ಮನೋರಂಜನೆ

2ನೇ ವಾರವೂ ‘ಆ್ಯಕ್ಟ್ 1978’ ಚಿತ್ರಕ್ಕೆ ಬಹುಪರಾಕ್ ಹೇಳಿದ ಪ್ರೇಕ್ಷಕ

Pinterest LinkedIn Tumblr


ಹೊಸ ಅಲೆ ಸೃಷ್ಟಿಸಿರುವ ‘ಆ್ಯಕ್ಟ್ 1978’ ಚಿತ್ರ ಪ್ರತಿಯೊಬ್ಬರಿಂದ ಬಹುಪರಾಕ್ ಹೇಳಿಸಿಕೊಳ್ಳುತ್ತ ಮುನ್ನುಗ್ಗುತ್ತಿದೆ. ಪ್ರೇಕ್ಷಕ ಮಹಾಪ್ರಭು ಹಾಗೂ ಸಿನಿ ದಿಗ್ಗಜರಿಂದ ಅಭೂತ ಪೂರ್ವ ಮೆಚ್ಚುಗೆ ಪಡೆದುಕೊಂಡಿರುವ ‘ಆ್ಯಕ್ಟ್ 1978’ ಚಿತ್ರಕ್ಕೆ ಇದೀಗ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್, ಬಿಗ್ ಬಾಸ್ ಸ್ಪರ್ಧಿ ನಿರಂಜನ್ ದೇಶಪಾಂಡೆ ಫಿದಾ ಆಗಿದ್ದಾರೆ.

ಎರಡನೇ ವಾರವೂ ಹೌಸ್‍ಫುಲ್ ಪ್ರದರ್ಶನ ಕಾಣುತ್ತಿರುವ ‘ಆ್ಯಕ್ಟ್ 1978′ ಚಿತ್ರವನ್ನು ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹಾಗೂ ನಿರೂಪಕ, ಬಿಗ್‍ಬಾಸ್ ಸ್ಪರ್ಧಿ ನಿರಂಜನ್ ದೇಶಪಾಂಡೆ ಕೊಂಡಾಡಿದ್ದಾರೆ. ನಟ ಪ್ರಜ್ವಲ್ ದೇವರಾಜ್ ಮಾತನಾಡಿ ಈ ಚಿತ್ರದ ಬಗ್ಗೆ ಮಾತನಾಡೋದಕ್ಕೆ ನನಗೆ ತುಂಬಾ ಹೆಮ್ಮೆ ಆಗುತ್ತದೆ. ನಿಜ ಜೀವನಕ್ಕೆ ಹತ್ತಿರವಾದ ಈ ಸಿನಿಮಾ ನೋಡಿ ನಾನು ತುಂಬಾ ಭಾವುಕನಾದೆ ಎಂದಿದ್ದಾರೆ. ಇನ್ನು ನಿರಂಜನ್ ದೇಶಪಾಂಡೆ ಮಾತನಾಡಿ, ಕೆಲವು ಸಿನಿಮಾ ಬಗ್ಗೆ ಏನು ಮಾತನಾಡಬೇಕು ಅನ್ನೋದೇ ತಿಳಿಯೋದಿಲ್ಲ. ಸಿನಿಮಾ ನೋಡಿ ಆಚೆ ಬಂದ ಮೇಲೆ ಒಂದು ಕ್ಷಣ ಮೂಕವಿಸ್ಮಿತನಾದೆ. `ಆ್ಯಕ್ಟ್ 1978’ ಸಿನಿಮಾ ಒಂದು ರೆವಲೂಶನ್ ಕ್ರಿಯೇಟ್ ಮಾಡುವ ಚಿತ್ರ ಎಂದು ಪ್ರಶಂಸಿದ್ದಾರೆ. ಜೊತೆಗೆ ನಿರ್ದೇಶನ ಹಾಗೂ ಪಾತ್ರವರ್ಗಗಳ ನಟನೆಯನ್ನು ನಿರಂಜನ್ ದೇಶಪಾಂಡೆ ಕೊಂಡಾಡಿದ್ದಾರೆ.

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮಂಸೂರೆ ನಿರ್ದೇಶನದ ‘ಆ್ಯಕ್ಟ್ 1978’ ಚಿತ್ರ ನವೆಂಬರ್ 20ರಂದು ಬಿಡುಗಡೆಯಾಗಿತ್ತು. ಬಿಡುಗಡೆಯಾದ ಮೊದಲ ದಿನವೇ ಚಿತ್ರತಂಡದ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಸಿನಿರಸಿಕರಿಂದ ಚಿತ್ರಕ್ಕೆ ಸಿಕ್ಕಿತ್ತು. ಎರಡನೇ ವಾರವೂ ಚಿತ್ರ ಜನಭರಿತ ಪ್ರದರ್ಶನವನ್ನು ಕಾಣುತ್ತಿದ್ದು, ಅಭೂತಪೂರ್ವ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿದೆ. ಚಿತ್ರದ ಬಗ್ಗೆ ಕೇಳಿ ಬರುತ್ತಿದ್ದ ಮಾತುಗಳಿಂದ ಪ್ರಭಾವಿತರಾಗಿ ಪುನೀತ್ ರಾಜ್‍ಕುಮಾರ್, ಸುದೀಪ್, ದರ್ಶನ್, ಶ್ರೀಮುರಳಿ, ಖ್ಯಾತ ಹಾಗೂ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ, ನಟಿ ಆಶಿಕಾ ರಂಗನಾಥ್ ಸೇರಿದಂತೆ ಚಿತ್ರರಂಗದ ಖ್ಯಾತನಾಮರು ಹಾಗೂ ರಾಜಕೀಯ ನಾಯಕರು ಸಿನಿಮಾ ನೋಡಿ ಇಡೀ ಚಿತ್ರತಂಡಕ್ಕೆ ಶಹಬ್ಬಾಸ್ ಹೇಳಿ ‘ಆಕ್ಟ್ 1978’ ಚಿತ್ರದ ಯಶಸ್ಸಿನ ಪಯಣಕ್ಕೆ ಸಾಥ್ ನೀಡಿದ್ದರು.

ದೇವರಾಜ್. ಆರ್ ನಿರ್ಮಾಣದಲ್ಲಿ ಮೂಡಿ ಬಂದಿರುವ ‘ಆ್ಯಕ್ಟ್ 1978’ ಚಿತ್ರದಲ್ಲಿ ಯಜ್ಞಾ ಶೆಟ್ಟಿ, ದತ್ತಣ್ಣ, ಅಚ್ಯುತ್ ಕುಮಾರ್, ಸಂಚಾರಿ ವಿಜಯ್, ಶ್ರುತಿ, ಸುಧಾ ಬೆಳವಾಡಿ ಸೇರಿದಂತೆ ಸ್ಟಾರ್ ಕಲಾವಿದರು ನಟಿಸಿದ್ದಾರೆ. ಕೊರೊನಾ ಭೀತಿ ನಡುವೆಯೂ ಜನ ಚಿತ್ರವನ್ನು ಚಿತ್ರಮಂದಿರಕ್ಕೆ ಬಂದು ನೋಡಿ ಪ್ರೀತಿ ತೋರಿಸುತ್ತಿರುವುದಕ್ಕೆ ಚಿತ್ರತಂಡ ದಿಲ್‍ಖುಷ್ ಆಗಿದೆ.

Comments are closed.