ಕರ್ನಾಟಕ

ಚಿಕಿತ್ಸೆ ಸಿಗದೆ ನರಳಿ ಪ್ರಾಣಬಿಟ್ಟ ಯುವತಿ; ಹೆತ್ತವರಿಗೆ ಮುಖ ತೋರಿಸದೆ ಅಂತ್ಯಸಂಸ್ಕಾರ

Pinterest LinkedIn Tumblr


ಚಿಕ್ಕಮಗಳೂರು: ಪ್ಲೀಸ್.. ನಮ್ಮ ಹುಡುಗಿಗೆ ಚಿಕಿತ್ಸೆ ಕೊಡಿ.. ದಯವಿಟ್ಟು ಹೇಗಾದರೂ ಮಾಡಿ ದಾಖಲಿಸಿಕೊಳ್ಳಿ.. ನಿಮ್ಮ ದಮ್ಮಯ್ಯ.. ಕಾಲಿಗೆ ಬೀಳ್ತೀವಿ.. ನನ್ ಮುದ್ದಿನ ಮಗಳು, ತುಂಬಾ ಸುಸ್ತಾಗಿದ್ದಾಳೆ…. ಹೀಗೆ ಹೆತ್ತವರು ಕಣ್ಣೀರಿಟ್ಟರು ಕರಗಲಿಲ್ಲ ಖಾಸಗಿ ಆಸ್ಪತ್ರೆಯವರ ಮನಸು. ಕೊರೋನಾ ಟೆಸ್ಟ್ ವರದಿ ತಂದರೆ ಮಾತ್ರ ಚಿಕಿತ್ಸೆಗೆ ದಾಖಲಿಸಿಕೊಳ್ಳುವುದಾಗಿ ಹೇಳಿ, ಕೊನೆಗೆ ಎಲ್ಲೂ ಚಿಕಿತ್ಸೆ ಸಿಗದೆ ಯುವತಿಯೊಬ್ಬಳು ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಕಾಫಿನಾಡಿನಲ್ಲಿ ನಡೆದಿದೆ.

ಚಿಕ್ಕಮಗಳೂರು ನಗರದ ಗೌರಿಕಾಲುವೆಯ 20 ವರ್ಷದ ನಾಫೀಯಾ ಚಿಕಿತ್ಸೆ ಸಿಗದೆ ಕೊನೆಯುಸಿರೆಳೆದ ದುರ್ದೈವಿ. ವಿಶೇಷಚೇತನ ಯುವತಿಯಾಗಿದ್ದ ನಾಫೀಯಾ ವಿಧಿಯ ಅಟ್ಟಹಾಸಕ್ಕೆ ಬಲಿಯಾಗಿದ್ದಲ್ಲ, ಬದಲಾಗಿ ನಮ್ಮ ಕೆಟ್ಟ ವ್ಯವಸ್ಥೆ ಸಿಲುಕಿ ಉಸಿರು ಚೆಲ್ಲಿದ್ದಾಳೆ. ಹೌದು, ಕಳೆದ ಜುಲೈ 24ರಂದು ತೀವ್ರ ಜ್ವರದಿಂದ ಬಳಲುತ್ತಿದ್ದ ಯುವತಿಯನ್ನು ಪೋಷಕರು ನಗರದ ಖಾಸಗಿ ಆಸ್ಪತ್ರೆಗಳಿಗೆಲ್ಲಾ ಕರೆದುಕೊಂಡು ಹೋಗಿದ್ದಾರೆ. ಆದರೆ ಬಾಲಕಿ ಸಾವು -ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರೂ ಕೋವಿಡ್ ಟೆಸ್ಟ್ ಮಾಡಿಸದೇ ಆಸ್ಪತ್ರೆಗೆ ದಾಖಲಿಸಿಕೊಳ್ಳಲ್ಲ ಅಂತಾ ಆಸ್ಪತ್ರೆಯಿಂದ ಹೊರಗಡೆ ಕಳುಹಿಸಿಕೊಟ್ಟಿದ್ದಾರೆ. ಕೊನೆಗೆ ಟೆಸ್ಟ್ ಮಾಡಿಸಲು ಹೋದರೂ, ಈಗ ಆಗಲ್ಲ ಅಂತಾ ಒಂದೂವರೆ ಗಂಟೆ ಕಾಲ ಕಾಯಿಸಲಾಗಿದೆಯಂತೆ. ಆ ಬಳಿಕ ವಿಧಿಯಿಲ್ಲದೇ ಜಿಲ್ಲಾಸ್ಪತ್ರೆಗೆ ತಂದು ಆಡ್ಮೀಟ್ ಮಾಡುವಷ್ಟರಲ್ಲಿ ಯುವತಿಯ ಪ್ರಾಣಪಕ್ಷಿ ಹಾರಿಹೋಗಿದೆ.

