
ಬಾಲಿವುಡ್‌ನಲ್ಲಿ ಹಲವು ಏಳು-ಬೀಳುಗಳನ್ನು ಕಂಡವರು ನಟ ಅಭಿಷೇಕ್ ಬಚ್ಚನ್. ಸ್ಟಾರ್ ಕಲಾವಿದ ಅಮಿತಾಭ್ ಬಚ್ಚನ್ ಅವರ ಪುತ್ರ ಎಂಬ ಕಾರಣಕ್ಕೆ ಅಭಿಷೇಕ್ ಕೂಡ ನೆಪೋಟಿಸಂನ ಫಲಾನುಭವಿ ಎಂದು ಅನೇಕರು ಟೀಕಿಸುತ್ತಾರೆ. ಅಂತಹ ಟೀಕೆಗಳನ್ನೆಲ್ಲ ಮೀರಿ ನಿಲ್ಲಲು ಅವರು ಪ್ರಯತ್ನಿಸುತ್ತಿದ್ದಾರೆ. ಈ ನಡುವೆ ಅವರು ಸಿಕ್ಕಾಪಟ್ಟೆ ಬದಲಾಗಿದ್ದಾರೆ.
ಸಂಪೂರ್ಣ ಡಿಫರೆಂಟ್ ಗೆಟಪ್‌ನಲ್ಲಿ ಅಭಿಷೇಕ್ ಬಚ್ಚನ್ ಕಾಣಿಸಿಕೊಂಡಿದ್ದಾರೆ. ಅವರ ಕೆಲವು ಫೋಟೋಗಳು ಇಂಟರ್‌ನೆಟ್‌ನಲ್ಲಿ ಲೀಕ್ ಆಗಿದ್ದು, ಸಖತ್ ವೈರಲ್ ಆಗಿವೆ. ಅದರಲ್ಲಿ ಅಭಿಷೇಕ್‌ರ ಲುಕ್ ಕಂಡವರು ನಿಜಕ್ಕೂ ಬೆರಗಾಗಲೇ ಬೇಕು. ಡೊಳ್ಳು ಹೊಟ್ಟೆ, ತೀರಾ ಸಾಧಾರಣವಾದ ಹೇರ್ ಸ್ಟೈಲ್, ಸಡಿಲವಾದ ಪ್ಯಾಂಟ್-ಶರ್ಟ್, ಹಳೇ ಕಾಲದ ಕನ್ನಡಕ ಧರಿಸಿ ಅಭಿಷೇಕ್ ಕಾಣಿಸಿಕೊಂಡಿದ್ದಾರೆ! ಈ ಬಾಲಿವುಡ್ ಸ್ಟಾರ್ ನಟನಿಗೆ ಏನಾಯಿತಪ್ಪ ಎಂದು ನೆಟ್ಟಿಗರು ಹುಬ್ಬೇರಿಸುವಷ್ಟರ ಮಟ್ಟಿಗೆ ಅಚ್ಚರಿ ನೀಡಿವೆ ಈ ಫೋಟೋಗಳು.
ಅಷ್ಟಕ್ಕೂ ಅಭಿಷೇಕ್ ಈ ರೀತಿ ಬದಲಾಗಿರುವುದು ರಿಯಲ್ ಲೈಫ್‌ನಲ್ಲಿ ಅಲ್ಲ. ಬದಲಿಗೆ, ‘ಬಾಬ್ ಬಿಸ್ವಾಸ್’ ಚಿತ್ರಕ್ಕಾಗಿ ಅವರು ಈ ಗೆಟಪ್ ಧರಿಸಿದ್ದಾರೆ. ಸದ್ಯ ಇದರ ಶೂಟಿಂಗ್ ನಡೆಯುತ್ತಿದ್ದು, ಚಿತ್ರೀಕರಣದ ಸ್ಥಳದಿಂದ ಕೆಲವು ಫೋಟೋಗಳನ್ನು ಲೀಕ್ ಮಾಡಲಾಗಿದೆ. ಆ ಮೂಲಕ ಅಭಿಷೇಕ್ ಬಚ್ಚನ್ ಅವರ ಲುಕ್ ಬಹಿರಂಗ ಆಗಿದೆ. ಅದನ್ನು ನೋಡಿದ ಬಳಿಕ ಸಿನಿಪ್ರಿಯರಿಗೆ ‘ಬಾಬ್ ಬಿಸ್ವಾಸ್’ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದೆ.
2012ರಲ್ಲಿ ಸುಜಯ್ ಘೋಷ್ ನಿರ್ದೇಶಿಸಿದ ‘ಕಹಾನಿ’ ಸಿನಿಮಾದ ಉಪಕಥೆಯ ರೀತಿಯಲ್ಲಿ ‘ಬಾಬ್ ಬಿಸ್ವಾಸ್’ ಸಿನಿಮಾ ಮೂಡಿಬರುತ್ತಿದೆ. ‘ಕಹಾನಿ’ ಚಿತ್ರದ ಒಂದು ಪಾತ್ರವನ್ನು ಆಧಾರವಾಗಿ ಇಟ್ಟುಕೊಂಡು ಈ ಸಿನಿಮಾ ತಯಾರಾಗುತ್ತಿದೆ. ಬಾಬ್ ಬಿಸ್ವಾಸ್ ಎಂಬ ಪಾತ್ರಕ್ಕೆ ಅಭಿಷೇಕ್ ಬಣ್ಣ ಹಚ್ಚುತ್ತಿದ್ದಾರೆ. ಅವರಿಗೆ ಜೋಡಿಯಾಗಿ ಚಿತ್ರಾಂಗದಾ ಸಿಂಗ್ ನಟಿಸುತ್ತಿದ್ದಾರೆ. ದಿವ್ಯಾ ಅನ್ನಪೂರ್ಣ ಘೋಷ್ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.
Comments are closed.