ಮನೋರಂಜನೆ

ಬಾಲಿವುಡ್ ನಟ ಸುಶಾಂತ್‌ ಸಿಂಗ್ ಸರಳ ಮದುವೆಗೆ ಕುಟುಂಬ ಸಿದ್ಧತೆಯಲ್ಲಿತ್ತು

Pinterest LinkedIn Tumblr


ಬಾಲಿವುಡ್‌ ಇತಿಹಾಸದಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್‌ ಅವರ ಅಧ್ಯಾಯ ಮುಕ್ತಾಯಗೊಂಡಿದೆ. ಭಾನುವಾರ (ಜೂ.14) ಬೆಳಗ್ಗೆ ತಮ್ಮ ಫ್ಲಾಟ್‌ನ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ, ಸುಂದರವಾದ ಬದುಕನ್ನುಅರ್ಧಕ್ಕೆ ಮೊಟಕುಗೊಳಿಸಿಕೊಂಡರು. ಸಾವಿಗೆ ಖಿನ್ನತೆ ಕಾರಣ ಅಂತ ಹೇಳುತ್ತಾರಾದರೂ, ಅಸಲಿಗೆ ಸತ್ಯ ಹೊರಬೀಳಬೇಕಿದೆ. ಈ ಮಧ್ಯೆ ಮತ್ತೊಂದು ಅಚ್ಚರಿಯ ವಿಚಾರ ಬೆಳಕಿಗೆ ಬಂದಿದೆ. ಅದೇನೆಂದರೆ, ಸುಶಾಂತ್‌ ಸಿಂಗ್‌ಗೆ ಇದೇ ನವೆಂಬರ್‌ನಲ್ಲಿ ಮದುವೆ ಮಾಡುವುದಕ್ಕೆ ಕುಟುಂಬದವರು ನಿರ್ಧಾರ ಮಾಡಿದ್ದರಂತೆ!

ಸುಶಾಂತ್ ಮದುವೆ ಆಗಬೇಕಿದ್ದ ಹುಡುಗಿ ಯಾರು?
ಎಲ್ಲ ಅಂದುಕೊಂಡಂತೆ ಆಗಿದ್ದರೆ. ಇನ್ನು ಕೆಲವೇ ತಿಂಗಳಲ್ಲೇ ಸಪ್ತಪದಿಯಬೇಕಿತ್ತು ನಟ ಸುಶಾಂತ್. ಈ ಬಗ್ಗೆ ಅವರ ಕುಟುಂಬದವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ‘ಸುಶಾಂತ್ ಕುಟುಂಬ ಈಗಾಗಲೇ ಮದುವೆ ತಯಾರಿಗಳನ್ನು ಮಾಡಿಕೊಳ್ಳುತ್ತಿತ್ತು. ಲಾಕ್‌ಡೌನ್‌ ಮುಗಿದ ನಂತರ ಇಡೀ ಕುಟುಂಬ ಮುಂಬೈಗೆ ಭೇಟಿ ನೀಡುವುದಕ್ಕೆ ಪ್ಲ್ಯಾನ್‌ ಮಾಡಿಕೊಂಡಿತ್ತು. ನವೆಂಬರ್‌ನಲ್ಲಿ ಕೇವಲ ಆಪ್ತರು ಮತ್ತು ಕುಟುಂಬದವರ ಸಮ್ಮುಖದಲ್ಲಿ ಸಿಂಪಲ್ ಆಗಿ ಮದುವೆ ಮಾಡುವುದಕ್ಕೆ ಯೋಜಿಸಲಾಗಿತ್ತು’ ಎಂದು ಸುಶಾಂತ್ ಕುಟುಂಬದ ಆಪ್ತರು ಮಾಹಿತಿ ನೀಡಿದ್ದಾರೆ. ಆದರೆ, ಸುಶಾಂತ್‌ ಜೊತೆ ಮದುವೆ ಆಗಬೇಕಿದ್ದ ಆ ವಧು ಯಾರು ಎಂಬ ಮಾಹಿತಿಯನ್ನು ಎಲ್ಲಿಯೂ ಬಿಟ್ಟುಕೊಟ್ಟಿಲ್ಲ!