ಯುವತಿ ಸಾವನ್ನಪ್ಪಿದ್ದ ಮೇಲೆ ಕೊರೋನಾದಿಂದ ಮೃತಪಟ್ಟಿರಬಹುದು ಅಂತಾ ಪೋಷಕರು ಸೇರಿದಂತೆ ಸಂಬಂಧಿಕರನ್ನೂ ಕೂಡ ಹತ್ತಿರ ಬಿಡದ ಆಸ್ಪತ್ರೆ ಸಿಬ್ಬಂದಿ ಕೋವಿಡ್ ನಿಯಮದಂತೆ ಯುವತಿಯ ಅಂತ್ಯಸಂಸ್ಕಾರ ಮಾಡಿದ್ದಾರೆ. ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ತಾಯಿಗೂ ಬಾಲಕಿಯ ಮುಖವನ್ನು ನೋಡಲು ಕೂಡ ಬಿಡದೇ ಹೊರಕಳಿಸಿದ್ದಾರೆ. ಮೃತ ಯುವತಿಯ ಮನೆಯನ್ನು ಸೀಲ್ ಡೌನ್ ಮಾಡಿದ್ದಾರೆ. ವಿಪರ್ಯಾಸ ಅಂದರೆ ಮೃತ ಯುವತಿಯ ಕೋವಿಡ್ ವರದಿ ಬಂದಿದ್ದು, ಯುವತಿಗೆ ಕೊರೋನಾ ಇರಲಿಲ್ಲ ಅನ್ನೋದು ಖಚಿತವಾಗಿದೆ.

ಒಂದು ಕಡೆ ಸಕಾಲಕ್ಕೆ ಚಿಕಿತ್ಸೆ ದೊರೆಯದೇ ಹೆತ್ತವರು ಮಗಳನ್ನ ಕಳೆದುಕೊಳ್ಳುವಂತಾದರೆ, ಮತ್ತೊಂದೆಡೆ ಕೊರೋನಾದಿಂದ ಮೃತಪಡದಿದ್ರೂ ಕೊರೋನಾ ಸೋಂಕಿನಿಂದ ಸತ್ತಿದ್ದಾಳೆ ಅಂತ ಮಗಳ ಮುಖವನ್ನು ಕೊನೆಯದಾಗಿ ನೋಡಲು ಬಿಡದಿರುವುದು ತಾಯಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಮಧ್ಯೆ ಮೃತ ಯುವತಿಯ ಮನೆಯ ರಸ್ತೆಯನ್ನು ಸೀಲ್ ಡೌನ್ ಮಾಡಿರುವುದರಿಂದ ಅಕ್ಕಪಕ್ಕದವರು ಈ ಕುಟುಂಬವನ್ನು ಅಸ್ಪೃಶ್ಯರಂತೆ ನೋಡುತ್ತಿರುವುದು ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಒಂದು ಕಡೆ ಖಾಸಗಿ ಆಸ್ಪತ್ರೆಗಳ ಅಮಾನವೀಯ ವರ್ತನೆ, ಇನ್ನೊಂದೆಡೆ ಜಿಲ್ಲಾಸ್ಪತ್ರೆಯಲ್ಲಿ ಸಿಬ್ಬಂದಿಗಳ ಯಡವಟ್ಟಿನಿಂದ ಮಗಳನ್ನು ಕಳೆದುಕೊಂಡ ತಾಯಿ ಅನುಭವಿಸಿದ ಕಷ್ಟ ನಿಜಕ್ಕೂ ಕಣ್ಣೀರು ತರಿಸುತ್ತೆ.

Comments are closed.