ಮಲಯಾಳಂ ಚಿತ್ರರಂಗದಲ್ಲಿ ತಮ್ಮದೇ ಆದ ಖ್ಯಾತಿ ಹೊಂದಿರುವ ಮಂಜು ವಾರಿಯರ್ ಇತ್ತೀಚೆಗೆ ಬಿಡುಗಡೆಯಾದ ತಮಿಳಿನ ‘ಅಸುರನ್’ ಚಿತ್ರದ ಮೂಲಕ ತಮ್ಮ ಸ್ಟಾರ್‌ಗಿರಿಯನ್ನು ಮತ್ತಷ್ಟು ಹೆಚ್ಚಿಸಿಕೊಂಡರು. ಈಗ ಕನ್ನಡದಲ್ಲಿ ಯೋಗಿ ನಟನೆಯ ‘ಅಕಟಕಟ’ ಚಿತ್ರಕ್ಕೆ ಅವರನ್ನು ಕರೆತರಲು ನಿರ್ದೇಶಕ ನಾಗರಾಜ್ ಸೋಮಯಾಜಿ ಪ್ರಯತ್ನ ನಡೆಸುತ್ತಿದ್ದಾರೆ.
‘ನಮ್ಮ ಸಿನಿಮಾದಲ್ಲಿ ಯೋಗಿ ಅವರ ತಾಯಿಯ ಕ್ಯಾರೆಕ್ಟರ್ ಸಖತ್ ಪವರ್‌ಫುಲ್ ಆಗಿದೆ. ಆ ಪಾತ್ರಕ್ಕೆ ಅವರು ಬಂದರೆ ಬಹಳ ಚೆನ್ನಾಗಿರುತ್ತದೆ ಎಂದು ಅವರನ್ನು ಸಂಪರ್ಕಿಸಿದ್ದೇವೆ. ಅವರು ಅಲ್ಲಿಗೆ ಬಂದು ಕಥೆ ಹೇಳಿ ಎಂದು ಹೇಳಿದ್ದಾರೆ. ಸದ್ಯ ಲಾಕ್‌ಡೌನ್ ಇರುವುದರಿಂದ ಮುಂದಿನ ವಾರ ಕೇರಳಕ್ಕೆ ಹೋಗಿ ಕಥೆ ಹೇಳಿ ಬರುತ್ತೇನೆ’ ಎನ್ನುತ್ತಾರೆ ನಿರ್ದೇಶಕ ನಾಗರಾಜ್ ಸೊಮಯಾಜಿ.
ಈ ಸಿನಿಮಾದ ಫಸ್ಟ್ ಲುಕ್ ಗಮನ ಸೆಳೆದಿತ್ತು. ಯೋಗಿ ಕಥೆ ಕೇಳಿದ ಮರುಕ್ಷಣವೇ ಸಿನಿಮಾ ಮಾಡುವುದಾಗಿ ಒಪ್ಪಿಕೊಂಡಿದ್ದರು. ಒಟ್ಟಿನಲ್ಲಿ ಎಲ್ಲವೂ ಅಂದುಕೊಂಡಂತೆ ಆದರೆ ಮಂಜು ವಾರಿಯರ್ ಕನ್ನಡಕ್ಕೆ ಬರಲಿದ್ದಾರೆ. ಯೋಗಿ ಜನ್ಮದಿನದ (ಜು.6) ಪ್ರಯುಕ್ತ ‘ಅಕಟಕಟ’ ಚಿತ್ರದ ಶೀರ್ಷಿಕೆ ಘೋಷಣೆ ಆಯಿತು. ಇಂಥ ಕ್ಯಾಚಿ ಟೈಟಲ್‌ನಿಂದಾಗಿ ಸಿನಿಪ್ರಿಯರಲ್ಲಿ ಕೌತುಕ ಮೂಡಿದೆ.
ಯೋಗಿ ವೃತ್ತಿಬದುಕಿನಲ್ಲಿ ಇದು ವಿಭಿನ್ನ, ವಿಶಿಷ್ಠ ಮತ್ತು ವೈಶಿಷ್ಟ್ಯ ಭರಿತ ಅಂಶಗಳಿಂದ ತುಂಬಿರುವ ಪಕ್ಕಾ ಕಮರ್ಷಿಯಲ್ ಎಂಟರ್‌ಟೈನಿಂಗ್ ಸಿನಿಮಾವಾಗಲಿದೆ ಎಂಬುದು ಚಿತ್ರತಂಡದ ನಂಬಿಕೆ. ‘ಸೌಂಡ್ ಆಫ್ ಅಬ್‌ನಾರ್ಮಲ್ ಸೋಲ್ ಆ್ಯಂಡ ಮೈಂಡ್’ ಎಂಬ ಟ್ಯಾಗ್ ಲೈನ್ ಈ ಚಿತ್ರಕ್ಕಿದೆ.
ಇದಲ್ಲದೆ, ‘ಒಂಭತ್ತನೇ ದಿಕ್ಕು’ ಚಿತ್ರದಲ್ಲೂ ಯೋಗಿ ನಟಿಸಿದ್ದಾರೆ. ಆ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯು/ಎ ಪ್ರಮಾಣ ಪತ್ರ ಸಿಕ್ಕಿದೆ. ಅದರಲ್ಲಿ ಯೋಗಿಗೆ ಜೋಡಿಯಾಗಿ ಅದಿತಿ ಪ್ರಭುದೇವ ಅಭಿನಯಿಸಿದ್ದಾರೆ. ನಿರ್ದೇಶಕ ದಯಾಳ್ ಅವರ ಡಿ ಪಿಕ್ಚರ್ಸ್, ಗುರು ದೇಶಪಾಂಡೆ ಅವರ ಜಿ. ಸಿನಿಮಾಸ್ ಹಾಗೂ ಚೆನ್ನೈ ಮೂಲದ ಕೆ9 ಸ್ಟುಡಿಯೋ ಜಂಟಿಯಾಗಿ ‘ಒಂಭತ್ತನೇ ದಿಕ್ಕು’ ನಿರ್ಮಾಣ ಮಾಡಿವೆ. ಇದರ ಜೊತೆಗೆ ‘ಪರಿಮಳಾ ಲಾಡ್ಜ್’ ಸಿನಿಮಾದಲ್ಲೂ ಯೋಗಿ ಅಭಿನಯಿಸುತ್ತಿದ್ದಾರೆ.
Comments are closed.