ಮನೋರಂಜನೆ

‘ಕನ್ನಡತಿ’ ಧಾರಾವಾಹಿಯ ನಾಯಕನಿಗೆ ಕ್ವಾರಂಟೈನ್‌!

Pinterest LinkedIn Tumblr


ಕಳೆದ ಮೂರು ತಿಂಗಳಿನಿಂದ ಮನರಂಜನಾ ಕ್ಷೇತ್ರಕ್ಕೆ ಕರಿ ನೆರಳು ಆವರಿಸಿದೆ. ಶೂಟಿಂಗ್‌ ಇಲ್ಲದ ಕಾರಣ ಸೀರಿಯಲ್‌ಗಳು ಸ್ಥಗಿತಗೊಳ್ಳಬೇಕಾಯಿತು. ಕೆಲವೇ ದಿನಗಳ ಹಿಂದೆ ಚಿತ್ರೀಕರಣಕ್ಕೆ ಅವಕಾಶ ನೀಡಲಾಗಿದೆಯಾದರೂ ಮೊದಲಿನಷ್ಟು ಸ್ವತಂತ್ರವಾಗಿ ಶೂಟಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ. ಅದರ ನಡುವೆಯೂ ಸೀರಿಯಲ್‌ ತಂಡಗಳು ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿವೆ.

ಪ್ರಸ್ತುತ ಎಲ್ಲೆಲ್ಲೂ ಕೊರೊನಾ ವೈರಸ್‌ ಹಾವಳಿ ಹೆಚ್ಚಿದೆ. ಅಚ್ಚರಿ ಎಂದರೆ ಧಾರಾವಾಹಿಗಳ ಕಥೆಯೊಳಗೂ ಕೋವಿಡ್‌-19 ಇಣುಕಿದೆ. ಅಂದರೆ, ಕೊರೊನಾ ಸೋಂಕಿಗೆ ಸಂಬಂಧಿಸಿದ ವಿಚಾರಗಳನ್ನು ಇಟ್ಟುಕೊಂಡು ಸೀರಿಯಲ್‌ ಕಥೆ ಮುಂದುವರಿಸಲಾಗುತ್ತಿದೆ. ಆ ಮೂಲಕ ವೀಕ್ಷಕರಲ್ಲಿ ಜಾಗೃತಿ ಮೂಡಿಸುವ ಕಾಯಕ ಆಗುತ್ತಿದೆ. ಕಲರ್ಸ್‌ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ‘ಕನ್ನಡತಿ’ ಧಾರಾವಾಹಿ ಇದಕ್ಕೆ ಬೆಸ್ಟ್‌ ಉದಾಹರಣೆ.

‘ಕನ್ನಡತಿ’ ಕಥಾನಾಯಕ ಹರ್ಷಗೆ ಕೊರೊನಾ ವೈರಸ್‌ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ಆತ ಕೆಲಸ ಮುಗಿಸಿ ವಾಪಸ್‌ ಮನೆ ಬರುವುದು ಬೇಡ ಎಂದು ನಾದಿನಿ ಸಲಹೆ ನೀಡುತ್ತಾಳೆ. ಮನೆಯಲ್ಲಿ ಇರುವ ಇತರೆ ಸದಸ್ಯರಿಗೆ ಕಾಯಿಲೆ ಹರಡಬಾರದು ಎಂಬುದು ಆಕೆಯ ಕಾಳಜಿ. ಅದಕ್ಕೆ ಹರ್ಷ ಕೂಡ ಒಪ್ಪುತ್ತಾನೆ. ಆದರೆ ಮನೆ ಬಿಟ್ಟು ಬೇರೆ ಎಲ್ಲಿ ಕ್ವಾರಂಟೈನ್‌ ಆಗಿ ಇರುವುದು ಎಂಬುದು ಆತನಿಗೆ ತಿಳಿಯುವುದಿಲ್ಲ.

ಹರ್ಷನ ಪರಿಸ್ಥಿತಿ ಕಥಾನಾಯಕಿ ಭುವಿಗೆ ಅರ್ಥ ಆಗುತ್ತದೆ. ಆತನಿಗೆ ಸೆಲ್ಫ್‌ ಐಸೋಲೇಟ್‌ ಆಗಿರಲು ಭುವಿ ಜಾಗ ನೀಡುತ್ತಾಳೆ. ಕ್ವಾರಂಟೈನ್‌ ಆಗಿರುವುದು ಎಷ್ಟು ಕಷ್ಟ? ಕೊರೊನಾ ವೈರಸ್‌ ಹರಡುವುದನ್ನು ತಪ್ಪಿಸಲು ಕ್ವಾರಂಟೈನ್‌ ಆಗಿರುವುದು ಎಷ್ಟು ಮುಖ್ಯ ಎಂಬುದನ್ನೆಲ್ಲ ಈ ಸನ್ನಿವೇಶಗಳ ಮೂಲಕ ಅಚ್ಚುಕಟ್ಟಾಗಿ ವಿವರಿಸಿದೆ ‘ಕನ್ನಡತಿ’ ಧಾರಾವಾಹಿ.

ಈ ಸೀರಿಯಲ್‌ನ ಶೀರ್ಷಿಕೆಯೇ ಹೇಳುವಂತೆ ಇದು ಭುವನೇಶ್ವರಿ ಎಂಬ ಕನ್ನಡ ಶಿಕ್ಷಕಿಯ ಕಥೆ. ಮಾತೃಭಾಷೆಗೆ ಆಕೆ ತುಂಬ ಗೌರವ ನೀಡುತ್ತಾಳೆ. ಕನ್ನಡ ಸಾಹಿತ್ಯವನ್ನು ಚೆನ್ನಾಗಿ ಓದಿಕೊಂಡಿದ್ದಾಳೆ. ತನ್ನ ಸುತ್ತಮುತ್ತ ಯಾರಾದರೂ ತಪ್ಪು ತಪ್ಪಾಗಿ ಕನ್ನಡ ಮಾತನಾಡಿದರೆ ಅವರಿಗೆ ಬುದ್ಧಿ ಹೇಳುತ್ತಾಳೆ. ಇಂಥ ಹುಡುಗಿಯ ಜೊತೆಗೆ, ಬರೀ ಬ್ಯುಸಿನೆಸ್‌ಗೆ ಹೆಚ್ಚು ಮಹತ್ವ ನೀಡುವ ಯುವಕನ ಕಥೆಯನ್ನು ಈ ಧಾರಾವಾಹಿ ಒಳಗೊಂಡಿದೆ.

Comments are closed.