ಮನೋರಂಜನೆ

500 ವಲಸೆ ಕಾರ್ಮಿಕರಿಗೆ ವಿಶೇಷ ವಿಮಾನ ವ್ಯವಸ್ಥೆ ಮಾಡಿದ ಅಮಿತಾಭ್‌ ಬಚ್ಚನ್‌

Pinterest LinkedIn Tumblr


ಕೊರೊನಾ ವೈರಸ್‌ನಿಂದಾಗಿ ಉಂಟಾದ ಕಠಿಣ ಸಂದರ್ಭದಲ್ಲಿ ಅನೇಕ ಸ್ಟಾರ್‌ ಕಲಾವಿದರು ಜನಸಾಮಾನ್ಯರ ನೆರವಿಗೆ ಮುಂದಾದರು. ಅದರಲ್ಲೂ ಸೋನು ಸೋದ್‌ ಮಾಡಿದ ಸಹಾಯಕ್ಕೆ ಇಡೀ ದೇಶವೇ ಭೇಷ್‌ ಎಂದಿತು. ವಲಸೆ ಕೂಲಿ ಕಾರ್ಮಿಕರಿಗೆ ಬಸ್‌ ವ್ಯವಸ್ಥೆ ಮಾಡಿದ್ದು ಮಾತ್ರವಲ್ಲದೆ, ಕೆಲವರನ್ನು ವಿಮಾನದಲ್ಲಿ ಮನೆಗೆ ಕಳುಹಿಸಿಕೊಡುವ ಮೂಲಕ ಸೋನು ಸೂದ್‌ ರಿಯಲ್‌ ಹೀರೋ ಎನಿಸಿಕೊಂಡಿದ್ದರು.

ಸೋನು ಸೂದ್‌ ರೀತಿಯೇ ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌ ಕೂಡ ವಿಮಾನಯಾನದ ಸೌಲಭ್ಯ ಒದಗಿಸಿದ್ದಾರೆ. ಕೆಲವು ದಿನಗಳ ಹಿಂದೆ ಮಾಹಾರಾಷ್ಟ್ರದಲ್ಲಿ ಸಿಕ್ಕಿಕೊಂಡಿದ್ದ ಕಾರ್ಮಿಕರಿಗೆ ಬಸ್‌ ವ್ಯವಸ್ಥೆ ಕಲ್ಪಿಸಿದ್ದ ಅವರು ಈಗ ಎರಡು ವಿಶೇಷ ವಿಮಾನಗಳನ್ನು ಒದಗಿಸಿದ್ದಾರೆ. ಉತ್ತರ ಪ್ರದೇಶದ ಕಾರ್ಮಿಕರನ್ನು ಈ ವಿಮಾನಗಳ ಮೂಲಕ ಅವರವರ ಊರುಗಳಿಗೆ ವಾಪಸ್‌ ಕಳುಹಿಸಿಕೊಡಲಾಗಿದೆ.

ಪ್ರತಿ ವಿಮಾನದಲ್ಲಿ ಒಂದು ಬಾರಿಗೆ 180 ಜನರು ಇರಲಿದ್ದಾರೆ. ಜೂನ್‌ 10 ಮತ್ತು 11ರಂದು ಈ ವಿಮಾನಗಳು ವಲಸೆ ಕಾರ್ಮಿಕರಿಗಾಗಿ ಹಾರಾಟ ನಡೆಸಲಿವೆ. ಒಟ್ಟು 500 ಜನ ವಲಸೆ ಕಾರ್ಮಿಕರಿಗೆ ಈ ಮೂಲಕ ಅಮಿತಾಭ್‌ ನೆರವಾಗಿದ್ದಾರೆ. ‘ಕಾರ್ಮಿಕರು ಭರವಸೆ ಕಳೆದುಕೊಳ್ಳಬಾರದು ಎಂಬ ಕಾರಣಕ್ಕೆ ಅವರು ಈ ವ್ಯವಸ್ಥೆ ಮಾಡಿಸಿದ್ದಾರೆ’ ಎಂದು ಬಚ್ಚನ್‌ ಆಪ್ತ ಮೂಲಗಳು ಹೇಳಿಕೆ ನೀಡಿವೆ.

ಈ ಕಾರ್ಮಿಕರನ್ನು ರೈಲಿನ ಮೂಲಕ ಕಳುಹಿಸಿಕೊಡಬೇಕು ಎಂದು ಮೊದಲು ಪ್ಲ್ಯಾನ್‌ ಮಾಡಿಕೊಳ್ಳಲಾಗಿತ್ತು. ಆದರೆ ಅದಕ್ಕೆ ತಾಂತ್ರಿಕ ಅಡಚಣೆ ಉಂಟಾದ ಕಾರಣ ವಿಶೇಷ ವಿಮಾನಗಳನ್ನು ಒದಗಿಸುವುದೇ ಸೂಕ್ತ ಎಂದು ಬಚ್ಚನ್‌ ನಿರ್ಧರಿಸಿದರು ಎನ್ನಲಾಗಿದೆ. ಇದರ ಜೊತೆಗೆ ಅಗತ್ಯ ಇರುವವರಿಗೆ ಆಹಾರ ಸಾಮಗ್ರಿ, ಮಾಸ್ಕ್‌ಗಳನ್ನು ನೀಡಲಾಗಿದೆ. ವೈದ್ಯಕೀಯ ಸಂಬಂದಿಗೆ ಪಿಪಿಇ ಕಿಟ್‌ ಮತ್ತು ಸ್ಯಾನಿಟೈಸರ್‌ಗಳನ್ನು ವಿತರಿಸಲಾಗಿದೆ.

Comments are closed.