ಹೃದಯಾಘಾತದಿಂದ ನಿಧನರಾದ ಚಿರಂಜೀವಿ ಸರ್ಜಾ ಅವರಿಗೆ ಅಭಿಮಾನಿಗಳು, ಆಪ್ತರು, ಕುಟುಂಬದವರು ಸೋಮವಾರ ಅಂತಿಮ ವಿದಾಯ ಸಲ್ಲಿಸಿದರು. ಧ್ರುವ ಸರ್ಜಾ ಒಡೆತನದ ಫಾರ್ಮ್ ಹೌಸ್‌ನಲ್ಲಿ ಗೌಡ ಸಂಪ್ರದಾಯದ ಪ್ರಕಾರ ಅಂತ್ಯಕ್ರಿಯೆ ನೆರವೇರಿತು. ಆ ಬಳಿಕ ಕ್ರೈಸ್ತ ಸಂಪ್ರದಾಯದ ಅನುಸಾರವೂ ಪ್ರಾರ್ಥನೆ ಸಲ್ಲಿಸಲಾಯಿತು.
ಚಿರು ಪತ್ನಿ ಮೇಘನಾ ರಾಜ್ ಅವರ ತಾಯಿ ಪ್ರಮೀಳಾ ಜೋಷಾಯ್ ಕ್ರೈಸ್ತ ಧರ್ಮದವರು. ಮೇಘನಾ ಮನೆಯಲ್ಲಿ ಹಿಂದು ಮತ್ತು ಕ್ರಿಶ್ಚಿಯನ್ ಸಂಪ್ರದಾಯಗಳನ್ನು ಮೊದಲಿನಿಂದಲೂ ಪಾಲಿಸಲಾಗುತ್ತಿದೆ. ಚಿರು-ಮೇಘನಾ ವಿವಾಹ ಕೂಡ ಎರಡೂ ಧರ್ಮಗಳ ಪ್ರಕಾರ ನಡೆದಿತ್ತು. ಅದೇ ರೀತಿ, ಅಂತ್ಯ ಕ್ರಿಯೆ ವೇಳೆಯೂ ಕುಟುಂಬದವರು ಕ್ರೈಸ್ತ ಸಂಪ್ರದಾಯದ ನಿಯಮಗಳ ಪ್ರಕಾರ ಸಮಾಧಿ ಎದುರು ಕುಳಿತು ಪ್ರಾರ್ಥನೆ ಮಾಡಿದ್ದಾರೆ. ಅದರಲ್ಲಿ ಪ್ರಮೀಳಾ ಜೋಷಾಯ್, ಮೇಘನಾ, ಧ್ರುವ, ಅರ್ಜುನ್ ಸರ್ಜಾ ಮುಂತಾದವರು ಪಾಲ್ಗೊಂಡಿದ್ದರು.
ಚಿರು ನಿಧನರಾಗಿ ಮಂಗಳವಾರಕ್ಕೆ (ಜೂ.9) ಮೂರನೇ ದಿನ. ಹಾಗಾಗಿ ಕುಟುಂಬದವರು ಇಂದು ‘ಬೃಂದಾವನ’ ಫಾರ್ಮ್ ಹೌಸ್‌ನಲ್ಲಿ ಇರುವ ಸಮಾಧಿ ಎದುರು ಹಾಲು-ತುಪ್ಪ ಕಾರ್ಯಕ್ರಮ ನೆರವೇರಿಸಿದ್ದಾರೆ. ಪುರೋಹಿತರ ಸಮ್ಮುಖದಲ್ಲಿ ಚಿರು ತಂದೆ ವಿಜಯ್ ಕುಮಾರ್ ಎಲ್ಲ ಕಾರ್ಯಗಳನ್ನು ಮಾಡಿದ್ದಾರೆ. ಅವರ ಜೊತೆ ಸರ್ಜಾ ಕುಟುಂಬದವರು ಹಾಜರಿದ್ದರು.
ಧ್ರುವ ಮತ್ತು ಚಿರಂಜೀವಿ ಸರ್ಜಾ ಸಹೋದರರು ಎಂಬುದಕ್ಕಿಂತ ಹೆಚ್ಚಾಗಿ ಸ್ನೇಹಿತರ ರೀತಿ ಇದ್ದರು. ಇಬ್ಬರೂ ಆತ್ಮೀಯವಾಗಿದ್ದ ಕೆಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಶೇರ್ ಆಗುತ್ತಿವೆ. ತನ್ನ ಫಾರ್ಮ್ ಹೌಸ್‌ನಲ್ಲಿಯೇ ಅಣ್ಣ ಇರಬೇಕು ಎಂಬ ಹಂಬಲ ಧ್ರುವ ಅವರದ್ದಾಗಿತ್ತು. ಆ ಕಾರಣಕ್ಕಾಗಿಯೇ ಕನಕಪುರ ರಸ್ತೆ, ನೆಲಗುಳಿ ಗ್ರಾಮದಲ್ಲಿ ಇರುವ ಅವರ ಫಾರ್ಮ್ ಹೌಸ್‌ನಲ್ಲೇ ಚಿರು ಅಂತ್ಯಕ್ರಿಯೆ ನೆರವೇರಿಸಲಾಯಿತು.
Comments are closed.