ಮನೋರಂಜನೆ

ಬಾಲಿವುಡ್ ನಟ ಸುಶಾಂತ್ ಸಿಂಗ್ ಕುಟುಂಬ ಭೇಟಿ ಮಾಡಿದ ಮಾಜಿ ಪ್ರೇಯಸಿ ಅಂಕಿತಾ ಲೋಖಂಡೆ!

Pinterest LinkedIn Tumblr


ನಟ ಸುಶಾಂತ್ ಸಿಂಗ್ ರಜಪೂತ್ ನಿಧನದ ಶಾಕ್‌ನಿಂದ ಬಾಲಿವುಡ್ ಮಂದಿ ಇನ್ನೂ ಕೂಡ ಹೊರಬಂದಿಲ್ಲ. ಖಿನ್ನತೆಯಿಂದಲೇ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಬಲವಾಗಿ ಕೇಳಿಬರುತ್ತಿದೆ. ಈ ಮಧ್ಯೆ ಕೆಲ ನಟ-ನಟಿಯರು ಕೂಡ ತಮಗಾದ ಖಿನ್ನತೆ ಕುರಿತ ಅನುಭವಗಳನ್ನು ಬಿಚ್ಚಿಡುತ್ತಿದ್ದಾರೆ. ಇನ್ನು, ಈಗ ಎಲ್ಲರ ಕಣ್ಣು ಸುಶಾಂತ್ ಸಿಂಗ್ ಅವರ ಮಾಜಿ ಪ್ರೇಯಸಿ ಅಂಕಿತಾ ಲೋಖಂಡೆ ಮೇಲಿದೆ. ಏಕೆಂದರೆ, ಸುಶಾಂತ್ ನಿಧನರಾದ ದಿನದಿಂದಲೂ ಅಂಕಿತಾ ಏನೊಂದು ಪ್ರತಿಕ್ರಿಯೆ ನೀಡಿಲ್ಲ. ಸೋಶಿಯಲ್‌ ಮೀಡಿಯಾದಲ್ಲೂ ಈ ಬಗ್ಗೆ ಯಾವುದೇ ಪೋಸ್ಟ್ ಇಲ್ಲ ಎಂದು ನೆಟ್ಟಿಗರು ಚರ್ಚೆ ಮಾಡಿದ್ದರು. ಆದರೆ, ಮಂಗಳವಾರ ಅವರು ಮುಂಬೈನ ಬಾಂದ್ರಾದಲ್ಲಿರುವ ಸುಶಾಂತ್‌ ಮನೆಗೆ ಭೇಟಿ ನೀಡಿದ್ದಾರೆ.

ಸೋಮವಾರ (ಜೂ.15) ಸಂಜೆ ಸುಶಾಂತ್ ಅವರ ಅಂತ್ಯಕ್ರಿಯೆ ನಡೆಯಿತು. ಆದರೆ, ಅಲ್ಲಿಗೆ ಅಂಕಿತಾ ಆಗಮಿಸಿರಲಿಲ್ಲ. ಇದೀಗ ಮಂಗಳವಾರ ಬೆಳಗ್ಗೆಯೇ ಅವರು ಬಾಂದ್ರಾದಲ್ಲಿರುವ ಮನೆಗೆ ಭೇಟಿ ನೀಡಿದ್ದಾರೆ. ಸುಶಾಂತ್‌ ಮನೆಗೆ ಅವರು ಹೋಗುತ್ತಿರುವ ಫೋಟೋಗಳು ವೈರಲ್ ಆಗಿವೆ. ಸುಶಾಂತ್ ಕುಟುಂಬಸ್ಥರನ್ನು ಭೇಟಿ ಮಾಡಿ, ಸಾಂತ್ವನ ಹೇಳಿದ್ದಾರೆ ಎನ್ನಲಾಗಿದೆ. ಈ ಭೇಟಿಯ ಕುರಿತ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಆರು ವರ್ಷಗಳ ಲವ್
ಸುಶಾಂತ್ ಮತ್ತು ಅಂಕಿತಾ ಆರು ವರ್ಷಗಳ ಕಾಲ ಪ್ರೀತಿಯಲ್ಲಿದ್ದರು. ದಶಕದ ಹಿಂದೆ ಪ್ರಸಾರವಾಗುತ್ತಿದ್ದ ‘ಪವಿತ್ರ ರಿಷ್ತ’ ಧಾರಾವಾಹಿಯಲ್ಲಿ ಇವರಿಬ್ಬರು ನಟಿಸಿದ್ದರು. ಆಗಿನಿಂದಲೇ ಪ್ರೀತಿ ಮಾಡೋಕೆ ಆರಂಭಿಸಿದ್ದರು. ಸುದೀರ್ಘ ಸಮಯದ ನಂತರ ಇನ್ನೇನು ಇಬ್ಬರು ಮದುವೆಯಾಗಲಿದ್ದಾರೆ ಎಂದೇ ಎಲ್ಲರು ಅಂದುಕೊಂಡಿದ್ದರು. ಆದರೆ, 2016ರಲ್ಲಿ ಅಂಕಿತಾ-ಸುಶಾಂತ್‌ ಪ್ರೀತಿಗೆ ಬ್ರೇಕ್ ಬಿದ್ದಿತ್ತು. ಬ್ರೇಕ್ಅಪ್ ಆಗುವ ಮೂಲಕ ಇಬ್ಬರ ದೂರವಾದರು. ಆನಂತರ ಬೇರೆ ನಟಿಯರ ಜೊತೆಗೆ ಸುಶಾಂತ್ ಹೆಸರು ತಳಕುಹಾಕಿಕೊಂಡಿತ್ತು.

