ರಾಷ್ಟ್ರೀಯ

ಐದು ತಿಂಗಳ ಪ್ರೀತಿಗೆ ಬ್ರೇಕ್​ಅಪ್​ ಎಂದ ಯುವತಿಯ ಹತ್ಯೆ

Pinterest LinkedIn Tumblr


ಕೋಯಮತ್ತೂರು: ಕೇವಲ ಐದು ತಿಂಗಳಿಂದ ಅವರಿಬ್ಬರೂ ಪ್ರೇಮಿಸಲು ಆರಂಭಿಸಿದ್ದರು. ಆದರೆ, ತನ್ನ ಪಾಲಕರ ಬುದ್ಧಿಮಾತು ಕೇಳಿದ ಹುಡುಗಿ ಬ್ರೇಕ್​ಅಪ್​ ಆಗೋಣ ಎಂದಳು. ಆದರೆ, ಇದಕ್ಕೆ ಒಪ್ಪದ ಹುಡುಗ ಶುಕ್ರವಾರ ರಾತ್ರಿ ಹುಡುಗಿಯ ಮನೆಗೆ ನುಗ್ಗಿದವನೇ ಪ್ರೀತ್ಸೆ, ಪ್ರೀತ್ಸೆ ಎಂದು ಪೀಡಿಸಿದ. ಇದಕ್ಕೆ ಒಪ್ಪದಿದ್ದಾಗ ಆಕೆಯ ಹೊಟ್ಟೆಗೆ ಬಲವಾಗಿ ಐದಾರು ಬಾರಿ ಇರಿದ. ಬಿಡಿಸಲು ಬಂದ ಆಕೆಯ ತಂದೆಯ ಕೈಗೂ ಇರಿದು ಪರಾರಿಯಾಗಿದ್ದಾನೆ.

ಕೊಯಮತ್ತೂರಿನ ಪೆರೂರು ಸಮೀಪದ ಆರ್ಮುಗಗೌಂಡನೂರು ನಿವಾಸಿ, ಮೊದಲ ವರ್ಷದ ಬಿ.ಕಾಂ ವಿದ್ಯಾರ್ಥಿನಿ ಐಶ್ವರ್ಯಾ (18) ಮೃತಪಟ್ಟವಳು. ಶಕ್ತಿವೇಲ್​ ಗಾಯಗೊಂಡವರು. ಸಿ. ರತೀಶ್​​ (20) ಕೊಲೆ ಮಾಡಿದವನು. ಗಂಭೀರವಾಗಿ ಗಾಯಗೊಂಡಿದ್ದ ಐಶ್ವರ್ಯಾಳನ್ನು ಕೊಯಮತ್ತೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಕೆ ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಬೆಳಗ್ಗೆ ಮೃತಪಟ್ಟಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಐಶ್ವರ್ಯಾ ಮತ್ತು ಆರ್ಮುಗಗೌಂಡನೂರಿನ ಎಂ.ಆರ್​. ಗಾರ್ಡನ್​ ನಿವಾಸಿ ಶಕ್ತಿವೇಲ್​ ಅವರ ಪುತ್ರಿ ಐಶ್ವರ್ಯಾ ಪೆರೂರಿನ ತಾವತಿರು ಶಾಂತಲಿಂಗ ಅಡಿಗಳರ್​ ಕಲೆ, ವಿಜ್ಞಾನ ಮತ್ತು ತಮಿಳು ಕಾಲೇಜಿನಲ್ಲಿ ಮೊದಲ ವರ್ಷದ ಬಿ.ಕಾಂನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಇದೇ ಬಡಾವಣೆಯ ನಿವಾಸಿ ರತೀಶ್​ ವರ್ಕ್​ಶಾಪ್​ಗಳಲ್ಲಿ ಮೋಟಾರು ವೈಂಡಿಂಗ್​ ಕೆಲಸ ಮಾಡಿಕೊಂದು ಬದುಕು ಸಾಗಿಸುತ್ತಿದ್ದ. ಈಗ ಐದು ತಿಂಗಳ ಹಿಂದೆ ಐಶ್ವರ್ಯಾ ಮತ್ತು ರತೀಶ್​ ನಡುವೆ ಪ್ರೇಮ ಚಿಗುರೊಡೆದಿತ್ತು.

ವಿಷಯ ತಿಳಿದ ಐಶ್ವರ್ಯಾ ಪಾಲಕರು ತಮ್ಮ ಪುತ್ರಿಗೆ ಬುದ್ಧಿಮಾತು ಹೇಳಿ, ಮೊದಲು ಓದು ಮುಗಿಸು. ನಂತರ ಮದುವೆ ಬಗ್ಗೆ ಆಲೋಚಿಸೋಣ ಎಂದು ಹೇಳಿದ್ದರು. ಇದಕ್ಕೆ ಒಪ್ಪಿದ್ದ ಐಶ್ವರ್ಯಾ ತಕ್ಷಣವೇ ರತೀಶ್​ನೊಂದಿಗಿನ ಸಂಬಂಧವನ್ನು ಕಡಿದುಕೊಂಡು, ಆತನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ್ದಳು. ಇದು ರತೀಶ್​ನನ್ನು ಕೆರಳಿಸಿತ್ತು.

ಹೀಗಾಗಿ ಶುಕ್ರವಾರ ರಾತ್ರಿ ಐಶ್ವರ್ಯಾ ಮನೆಗೆ ಹೋದ ಆತ ತನ್ನೊಂದಿಗಿನ ಪ್ರೇಮದಾಟ ಮುಂದುವರಿಸುವಂತೆ ಒತ್ತಾಯಿಸಿದ. ಅದಕ್ಕೆ ಆಕೆ ಬಿಲ್​ಕುಲ್​ ಒಪ್ಪದಿದ್ದಾಗ ತನ್ನೊಂದಿಗೆ ತಂದಿದ್ದ ಚೂರಿಯಿಂದ ಆಕೆಯ ಹೊಟ್ಟೆಗೆ ಪದೇಪದೆ ಚುಚ್ಚಲಾರಂಭಿಸಿದ. ಪುತ್ರಿಯ ರಕ್ಷಣೆಗೆ ಬಂದ ಶಕ್ತಿವೇಲು ಅವರ ಕೈಗೂ ಚೂರಿ ತಗುಲಿ ಗಾಯವಾಯಿತು. ಬಳಿಕ ರತೀಶ್​ ಅಲ್ಲಿಂದ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಚೂರಿ ಇರಿತದಲ್ಲಿ ಐಶ್ವರ್ಯಾಳ ಕಿಬ್ಬೊಟ್ಟೆಗೆ ಗಂಭೀರವಾಗಿ ಗಾಯವಾಗಿತ್ತು. ಜತೆಗೆ ತೀವ್ರ ರಕ್ತಸ್ರಾವವಾಗಿತ್ತು. ಆಸ್ಪತ್ರೆಗೆ ದಾಖಲಿಸಿದರೂ ಆಕೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾಗಿ ಹೇಳಿದ್ದಾರೆ. ಇದೀಗ ತಲೆಮರೆಸಿಕೊಂಡಿರುವ ರತೀಶ್​ಗಾಗಿ ಶೋಧಕಾರ್ಯ ಕೈಗೊಂಡಿರುವುದಾಗಿ ಹೇಳಿದ್ದಾರೆ.

Comments are closed.