ಮನೋರಂಜನೆ

ನಾನು ಮಾಡುತ್ತಿರುವ ಖರ್ಚುಗಳೆಲ್ಲವೂ ಸ್ವಂತ ದುಡಿಮೆಯಿಂದ ಮಾಡಿದ್ದು, ಸುಶಾಂತ್​ ಹಣವನ್ನು ಲಪಟಾಯಿಸಿಲ್ಲ

Pinterest LinkedIn Tumblr


ಮುಂಬೈ: ತಾವು ಖರೀದಿಸಿರುವ ವಸ್ತುಗಳು ಮತ್ತು ಮಾಡುತ್ತಿರುವ ಖರ್ಚುಗಳೆಲ್ಲವೂ ಸ್ವಂತ ದುಡಿಮೆಯಿಂದ ಮಾಡಿದ್ದು. ಸುಶಾಂತ್​ ಸಿಂಗ್​ ರಜಪೂತ್​ ಅವರ ಒಂದು ರೂಪಾಯಿಯನ್ನು ಕೂಡ ಅದಕ್ಕಾಗಿ ಬಳಸಿಲ್ಲ, ಲಪಟಾಯಿಸಿಲ್ಲ ಎಂದು ಬಾಲಿವುಡ್​ ನಟಿ ರಿಯಾ ಚಕ್ರವರ್ತಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಸ್ಪಷ್ಟಪಡಿಸಿದ್ದಾರೆ.

ಎರಡು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡ ಬಾಲಿವುಡ್​ ನಟರಾಗಿದ್ದ ಸುಶಾಂತ್​ ಸಿಂಗ್​ ರಜಪೂತ್​ ಅವರ ಜತೆ ಸಂಬಂಧ ಹೊಂದಿದ್ದ ರಿಯಾ ಅವರು ಸುಶಾಂತ್​ ಅವರ ಬ್ಯಾಂಕ್​ ಖಾತೆಯಿಂದ 15 ಕೋಟಿ ರೂ. ನಗದನ್ನು ತಮ್ಮ ಹಾಗೂ ತಮ್ಮ ಸಂಬಂಧಿಕರ ಬ್ಯಾಂಕ್​ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ ಎಂದು ಸುಶಾಂತ್​ ಅವರ ತಂದೆ ಕೆ.ಕೆ. ಸಿಂಗ್​ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ರಿಯಾ ಅವರನ್ನು ಶುಕ್ರವಾರ ವಿಚಾರಣೆಗೆ ಕರೆದಿತ್ತು. ಅಂದಾಜು 8 ಗಂಟೆ ವಿಚಾರಣೆಗೆ ಒಳಗಾಗಿದ್ದ ರಿಯಾ, ತಮ್ಮ ವಿರುದ್ಧ ಮಾಡಲಾಗಿರುವ ಎಲ್ಲ ಆರೋಪಗಳನ್ನು ಅಲ್ಲಗಳೆದರು ಎನ್ನಲಾಗಿದೆ.

ಅಲ್ಲದೆ, ತಾವು ಸುಶಾಂತ್​ ಅವರ ಹಣವನ್ನು ಲಪಟಾಯಿಸಿಲ್ಲ ಎಂದು ಹೇಳಿದರು ಎಂದು ಜಾರಿ ನಿರ್ದೇಶನಾಲಯದ ಮೂಲಗಳು ಹೇಳಿವೆ.
ಸುಶಾಂತ್​ ಅವರ ಮೂರು ಕಂಪನಿಗಳಲ್ಲಿ ಪಾಲುದಾರರಾಗಿರುವ ರಿಯಾ ಅವರು ಆ ಕಂಪನಿಗಳ ಒಟ್ಟಾರೆ ಹೂಡಿಕೆ 1 ಲಕ್ಷ ರೂ. ಆಗಿದ್ದು, ಅದನ್ನು ಸುಶಾಂತ್​, ತಾವು ಹಾಗೂ ತಮ್ಮ ಸಹೋದರ ಶೌವಿಕ್​ ಚಕ್ರವರ್ತಿ ಅವರು ಸ್ವಂತ ದುಡಿಮೆಯಿಂದ ಮಾಡಿರುವ ಹೂಡಿಕೆಯಾಗಿದೆ. ಇದನ್ನು ಹೊರತುಪಡಿಸಿ, ತಾವು ಒಂದು ರೂಪಾಯಿಯನ್ನೂ ಹೆಚ್ಚಾಗಿ ಆ ಕಂಪನಿಗಳಲ್ಲಿ ತೊಡಗಿಸಿಲ್ಲ ಎಂದು ಸ್ಪಷ್ಟಪಡಿಸಿದರು ಎನ್ನಲಾಗಿದೆ.

ರಿಯಾ ಮತ್ತು ಅವರ ಕುಟುಂಬದವರು ಇತ್ತೀಚೆಗೆ ಖರೀದಿಸಿರುವ ಎರಡು ಆಸ್ತಿಗಳು ಅದರಲ್ಲೂ ವಿಶೇಷವಾಗಿ ಮುಂಬೈನ ಖಾರ್​ (ಪೂರ್ವ)ದಲ್ಲಿ ಖರೀದಿಸಿರುವ ಫ್ಲ್ಯಾಟ್​ ಕುರಿತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ರಿಯಾ ಅವರನ್ನು ಪ್ರಶ್ನಿಸಿದರು. ಅದಕ್ಕೆ ರಿಯಾ ಅವರು ತಾವು 60 ಲಕ್ಷ ರೂ. ಅನ್ನು ಗೃಹ ಸಾಲವಾಗಿ ಪಡೆದಿದ್ದು, ಅಂದಾಜು 25 ಲಕ್ಷ ರೂ.ಗಳನ್ನು ತಾವು ತಮ್ಮ ಸ್ವಂತ ದುಡಿಮೆಯಿಂದ ಪಾವತಿಸಿದ್ದಾಗಿ ವಿವರಣೆ ನೀಡಿದರು ಎನ್ನಲಾಗಿದೆ.

