ಮನೋರಂಜನೆ

‘ಈ’ ಕಾರಣದಿಂದ ಕರಿಷ್ಮಾ ಬಿಟ್ಟು ಐಶ್ವರ್ಯ ಮದುವೆಯಾದ ಅಭಿಷೇಕ್!

Pinterest LinkedIn Tumblr


ಬಾಲಿವುಡ್ ನಲ್ಲಿ ರೀಲ್ ಲೈಫ್ ಅಲ್ಲದೇ ರಿಯಲ್ ಲೈಫ್ ನಲ್ಲಿ ಯಶಸ್ವಿ ಜೋಡಿ ಎಂದರೆ ಅದು ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಜೋಡಿ. ಮದುವೆಯ ಇಷ್ಟು ವರ್ಷಗಳ ನಂತರವೂ ಕೂಡಾ ಅವರಿಬ್ಬರ ನಡುವೆಯ ಪ್ರೇಮ, ಒಬ್ಬರಿಗೊಬ್ಬರ ಬಗ್ಗೆ ಇರುವ ಕಾಳಜಿ ಹಾಗೂ ಪತಿ, ಪತ್ನಿಯಾಗಿ ಅವರು ಜವಾಬ್ದಾರಿಯನ್ನು ನಿಭಾಯಿಸುವುದು ಎಲ್ಲವೂ ಕೂಡಾ ಅವರನ್ನು ಒಂದು ಪರ್ಫೆಕ್ಟ್ ಕಪಲ್ ಎಂದು ಗುರುತಿಸಲು ಕಾರಣವಾಗಿದೆ.‌ ಆದರೆ ಐಶ್ವರ್ಯ ರೈ ಗಿಂತ ಮೊದಲು ಅಭಿಷೇಕ್ ಬಚ್ಚನ್ ಅವರು ಬಾಲಿವುಡ್ ನ ಒಬ್ಬ ಸುಂದರಿಯಾದ ನಟಿಯನ್ನು ಪ್ರೇಮಿಸಿದ್ದರು ಹಾಗೂ ಆಕೆಯ ಪ್ರೇಮದಲ್ಲಿ ಮುಳುಗಿ ಹೋಗಿದ್ದರು ಎಂಬುದು ಹಲವರಿಗೆ ತಿಳಿದಿಲ್ಲ.

ಹೌದು ಅಭಿಷೇಕ್ ಬಚ್ಚನ್ ಅವರು ಬಾಲಿವುಡ್ ಮತ್ತೊಂದು ಸ್ಟಾರ್ ಕುಟುಂಬ ಎನಿಸಿರುವ ಕಪೂರ್ ಕುಟುಂಬದ ನಟಿ, ಆ ದಿನಗಳಲ್ಲಿ ಬಾಲಿವುಡ್ ನಲ್ಲಿ ತನ್ನ ಅಂದ, ನಟನೆ ಹಾಗೂ ಡಾನ್ಸ್ ಮೂಲಕ ಯುವಕರ ನಿದ್ದೆಗೆಡಿಸಿ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದ ಕರಿಷ್ಮಾ ಕಪೂರ್ ಪ್ರೇಮದಲ್ಲಿ ಮುಳುಗಿದ್ದರು. ಅಭಿಷೇಕ್ ಮತ್ತು ಕರಿಷ್ಮಾ ಕಪೂರ್ ‘ ‘ಹಾ ಮೈನೆ ಭಿ ಪ್ಯಾರ್ ಕಿಯಾ ಹೇ’ ಸಿನಿಮಾ ಶೂಟಿಂಗ್ ವೇಳೆ ಹತ್ತಿರವಾದರು. ಇಬ್ಬರ ನಡುವೆ ಸ್ನೇಹ ಬೆಳೆದು ಅದು ಪ್ರೇಮವಾಗಲು ಹೆಚ್ಚು ದಿನಗಳು ಹಿಡಿಯಲಿಲ್ಲ. ಅಭಿಷೇಕ್ ಕರಿಷ್ಮಾ ಜೊತೆ ವಿವಾಹವಾಗಲು ನಿರ್ಧರಿಸಿದರು. 2002 ರಲ್ಲಿ ಬಚ್ಚನ್ ಹಾಗೂ ಕಪೂರ್ ಕುಟುಂಬಗಳ ಸದಸ್ಯರು ಇವರಿಬ್ಬರ ನಿಶ್ಚಿತಾರ್ಥ ಕೂಡಾ ಮಾಡಿ ಮುಗಿಸಿದರು.

