೇ ಇದ್ದರಿಂದ ವೆಂಟಿಲೇಟರ್‌ನಲ್ಲಿರಿಸಿ, ಚಿಕಿತ್ಸೆ ಮುಂದುವರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಅವರು ಇಹಲೋಕ ತ್ಯಜಿಸಿದ್ದಾರೆ.

ದಿವ್ಯಾ ಅವರ ಆಪ್ತ ಸ್ನೇಹಿತೆಯರಾದ ದೇವೊಲೀನಾ ಭಟ್ಟಾಚಾರ್ಜೀ ಮತ್ತು ಶಿಲ್ಪಾ ಶಿರೋಡ್ಕರ್ ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, ಅಗಲಿದ ಸ್ನೇಹಿತೆಗೆ ಅಂತಿಮ ನಮನ ಸಲ್ಲಿಸಿದ್ದಾರೆ. ದಿವ್ಯಾ ಜೊತೆಗಿರುವ ಫೋಟೋವೊಂದನ್ನು ಪೋಸ್ಟ್ ಮಾಡಿರುವ ದೇವೊಲೀನಾ, ‘ನನಗೆ ಗೊತ್ತು ಜೀವನವು ನಿಮ್ಮ ಮೇಲೆ ತುಂಬ ಕಠಿಣವಾಗಿತ್ತು. ನೀವು ಅಸಹನೀಯವಾದ ನೋವನ್ನು ಅನುಭವಿಸಿದ್ದೀರಿ. ಆದರೆ, ನೀವು ಈಗ ಉತ್ತಮ ಸ್ಥಳದಲ್ಲಿದ್ದೀರಿ ಮತ್ತು ಎಲ್ಲಾ ದುಃಖ, ನೋವು, ಮೋಸಗಳು, ಸುಳ್ಳುಗಳಿಂದ ಮುಕ್ತರಾಗಿರಿದ್ದೀರಿ ಎಂದು ನನಗೆ ತಿಳಿದಿದೆ. ನಾನು ನಿಮ್ಮನ್ನು ತುಂಬ ಮಿಸ್ ಮಾಡಿಕೊಳ್ಳುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

ಇನ್ನು, ದಿವ್ಯಾ ಅವರ ಪತಿ ಗಗನ್ ಬಗ್ಗೆ, ದಿವ್ಯಾ ಅವರ ತಾಯಿ ಬೇಸರ ವ್ಯಕ್ತಪಡಿಸಿದ್ದಾರೆ. ‘ಅರ್ಟಿಸ್ಟ್ ಮ್ಯಾನೇಜರ್ ಆಗಿದ್ದ ಆತ, ದಿವ್ಯಾಳನ್ನು ಬಿಟ್ಟುಹೋಗಿದ್ದ. ಆತ ಒಬ್ಬ ಮೋಸಗಾರ’ ಎಂದು ಹೇಳೀಕೊಂಡಿದ್ದಾರೆ. ಈ ಬಗ್ಗೆ ವಿಡಿಯೋ ಹಂಚಿಕೊಂಡಿರುವ ದಿವ್ಯಾ ಪತಿ ಗಗನ್, ‘ನಾನು ದಿವ್ಯಾಳನ್ನು ಬಿಟ್ಟುಹೋಗಿಲ್ಲ. ಅಲ್ಲದೆ, ದಿವ್ಯಾ ಪೋಷಕರಿಗೆ ನಮ್ಮ ಮದುವೆ ಇಷ್ಟವಿರಲಿಲ್ಲ. ಅದಕ್ಕಾಗಿ ಆರಂಭದಿಂದಲೂ ನಮಗೆ ವಿರೋಧ ಮಾಡುತ್ತಲೇ ಇದ್ದರು’ ಎಂದು ಹೇಳಿಕೊಂಡಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ದಿವ್ಯಾ-ಗಗನ್ ಮದುವೆ ಆಗಿದ್ದರು.

‘ಯೇ ರಿಷ್ತಾ ಕ್ಯಾ ಕೆಹ್ಲಾತ ಹೈ’, ‘ಉಡಾನ್’, ‘ಜೀತ್ ಗಯಿ ತೋ ಪಿಯಾ ಮೋರೆ’, ‘ವಿಶ್‌’ ಮುಂತಾದ ಧಾರಾವಾಹಿಗಳಲ್ಲಿ ದಿವ್ಯಾ ನಟಿಸಿದ್ದರು. ಅವರ ನಿಧನಕ್ಕೆ ಚಿತ್ರರಂಗದ ಅನೇಕರು ಸಂತಾಪ ಸೂಚಿಸಿದ್ದಾರೆ.

Comments are closed.