ಬೆಂಗಳೂರು: ಧ್ರುವ ಸರ್ಜಾ ನಟನೆಯ ‘ಪೊಗರು’ ಸಿನಿಮಾ ಯಾವಾಗ ರಿಲೀಸ್ ಪ್ಲ್ಯಾನಿಂಗ್ ಬಗ್ಗೆ ನಿರ್ದೇಶಕ ನಂದಕಿಶೋರ್ ಮಾಹಿತಿ ಹಂಚಿಕೊಂಡಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ನಂದಕಿಶೋರ್, ‘ಈಗತಾನೇ ‘ದುಬಾರಿ’ ಸಿನಿಮಾದ ಮುಹೂರ್ತ ಮಾಡಿದ್ದೇವೆ. ಡಿಸೆಂಬರ್ ಮೊದಲ ವಾರದಿಂದ ಶೂಟಿಂಗ್‌ಗೂ ತೆರಳಲಿದ್ದೇವೆ. ‘ಪೊಗರು’ ಚಿತ್ರವನ್ನು ಡಿಸೆಂಬರ್ 25ರ ಕ್ರಿಸ್‌ಮಸ್ ಹಬ್ಬದಂದು ಅಥವಾ ಜನವರಿ ತಿಂಗಳ ಸಂಕ್ರಾಂತಿ ಹಬ್ಬದಂದು ರಿಲೀಸ್ ಮಾಡುವುದಕ್ಕೆ ಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದು ಮಾಹಿತಿ ನೀಡಿದ್ದಾರೆ.
ಪ್ರಸ್ತುತ ರಿಲೀಸ್‌ಗೆ ರೆಡಿ ಇರುವ ‘ಪೊಗರು’ ಸಿನಿಮಾದಲ್ಲಿ ಕೂದಲು, ಗಡ್ಡ ಬಿಟ್ಟುಕೊಂಡು ಸಖತ್ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ ಧ್ರುವ ಸರ್ಜಾ. ಆದರೆ, ‘ದುಬಾರಿ’ ಚಿತ್ರದಲ್ಲಿ ಅವರು ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳಲಿದ್ದಾರಂತೆ. ‘ಇದು ಕೌಟುಂಬಿಕ ಚಿತ್ರವಾಗಿದೆ. ನನ್ನ ‘ರನ್ನ’ ಮತ್ತಿತರ ಸಿನಿಮಾಗಳಲ್ಲಿಇರುವಂತೆ ಇಲ್ಲಿಯೂ ಆ್ಯಕ್ಷನ್ ಸೀನ್‌ಗಳು ಇರುತ್ತದೆ. ಬಹಳ ಸ್ಟೈಲಿಶ್ ಆಗಿ ಈ ದೃಶ್ಯಗಳು ಇರಲಿವೆ. ಚಿತ್ರದಲ್ಲಿ ಧ್ರುವ ಅವರ ಪಾತ್ರ ಬೇರೆ ಥರವೇ ಇರಲಿದೆ. ಅವರಿಲ್ಲಿ ಅಲ್ಟ್ರಾ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳಲಿದ್ದಾರೆ’ ಎನ್ನುತ್ತಾರೆ ನಂದಕಿಶೋರ್.
ಉದಯ್ ಮೆಹ್ತಾ ಈ ಸಿನಿಮಾಗೆ ಹಣ ಹಾಕುತ್ತಿದ್ದಾರೆ. 4 ವರ್ಷಗಳ ಹಿಂದೆಯೇ ಧ್ರುವ ಜೊತೆ ಸಿನಿಮಾ ಮಾಡಲು ಅವರು ಕಮಿಟ್ ಆಗಿದ್ದರು. ಅದೀಗ ‘ದುಬಾರಿ’ ಮೂಲಕ ಈಡೇರಿದೆ. ‘ಈ ಸಿನಿಮಾ ಮಾಡುವುದಕ್ಕೆ ನಾನು 2 ವರ್ಷಗಳ ಹಿಂದೆ ಕಮಿಟ್ ಆದೆ. ಈ ಮೊದಲು ರೀಮೇಕ್ ಚಿತ್ರ ಕೈಗೆತ್ತಿಕೊಂಡಿದ್ದೆವು. ಆನಂತರ ಯಾಕೆ ಸ್ವಮೇಕ್ ಚಿತ್ರವನ್ನೇ ಮಾಡಬಾರದು ಎಂದು ಯೋಚಿಸಿ, ಹೊಸ ಕಥೆ ಇಟ್ಟುಕೊಂಡು ‘ದುಬಾರಿ’ ಚಿತ್ರ ಮಾಡಲು ನಿರ್ಧರಿಸಿದೆವು’ ಎನ್ನುತ್ತಾರೆ ನಿರ್ದೇಶಕರು. ಚಿತ್ರದ ನಾಯಕಿ ಪಾತ್ರಕ್ಕೆ ನಟಿಯರ ಶಾರ್ಟ್ ಲಿಸ್ಟ್ ರೆಡಿಯಾಗಿದೆ. ಕನ್ನಡದ ನಟಿಯರನ್ನೇ ಆಯ್ಕೆ ಮಾಡುವ ಉದ್ದೇಶ ತಂಡಕ್ಕಿದೆ.