ಹುಡುಗಿಯರ ವಿಚಾರದಲ್ಲಿ ಹಲವು ವದಂತಿ
ಅಂದಹಾಗೆ, ಸುಶಾಂತ್ ಈ ಮೊದಲು ಅಂಕಿತಾ ಲೋಖಂಡೆ ಜೊತೆ ಡೇಟಿಂಗ್ ಮಾಡಿದ್ದರು. ಸುದೀರ್ಘ ವರ್ಷ ಜೊತೆಯಾಗಿ ಕಾಲ ಕಳೆದ ಈ ಜೋಡಿ ನಾಲ್ಕು ವರ್ಷಗಳ ಹಿಂದೆ ಬ್ರೇಕ್‌ಅಪ್‌ ಮಾಡಿಕೊಂಡಿತ್ತು. ಆನಂತರ ಕೃತಿ ಸನೋನ್‌ ಜೊತೆಗೂ ಸುಶಾಂತ್ ಹೆಸರು ಕೇಳಿಬಂತು. ಈಚೆಗೆ ನಟಿ ರಿಯಾ ಚಕ್ರವರ್ತಿ ಜೊತೆಗೆ ಸುಶಾಂತ್ ಹೆಸರು ತಳುಕು ಹಾಕಿಕೊಂಡಿತ್ತು. ಎಲ್ಲೆಂದರಲ್ಲಿ ಒಟ್ಟೊಟ್ಟಿಗೆ ಈ ಜೋಡಿ ಕಾಣಿಸಿಕೊಳ್ಳುತ್ತಿದ್ದರಿಂದ ಹಲವು ವದಂತಿಗಳು ಹಬ್ಬಿದ್ದವು. ಆದರೆ, ಈಚೆಗೆ ರಿಯಾ ಕೂಡ ಸುಶಾಂತ್‌ರಿಂದ ದೂರವಾಗಿದ್ದರು ಎನ್ನಲಾಗಿದೆ.

ಸಹೋದರಿಗೆ ಕರೆ ಮಾಡಿದ್ದ ಸುಶಾಂತ್‌
ಸುಶಾಂತ್ ಜೂನ್‌ 14ರ ಭಾನುವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ತಮ್ಮ ಸಹೋದರಿಗೆ ದೂರವಾಣಿ ಕರೆ ಮಾಡಿ, ಮಾತನಾಡಿದರಂತೆ. ಆದರೆ, ಯಾವ ವಿಷಯನ್ನು ಹಂಚಿಕೊಂಡರು ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಆನಂತರ ಅವರು ಜ್ಯೂಸ್ ಕುಡಿದು, ದೈನಂದಿನ ಮಾತ್ರೆಗಳನ್ನು ತೆಗೆದುಕೊಂಡಿದ್ದಾರೆ. ನಂತರ ರೂಮ್ ಸೇರಿಕೊಂಡ ಅವರು, ತುಂಬ ಹೊತ್ತಾದರೂ ಹೊರಗೆ ಬಂದಿಲ್ಲ. ಮಧ್ಯಾಹ್ನ ಊಟಕ್ಕೆ ಏನು ಮಾಡಬೇಕು ಎಂದು ಕೇಳುವುದಕ್ಕಾಗಿ ಅಡುಗೆಯವ, ರೂಮ್‌ ಬಾಗಿಲು ಬಡಿದ್ದಿದ್ದಾರೆ. ಆದರೆ ಎಷ್ಟೊತ್ತಾದರೂ, ಬಾಗಿಲು ತೆಗೆಯದ ಕಾರಣ, ನಕಲಿ ಕೀ ಬಳಸಿ, ರೂಮ್ ಬಾಗಿಲು ತೆಗೆಯಲಾಗಿದೆ. ಆಗ ಸುಶಾಂತ್‌ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿತ್ತು. ಸುಶಾಂತ್ ಮರಣೋತ್ತರ ಪರೀಕ್ಷೆಯಲ್ಲಿ ಆತ್ಮಹತ್ಯೆ ಎಂಬುದು ಖಚಿತಗೊಂಡಿತ್ತು.

Comments are closed.