ಮನೋರಂಜನೆ

ಸುಶಾಂತ್‌ ಸಿಂಗ್‌ ರಜಪೂತ್‌ ಕೋಣೆಯ ಬಾಗಿಲ ಚಿಲಕ ಮುರಿದುಹೋಗಿತ್ತು: ವಿಧಿವಿಜ್ಞಾನ ತಜ್ಞರಿಂದ 4 ಸತ್ಯಗಳು ಬಯಲು!

Pinterest LinkedIn Tumblr


ದಿನದಿಂದ ದಿನಕ್ಕೆ ನಟ ಸುಶಾಂತ್‌ ಸಿಂಗ್ ರಜಪೂತ್‌ ಸಾವಿನ ಪ್ರಕರಣ ಬೇರೆ ಬೇರೆ ಸ್ವರೂಪ ಪಡೆದುಕೊಳ್ಳುತ್ತಿದೆ. ಇದು ಹೈ-ಪ್ರೊಫೈಲ್‌ ಕೇಸ್‌ ಆಗಿರುವುದರಿಂದ ಇಡೀ ದೇಶದ ಗಮನ ಸೆಳೆಯುತ್ತಿದೆ. ಪ್ರಖ್ಯಾತ ನಟ ನಿಜಕ್ಕೂ ಆತ್ಮಹತ್ಯೆ ಮಾಡಿಕೊಂಡರಾ ಅಥವಾ ಅವರನ್ನು ಹತ್ಯೆ ಮಾಡಲಾಯಿತಾ ಎಂಬ ಅನುಮಾನ ಎಲ್ಲರಲ್ಲೂ ಮೂಡಿದೆ. ಅದಕ್ಕೆ ತನಿಖೆಯಿಂದಲೇ ಉತ್ತರ ಸಿಗಬೇಕಿದೆ. ಆದರೆ ಆ ತನಿಖೆಯೇ ಸರಿಯಾಗಿ ನಡೆದಿಲ್ಲ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ.

ಇಂಥ ಅನುಮಾನಾಸ್ಪದ ಸಾವಿನ ಪ್ರಕರಣಗಳಲ್ಲಿ ವಿಧಿವಿಜ್ಞಾನ ಇಲಾಖೆಯ ತಜ್ಞರು ನೀಡುವ ವರದಿ ತುಂಬ ಮುಖ್ಯ ಆಗಿರುತ್ತದೆ. ಸುಶಾಂತ್‌ ಕೇಸ್‌ನಲ್ಲೂ ವಿಧಿವಿಜ್ಞಾನ ತಜ್ಞರು ವರದಿ ನೀಡಿದ್ದಾರೆ. ಆದರೆ ಅದರಲ್ಲಿ ಕೆಲವು ಲೋಪಗಳಾಗಿವೆ ಎಂಬ ಸುದ್ದಿ ಈಗ ಕೇಳಿಬರುತ್ತಿವೆ. ಖಾಸಗಿ ಮಾಧ್ಯಮವೊಂದು ಮಾಡಿದ ಸ್ಟಿಂಗ್‌ ಆಪರೇಷನ್‌ನಲ್ಲಿ ವಿಧಿವಿಜ್ಞಾನ ತಜ್ಞರು ಕೆಲವು ಸತ್ಯಗಳನ್ನು ಬಾಯಿ ಬಿಟ್ಟಿದ್ದಾರೆ. ಅಂದು ಅಸಲಿಗೆ ಏನಾಯಿತು ಎಂಬುದನ್ನು ಒಪ್ಪಿಕೊಂಡಿದ್ದಾರೆ.

‘ಸುಶಾಂತ್ ಅವರ ಡೈರಿಯಲ್ಲಿ ಕೆಲವು ಪುಟಗಳು ಹರಿದು ಹೋಗಿದ್ದವು. ಅದನ್ನು ಯಾರು ಹರಿದಿರಬಹುದು ಎಂದು ಊಹಿಸಲಾಗದು. ನಮ್ಮ ವರದಿಯಲ್ಲಿ ಅದನ್ನು ಬರೆದಿದ್ದೇವೆ. ಅಲ್ಲಿ ಯಾವುದೇ ರಕ್ತದ ಕಲೆ ಕಾಣಿಸಲಿಲ್ಲ. ಸುಶಾಂತ್ ನೇಣು ಬಿಗಿದುಕೊಂಡಿದ್ದರು ಎನ್ನಲಾದ ಫ್ಯಾನ್‌ ಕೂಡ ಹೆಚ್ಚು ಬೆಂಡ್‌ ಆಗಿರಲಿಲ್ಲ’ ಎಂದು ವಿಧಿವಿಜ್ಞಾನ ತಜ್ಞರು ಬಾಯಿ ಬಿಟ್ಟಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ವಿಧಿವಿಜ್ಞಾನ ತಜ್ಞರ ತಂಡ ತೆರಳಿದ್ದೇ 2 ದಿನ ತಡವಾಗಿ ಎಂಬ ವರದಿಗಳು ಕೂಡ ಕೆಲವೆಡೆ ಪ್ರಕಟ ಆಗಿವೆ!

ಈ ಎಲ್ಲ ವಿಷಯಗಳ ಬಗ್ಗೆ ಪೊಲೀಸರು ಕೂಡ ತಂಡಕ್ಕೆ ಯಾವುದೇ ಪ್ರಶ್ನೆಗಳನ್ನು ಕೇಳಿರಲಿಲ್ಲ ಎನ್ನಲಾಗಿದೆ. ಸುಶಾಂತ್‌ ಅವರ ಉಗುರಿನ ಮಾದರಿಯನ್ನೂ ಸಂಗ್ರಹಿಸಿಲ್ಲ. ಸುಶಾಂತ್ ಕೋಣೆಯ ಬಾಗಿಲು ಚಿಲಕ ಮುರಿದುಹೋಗಿತ್ತು ಎಂಬಿತ್ಯಾದಿ ಸತ್ಯಗಳು ಈಗ ಹೊರ ಬರುತ್ತಿವೆ. ಈ ಎಲ್ಲ ವಿಚಾರಗಳ ಬಗ್ಗೆ ಪೊಲೀಸರು ಸೂಕ್ತವಾಗಿ ಪ್ರಾಥಮಿಕ ತನಿಖೆ ಮಾಡಿದ್ದರೋ ಇಲ್ಲವೋ ಎಂಬ ವಿಷಯ ಈಗ ಹೆಚ್ಚು ಚರ್ಚೆ ಆಗುತ್ತಿದೆ. ಸದ್ಯ ಈ ಪ್ರಕರಣವನ್ನು ಸಿಬಿಐ ಅಧಿಕಾರಿಗಳು ಜಾಲಾಡುತ್ತಿದ್ದಾರೆ.

Comments are closed.