ಮನೋರಂಜನೆ

ಹುಟ್ಟುಹಬ್ಬಕ್ಕೆ 3 ಲಕ್ಷ ಕೆಲಸ ಘೋಷಿಸಿದ ಬಾಲಿವುಡ್ ನಟ ಸೋನು ಸೂದ್​

Pinterest LinkedIn Tumblr


ಕಳೆದ ಮೂರು ತಿಂಗಳುಗಳಲ್ಲಿ ಸೋನು ಸೂದ್​ ಅದೆಷ್ಟು ಜನರಿಗೆ ಸಹಾಯ ಮಾಡಿದ್ದಾರೋ ಲೆಕ್ಕ ಇಟ್ಟವರಿಲ್ಲ. ಹಸಿದವರಿಗೆ ಊಟ ಕೊಟ್ಟರು, ಊರು ಬಿಟ್ಟವರನ್ನು ಊರು ಸೇರಿಸಿದರು, ಕಷ್ಟದಲ್ಲಿರುವವರಿಗೆ ಹಣಕಾಸಿನ ಸಹಾಯವನ್ನೂ ಮಾಡಿದರು. ಈಗ ಅವರು ಮೂರು ಲಕ್ಷ ಕೆಲಸ ಕೊಡಿಸುವುದಾಗಿ ಘೋಷಿಸಿದ್ದಾರೆ.

ಜುಲೈ 30 ಸೋನು ಅವರ ಹುಟ್ಟುಹಬ್ಬ. ತಮ್ಮ 47ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವ ಸೋನು, ಈ ಸಂದರ್ಭದಲ್ಲಿ ವಲಸೆ ಕಾರ್ಮಿಕರಿಗೆ ಮೂರು ಲಕ್ಷ ಜನರಿಗೆ ಕೆಲಸ ಕೊಡಿಸುವುದಾಗಿ ಘೋಷಿಸಿದ್ದಾರೆ.

ವಲಸೆ ಕಾರ್ಮಿಕರನ್ನು ತಮ್ತಮ್ಮ ಊರಿಗೆ ತಲುಪಿಸುವುದರ ಜತೆಗೆ, ಪ್ರವಾಸಿ ರೋಜಗಾರ್ ಎಂಬ ಆ್ಯಪ್ ಶುರು ಮಾಡಿ, ಅದರ ಮೂಲಕ ಕೆಲಸ ಕೊಡಿಸುವುದಾಗಿಯೂ ಘೋಷಿಸಿದ್ದರು ಸೋನು. ಈಗ ಅವರು ಹಲವು ದೊಡ್ಡದೊಡ್ಡ ಸಂಸ್ಥೆಗಳೊಂದಿಗೆ ಟೈಅಪ್​ ಮಾಡಿಕೊಂಡಿದ್ದಾರೆ. ಅಗತ್ಯವಿರುವವರು ಅವರ ಆ್ಯಪ್ನಲ್ಲಿ ಯಾವ್ಯಾವ ಕೆಲಸ ಇದೆ ಎಂದು ತಿಳಿದುಕೊಂಡು ಅರ್ಜಿ ಹಾಕಬಹುದಾಗಿದೆ. ಕೆಲಸದ ಜತೆಗೆ ಪ್ರಾವಿಡೆಂಟ್​ ಫಂಡ್​, ಇಎಸ್​ಐ ಸೇರಿದಂತೆ ಬೇರೆಬೇರೆ ಸೌಲಭ್ಯಗಳೂ ಸಿಗಲಿದೆಯಂತೆ.

ಈಗಾಗಲೇ ಅವರು ಬಿಗ್​ ಬಜಾರ್, ಸೊಡೆಕ್ಸೋ, ಅಮಾಜಾನ್​, ಕ್ವೆಸ್​ ಕಾರ್ಪ್​, ಟ್ರೈಡೆಂಡ್​, ಅರ್ಬನ್ ಕೋ, ಪೋರ್ಷಿಯಾ ಸೇರಿದಂತೆ ಹಲವು ಸಂಸ್ಥೆಗಳೊಂದಿಗೆ ಟೈಪ್​ ಮಾಡಿಕೊಂಡಿದ್ದಾರೆ. ಆ ಸಂಸ್ಥೆಗಳಲ್ಲಿ ಲಭ್ಯವಿರುವ ಕೆಲಸಗಳನ್ನು ಪ್ರವಾಸಿ ರೋಜಗಾರ್​ ಆ್ಯಪ್ನಲ್ಲಿ ಡಿಸ್​ಪ್ಲೇ ಆಗಲಿದೆ. ತಾವಿರುವ ಊರುಗಳಲ್ಲಿ ಯಾವ್ಯಾವ ಕೆಲಸವಿದೆ ಎಂದು ಹುಡುಕಿಕೊಂಡು, ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದಾಗಿದೆ.

ಈ ಕುರಿತು ಮಾತನಾಡಿರುವ ಅವರು, ‘ನನ್ನ ಹುಟ್ಟುಹಬ್ಬದಂದು, ನನ್ನ ಕಡೆಯಿಂದ ಸಣ್ಣ ಪ್ರಯತ್ನ ಇದು. ಪ್ರವಾಸಿ ರೋಜಗಾರ್​ನಡಿ ನಾವು ಮೂಲಕ ನಾವು ದೊಡ್ಡ ದೊಡ್ಡ ಸಂಸ್ಥೆಗಳ ಜತೆಗೆ ಟೈಅಪ್ ಮಾಡಿಕೊಂಡಿದ್ದೇವೆ. ಅಗತ್ಯವಿರುವವರು ಬಳಸಿಕೊಳ್ಳಬಹುದು’ ಎನ್ನುವುದರ ಜತೆಗೆ, ಟೈಅಪ್​ ಮಾಡಿಕೊಂಡವರಿಗೆ ಧನ್ಯವಾದಗಳನ್ನೂ ಸಲ್ಲಿಸಿದ್ದಾರೆ.

ಇನ್ನು ಈ ಆ್ಯಪ್ ಹುಟ್ಟಿಕೊಂಡ ಬಗ್ಗೆ ಮಾತನಾಡಿರುವ ಅವರು, ‘ವಲಸೆ ಕಾರ್ಮಿಕರನ್ನು ಭೇಟಿ ಮಾಡಿದ ಸಂದರ್ಭದಲ್ಲಿ, ಹಲವರು ಕೆಲಸದ ಬಗ್ಗೆಯೇ ಮಾತನಾಡುತ್ತಿದ್ದರು. ಊರಿಗೆ ಹೋಗಿ ಏನು ಮಾಡುವುದು, ಅಲ್ಲಿ ಕೆಲಸ ಸಿಗುತ್ತದೋ ಇಲ್ಲವೋ ಎಂಬ ಭಯ ವ್ಯಕ್ತಪಡಿಸುತ್ತಿದ್ದರು. ಹಾಗಾಗಿ ಬರೀ ಊರಿಗೆ ತಲುಪಿಸುವುದಷ್ಟೇ ಅಲ್ಲ, ಅವರಿಗೆ ಕೆಲಸ ಕೊಡಿಸುವ ಪ್ರಯತ್ನ ಮಾಡಬೇಕು ಎಂದು ಯೋಚಿಸಿದಾಗ ಹುಟ್ಟಿಕೊಂಡಿದ್ದೇ ಈ ಆ್ಯಪ್’ ಎಂದು ಸೋನು ಹೇಳಿಕೊಂಡಿದ್ದಾರೆ.

Comments are closed.