ಮನೋರಂಜನೆ

ಶೀಘ್ರದಲ್ಲೇ ನಟಿ ಶುಭಾ ಪೂಂಜಾ ನಿಶ್ಚಿತಾರ್ಥ!

Pinterest LinkedIn Tumblr


ನಟಿ ಶುಭಾ ಪೂಂಜಾ ಅವರು ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ವಿಚಾರ ಹಲವು ದಿನಗಳಿಂದ ಗಾಂಧಿನಗರದಲ್ಲಿ ಕೇಳಿಬರುತ್ತಿದ್ದಾದರೂ ಈ ಬಗ್ಗೆ ಶುಭಾ ಮಾಹಿತಿ ನೀಡಿರಲಿಲ್ಲ. ಈಗ ಅವರು ಈ ವಿಷಯವನ್ನು ಅಧಿಕೃತವಾಗಿ ಹೇಳಿದ್ದಾರೆ. ಶುಭಾ ಸದ್ಯದಲ್ಲೇ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ಲಾಕ್ ಡೌನ್ ಇರೋದರಿಂದ ಅವರು ಕುಟುಂಬದವರ ಸಮ್ಮುಖದಲ್ಲಿ ಸರಳವಾಗಿ ಪ್ರಿಯಕರನ ಜೊತೆ ಉಂಗುರ ಬದಲಾಯಿಸಿಕೊಳ್ಳಲಿದ್ದಾರಂತೆ.

ಶುಭಾ ಮದುವೆಯಾಗುವ ಹುಡುಗ ಯಾರು?
ಶುಭಾ ಪೂಂಜಾ ಮದುವೆಯಾಗುತ್ತಿರುವ ಹುಡುಗನ ಹೆಸರು ಸುಮಂತ್ ಮಹಾಬಲ. ಇವರು ಮಂಗಳೂರು ಮೂಲದವರು. ಜಯಕರ್ನಾಟಕ ಬೆಂಗಳೂರು ಸೌತ್ ವಿಂಗ್ ಪ್ರೆಸಿಡೆಂಟ್ ಆಗಿ ಸುಮಂತ್ ಕೆಲಸ ನಿರ್ವಹಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಗ್ಯಾಸ್ ಏಜೆನ್ಸಿ ಕೂಡ ನಡೆಸುತ್ತಿದ್ದಾರೆ. ಸುಮಂತ್ ಅವರ ಒಂದು ಕಾರ್ಯಕ್ರಮದಲ್ಲಿ ಶುಭಾ ಹೋಗಿದ್ದರು. ಅಲ್ಲಿಂದ ಶುಭಾ ಮತ್ತು ಸುಮಂತ್ ಪರಿಚಯ ಬೆಳೆದಿದೆ. ಕಳೆದ ನವೆಂಬರ್‌ನಲ್ಲಿ ಇವರಿಬ್ಬರು ಪ್ರೀತಿಯಲ್ಲಿ ಬಿದ್ದಿದ್ದಾರೆ. ಬರುವ ಡಿಸೆಂಬರ್‌ನಲ್ಲಿ ಮದುವೆಯಾಗಲಿದ್ದಾರಂತೆ. ಸುಮಂತ್ ಅನೇಕ ಸಾಮಾಜಿಕ ಹೋರಾಟ, ಕೆಲಸಗಳಲ್ಲಿ ಭಾಗಿಯಾಗಿದ್ದಾರೆ. ಮುತ್ತಪ್ಪ ರೈ ಜೊತೆಗೆ ಇವರಿಗೆ ಒಳ್ಳೆಯ ಒಡನಾಟ ಇತ್ತು. ಅಷ್ಟೇ ಅಲ್ಲದೆ ಶುಭಾ ಕೂಡ ಮಂಗಳೂರಿನವರು. ಹೀಗಾಗಿ ಇವರಿಬ್ಬರ ಮನೆಯವರು ಈ ಮದುವೆಗೆ ಒಪ್ಪಿದ್ದಾರೆ.

ತಮಿಳು ಮತ್ತು ಕನ್ನಡ ಭಾಷೆಯಲ್ಲಿ ಶುಭಾ ನಟನೆ
ಶುಭಾ ಪೂಂಜಾ ಕನ್ನಡದಲ್ಲಿ 20 ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮಿಳಿನ ಚಿತ್ರರಂಗದಲ್ಲಿಯೂ ಅವರು ಬಣ್ಣ ಹಚ್ಚಿದ್ದಾರೆ. ‘ಮೊಗ್ಗಿನ ಮನಸು’ ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಶುಭಾಗೆ ಫಿಲ್ಮ್‌ಫೇರ್ ಪ್ರಶಸ್ತಿ ಸಿಕ್ಕಿತ್ತು. ಮಾಡೆಲಿಂಗ್ ಬರುವ ಮುನ್ನ ಶುಭಾ ಟಿವಿ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಮೊದಲು ಶುಭಾ ತಮಿಳಿನ ‘ಮಾಚಿ’ ಸಿನಿಮಾದಲ್ಲಿ ನಟಿಸಿದ್ದರು. ಆನಂತರ ಅವರು ‘ಜಾಕ್‌ಪಾಟ್’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು.

ಸಿನಿಮಾಗಳಲ್ಲಿ ಶುಭಾಗೆ ಏಳು-ಬೀಳು
ಶುಭಾ ಪೂಂಜಾ ನಟನೆಯ ‘ತ್ರಿದೇವಿ’, ‘ರೈಮ್ಸ್’ ಚಿತ್ರ ರಿಲೀಸ್ ಆಗಬೇಕಿದೆ. ಲಾಕ್‌ ಡೌನ್ ಘೋಷಣೆಯಾಗುವ ಒಂದು ದಿನದ ಮುಂಚೆ ಇವರ ನಟನೆಯ ‘ನರಗುಂದ ಬಂಡಾಯ’ ರಿಲೀಸ್ ಆಗಿತ್ತು. ಕೊರೊನಾ ವೈರಸ್ ಮಾಹಾಮಾರಿಗೆ ಈ ಚಿತ್ರ ಬಲಿಯಾಗಿದೆ. ‘ತ್ರಿದೇವಿ’ ಚಿತ್ರದಲ್ಲಿ ಪೂಜಾ ಎಕ್ಸಿಕ್ಯೂಟಿವ್ ಪ್ರೊಡ್ಯುಸರ್ ಆಗಿ ಕೆಲಸ ಮಾಡುತ್ತಿದ್ದಾರೆ, ಶುಭಾ ಸಿನಿಮಾ ರಂಗದಲ್ಲಿ ಹಲವು ಏಳು-ಬೀಳುಗಳನ್ನು ಕಂಡಿದ್ದಾರೆ. ಮದುವೆಯ ನಂತರವೂ ಅವರು ನಟನೆ ಮುಂದುವರಿಸಲಿದ್ದಾರಂತೆ.

Comments are closed.