ನಿಶ್ಚಿತಾರ್ಥ ಏನೋ ಆಯಿತು. ಆದರೆ ಅದು ಮದುವೆಯ ವರೆಗೂ ಮುಂದುವರೆಯಲಿಲ್ಲ. ಏಕೆಂದರೆ ನಟಿ ಕರಿಷ್ಮಾ ಕಪೂರ್ ಮದುವೆ ನಂತರ ತಾನು ಅವಿಭಕ್ತ ಕುಟುಂಬದಲ್ಲಿ ಇರುವುದಿಲ್ಲ, ಪ್ರತ್ಯೇಕವಾಗಿ ಮನೆ ಮಾಡಬೇಕೆಂದು ಬಯಸಿದರು. ಆದರೆ ಅಭಿಷೇಕ್ ತನ್ನ ತಂದೆ ತಾಯಿಯ ಮೇಲಿನ ಪ್ರೀತಿಯಿಂದಾಗಿ, ಅವರನ್ನು ಬಿಟ್ಟು ಹೋಗಲು ಒಪ್ಪಲೇ ಇಲ್ಲ. ಅಲ್ಲದೇ ಕರಿಷ್ಮಾ ರನ್ನು ಒಪ್ಪಿಸುವ ಎಲ್ಲಾ ಪ್ರಯತ್ನ ಮಾಡಿ ವಿಫಲವಾದ ಮೇಲೆ ಬೇರೆ ದಾರಿಯಿಲ್ಲದೇ ಅಭಿಷೇಕ್ ಕರಿಷ್ಮಾ ಜೊತೆಗಿನ ಸಂಬಂದಕ್ಕೆ ಅಂತ್ಯ ಹಾಡಿದರು. ಅವರ ನಿಶ್ಚಿತಾರ್ಥ ಮುರಿದು ಬಿತ್ತು.

ಇನ್ನೊಂದು ಮಾಹಿತಿಯ ಪ್ರಕಾರ ಕರಿಷ್ಮಾ ಅವರ ತಾಯಿ ಬಬಿತಾ ಗೆ ಸ್ಟಾರ್ ನಟಿಯಾಗಿರುವ ಕರಿಷ್ಮಾ ಫ್ಲಾಪ್ ನಟನಾದ ಅಭಿಷೇಕ್ ಬಚ್ಚನ್ ಜೊತೆ ಮದುವೆಯಾಗುವುದು ಇಷ್ಟ ಇರಲಿಲ್ಲವಂತೆ. ಅಲ್ಲದೇ ಅವರ ಕಿರಿ ಮಗಳು, ಕರಿಷ್ಮಾ ತಂಗಿ ಕರೀನಾ ನಟಿಸಿದ ಮೊದಲ ಸಿನಿಮಾ ಅಭಿಷೇಕ್ ನಾಯಕನಾಗಿದ್ದ ರೆಫ್ಯೂಜಿ. ಅದು ಬಾಕ್ಸ್ ಆಫೀಸನಲ್ಲಿ ಮಕಾಡೆ ಮಲಗಿತ್ತು. ಅಭಿಷೇಕ್ ಬಚ್ಚನ್ ಸಿನಿಮಾಗಳು ಒಂದರ ನಂತರ ಮತ್ತೊಂದು ಫ್ಲಾಪ್ ದಾರಿ ಹಿಡಿಯುತ್ತಿದ್ದವು. ಅದೇ ವೇಳೆ ಅಭಿಷೇಕ್ ಮತ್ತು ಕರಿಷ್ಮಾ ನಡುವೆ ಅಭಿಪ್ರಾಯ ಬೇಧವಾಗಿ ನಿಶ್ಚಿತಾರ್ಥ ಮುರಿಯುವ ವಿಚಾರದಲ್ಲಿ ಕರಿಷ್ಮಾ ತನ್ನ ತಾಯಿ ಮಾತಿಗೆ ಒಪ್ಪಿದರು ಎನ್ನಲಾಗಿದೆ.

ಹೀಗೆ ಕರಿಷ್ಮಾ ಜೊತೆ ಪ್ರೇಮಕಥೆ ಮುಗಿದ ಮೇಲೆ ಗುರು ಸಿನಿಮಾ ವೇಳೆ ಐಶ್ವರ್ಯ ರೈ ಜೊತೆ ಅಭಿಷೇಕ್ ಸ್ನೇಹವಾಯಿತು. ಕರಿಷ್ಮಾ ನೆನಪನ್ನು ಬಿಟ್ಟು ಅಭಿಷೇಕ್ ಐಶ್ವರ್ಯ ರೈಗೆ ಹತ್ತಿರವಾದರು. ಅಭಿಷೇಕ್ ಐಶ್ವರ್ಯ ರೈ ಗೆ ಪ್ರಪೋಸ್ ಮಾಡಿಯೇ ಬಿಟ್ಟರು. 2007 ರಲ್ಲಿ ಬಹಳ ಅದ್ದೂರಿಯಾಗಿ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಮದುವೆ ನಡೆಯಿತು. ಅಲ್ಲದೇ ಅಮಿತಾಬ್ ಪತ್ನಿ ಜಯಾ ಬಚ್ಚನ್ ಅವರಿಗೆ ಅವಿಭಕ್ತ ಕುಟುಂಬದ ಮೌಲ್ಯಗಳನ್ನು ಅರಿತ ಸೊಸೆ ಸಿಕ್ಕಿದ್ದು ತುಂಬಾ ಖುಷಿ ಯನ್ನು ನೀಡಿತ್ತು. ಬಚ್ಚನ್ ಕುಟುಂಬಕ್ಕೆ ತಕ್ಕ ಸೊಸೆಯಾದರು ಐಶ್ವರ್ಯ ರೈ. ಅಭಿಷೇಕ್ ಇಂದು ಪ್ರೀತಿಯ ಪತ್ನಿ ಮತ್ತು ಮುದ್ದಿನ ಮಗಳು ಆರಾಧ್ಯ ಜೊತೆ ಒಂದು ಸಂತಸದ ಜೀವನ ನಡೆಸುತ್ತಿದ್ದಾರೆ.

Comments are closed.