ಶುಕ್ರವಾರದಂದು ರಿಯಾ ಅವರ ಸಹೋದರ ಶೌವಿಕ್​ ಚಕ್ರವರ್ತಿ ಅವರನ್ನು ಕೂಡು ವಿಚಾರಣೆಗೆ ಒಳಪಡಿಸಿದ್ದರು. ಅಲ್ಲದೆ, ಸೋಮವಾರ (ಆ.10) ವಿಚಾರಣೆಗೆ ಬರುವಂತೆ ಶೌವಿಕ್​ ಚಕ್ರವರ್ತಿ ಮತ್ತು ರಿಯಾ ಅವರ ತಂದೆ ಇಂದ್ರಜಿತ್​ ಚಕ್ರವರ್ತಿ ಅವರಿಗೂ ನೋಟಿಸ್​ ನೀಡಿದೆ. ರಿಯಾ ಅವರನ್ನು ಮತ್ತೊಮ್ಮೆ ವಿಚಾರಣೆಗೆ ಕರೆಸುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ದಿನಾಂಕ ಇನ್ನೂ ನಿಗದಿಯಾಗಿಲ್ಲ ಎಂದು ಜಾರಿ ನಿರ್ದೇಶನಾಲಯದ ಮೂಲಗಳು ತಿಳಿಸಿವೆ.

ರಿಯಾ ಮತ್ತು ಶೌವಿಕ್​ ಅಲ್ಲದೆ, ರಿಯಾ ಅವರ ಲೆಕ್ಕಪರಿಶೋಧಕ ರಿತೇಶ್​ ಷಾ ಮತ್ತು ಸುಶಾಂತ್​ ಸಿಂಗ್​ ರಜಪೂತ್​ ಅವರ ಮಾಜಿ ಬಿಜಿನೆಸ್​ ಮ್ಯಾನೇಜರ್​ ಶ್ರುತಿ ಮೋದಿ ಅವರನ್ನು ಕೂಡ ಶುಕ್ರವಾರ ವಿಚಾರಣೆಗೆ ಒಳಪಡಿಸಿತ್ತು. ಇದಕ್ಕೂ ಮುನ್ನ ಸುಶಾಂತ್​ ಅವರ ಹೌಸ್​ ಮ್ಯಾನೇಜರ್​ ಸ್ಯಾಮುಯೆಲ್​ ಮಿರಾಂಡಾ ಅವರು ಎರಡು ದಿನ ನಿರಂತರವಾಗಿ ವಿಚಾರಣೆಗೆ ಒಳಪಡಿಸಿತ್ತು. ಇದೀಗ ಸುಶಾಂತ್​ ಅವರ ಫ್ಲ್ಯಾಟ್​ಮೇಟ್​ ಸಿದ್ಧಾರ್ಥ ಪಿಥಾನಿ ಅವರನ್ನು ವಿಚಾರಣೆಗೆ ಬರುವಂತೆ ನೋಟಿಸ್​ ಜಾರಿ ಮಾಡಿದೆ.

ಟಿವಿ ಧಾರವಾಹಿಗಳ ನಟರಾಗಿ ವೃತ್ತಿಜೀವನ ಆರಂಭಿಸಿದ್ದ ಸುಶಾಂತ್​ ಸಿಂಗ್​ ರಜಪೂತ್​ ಬಾಲಿವುಡ್​ ನಟರಾಗಿ ಗುರುತಿಸಿಕೊಂಡಿದ್ದರು. ಇವರು ಮುಂಬೈನ ತಮ್ಮ ಫ್ಲ್ಯಾಟ್​ನಲ್ಲಿ ಜೂ.14ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಇವರ ಆತ್ಮಹತ್ಯೆಗೆ ಕಾರಣಗಳು ನಿಗೂಢವಾಗಿವೆ. ಆದರೆ, ತಮ್ಮ ಪುತ್ರನ ಆತ್ಮಹತ್ಯೆಗೆ ರಿಯಾ ಚಕ್ರವರ್ತಿ ಅವರ ಪ್ರಚೋದನೆ ಕಾರಣ. ಅವರು ಸುಶಾಂತ್​ ಅವರ ಹಣವನ್ನು ಲಪಟಾಯಿಸಿದ್ದಾರೆ ಎಂದು ಆರೋಪಿಸಿ ಸುಶಾಂತ್​ ಅವರ ತಂದೆ ಕೆ.ಕೆ. ಸಿಂಗ್​ ಬಿಹಾರ ಪೊಲೀಸರಿಗೆ ದೂರು ನೀಡಿದ್ದರು. ಇದರಲ್ಲಿ ರಿಯಾ ಅವರು 15 ಕೋಟಿ ರೂ. ಲಪಟಾಯಿಸಿರುವ ಆರೋಪವೂ ಇರುವ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಈ ಕುರಿತು ವಿಚಾರಣೆ ನಡೆಸುತ್ತಿದೆ.

Comments are closed.