ತೀವ್ರ ದುಃಖದಲ್ಲಿರುವ ಅಂಕಿತಾ
ಸುಶಾಂತ್ ಅವರ ನಿಧನದಿಂದ ಅಂಕಿತಾ ತೀವ್ರ ದುಃಖದಲ್ಲಿದ್ದರು ಎನ್ನಲಾಗಿದೆ. ಅಂಕಿತಾ ಅವರನ್ನು ಬಹಳ ಹತ್ತಿರದಿಂದ ಬಲ್ಲ ಮತ್ತೋರ್ವ ನಟಿ ಪ್ರಾರ್ಥನಾ ಬೆಹೆರೆ ಈ ವಿಚಾರನ್ನು ಹೇಳಿಕೊಂಡಿದ್ದಾರೆ. ‘ಹಲವು ವರ್ಷಗಳಿಂದ ಸುಶಾಂತ್ ಮತ್ತು ಅಂಕಿತಾ ನನಗೆ ಗೊತ್ತು. ಧಾರಾವಾಹಿಯಲ್ಲಿ ನಾನು ಅಂಕಿತಾಗೆ ಸಹೋದರಿಯಾಗಿದ್ದೆ. ಸುಶಾಂತ್ ಕೂಡ ನನ್ನನ್ನು ಸಹೋದರಿಯಂತೆಯೇ ನೋಡುತ್ತಿದ್ದರು. ಘಟನೆಯಿಂದ ನನಗೂ ತುಂಬ ಶಾಕ್ ಆಗಿದೆ. ನಾನು ಅಂಕಿತಾ ಜೊತೆ ಮಾತಾಡಿದ್ದೇನೆ. ಅವರು ಅಳು ನಿಲ್ಲಿಸುತ್ತಲೇ ಇರಲಿಲ್ಲ. ಅವರಿಂದ ಮಾತನಾಡಲು ಆಗುತ್ತಿರಲಿಲ್ಲ. ಸುಶಾಂತ್ ಬಗ್ಗೆ ಏನು ಹೇಳಲು ಹೋದರೂ, ಕೇಳಿಸಿಕೊಳ್ಳಲು ಸಿದ್ಧರಿರಲಿಲ್ಲ. ನಾನು ಅವರಿಬ್ಬರ ಪ್ರೀತಿಗೆ ಸಾಕ್ಷಿಯಾಗಿದ್ದೆ. ಈ ಕ್ಷಣದಲ್ಲಿ ಅಂಕಿತಾ ಮನಸ್ಸಿನಲ್ಲಿ ಏನಾಗಿರಬಹುದು ಎಂಬುದನ್ನು ನಾನು ತಿಳಿಯಬಲ್ಲೆ’ ಎಂದು ಮಾಧ್ಯಮಗಳಿಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.

Comments are closed.