ಮನೋರಂಜನೆ

100 ಚಲನಚಿತ್ರಗಳನ್ನು ಉಚಿತವಾಗಿ ನೋಡುವ ಅವಕಾಶ!

Pinterest LinkedIn Tumblr


ಇತಿಹಾಸದಲ್ಲಿ ಮೊದಲ ಬಾರಿಗೆ ಆನ್‌ಲೈನ್‌ ಗ್ಲೋಬಲ್‌ ಫಿಲ್ಮ್‌ ಫೆಸ್ಟಿವಲ್‌ ನಡೆಯುತ್ತಿದೆ. ‘ವಿ ಆರ್‌ ಒನ್‌’ ಎಂಬ ಟೈಟಲ್‌ನೊಂದಿಗೆ ಮೇ 29 ರಿಂದ ಪ್ರಾರಂಭವಾಗಿರುವ ಗ್ಲೋಬಲ್‌ ಫಿಲ್ಮ್‌ ಫೆಸ್ಟಿವಲ್‌ ಜೂನ್‌ 7ರವರೆಗೆ 10 ದಿನಗಳ ಕಾಲ ನಡೆಯಲಿದೆ. ಯೂಟ್ಯೂಬ್‌ನಲ್ಲಿ10 ದಿನ 21 ರಾಷ್ಟ್ರಗಳ 100 ಸಿನಿಮಾಗಳನ್ನು ಜಗತ್ತಿನಾದ್ಯಂತ ಯಾರು ಬೇಕಾದರೂ ಉಚಿತವಾಗಿ ನೋಡಬಹುದಾಗಿದೆ.

ಕೊರೊನಾದಿಂದಾಗಿ ಈ ವರ್ಷ ನಡೆಯಬೇಕಾಗಿದ್ದ ಅನೇಕ ಪ್ರಸಿದ್ಧ ಅಂತಾರಾಷ್ಟ್ರೀಯ ಚಿತ್ರೋತ್ಸವಗಳು ರದ್ದಾಗಿವೆ. ಈಗ 21 ಅಂತಾರಾಷ್ಟ್ರೀಯ ಫಿಲ್ಮ್‌ ಫೆಸ್ಟಿವಲ್‌ಗಳಿಂದ ಚಿತ್ರಗಳನ್ನು ಆಯ್ಕೆ ಮಾಡಲಾಗಿದೆ. ಕಾನ್‌ ಫೆಸ್ಟಿವಲ್‌, ಟ್ರಿಬೆಕಾ, ಅನ್ನೆಸೀ ಇಂಟರ್‌ನ್ಯಾಷನಲ್‌ ಅನಿಮೇಷನ್‌ ಫಿಲ್ಮ್‌ ಫೆಸ್ಟಿವಲ್‌, ಬರ್ಲಿನ್‌, ನ್ಯೂಯಾರ್ಕ್, ಸಿಡ್ನಿ, ಲೊಕಾರ್ನೋ, ವೆನಿಸ್‌ ಮತ್ತಿತರ ಅಂತಾರಾಷ್ಟ್ರೀಯ ಫಿಲ್ಮ್‌ ಫೆಸ್ಟಿವಲ್‌ಗಳವರು ಇದರಲ್ಲಿ ಭಾಗಿಯಾಗಿದ್ದಾರೆ.

ಜಗತ್ಪ್ರಸಿದ್ಧ ಸಿನಿಮಾಗಳ ಜತೆ ಕಿರುಚಿತ್ರ, ಜನಪ್ರಿಯ ನಿರ್ದೇಶಕರೊಂದಿಗೆ ಸಂವಾದ ಕಾರ್ಯಕ್ರಮ, ಆ್ಯನಿಮೇಟೆಡ್‌ ಸಿನಿಮಾಗಳನ್ನೂ ನೋಡಬಹುದಾಗಿದೆ. ಈ ಚಿತ್ರೋತ್ಸವದ ಬಗ್ಗೆ, ಸಿನಿಮಾ ಬಗ್ಗೆ, ಕೊರೊನಾ ಸಂಕಷ್ಟದ ಬಗ್ಗೆ ಜಗತ್ತಿನ ಜನಪ್ರಿಯ ನಟ, ನಟಿಯರು, ನಿರ್ದೇಶಕರ ಮಾತುಗಳನ್ನೂ ಕೇಳಬಹುದಾಗಿದೆ. ಜನಪ್ರಿಯ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಸೇರಿದಂತೆ ಅನೇಕರು ತಮ್ಮ ಸಂದೇಶವನ್ನು ಈ ಮೂಲಕ ನೀಡಿದ್ದಾರೆ.

ಲೈವ್‌ ಸ್ಟ್ರೀಮಿಂಗ್‌ ಇರುವುದರಿಂದ ನಿಗದಿಪಡಿಸಿದ ಸಮಯದಲ್ಲಷ್ಟೇ ಈ ಸಿನಿಮಾಗಳನ್ನು ನೋಡಬಹುದಾಗಿದೆ. ದಕ್ಷಿಣ ಕೊರಿಯಾದ ಟ್ರಿಬೆಕಾ ಫಿಲ್ಮ್‌ ಫೆಸ್ಟಿವಲ್‌ನ ಸಿಇಒ ಜೇನ್‌ ರೋಸೆನ್ದಲ್‌ ಮತ್ತು ಯೂಟ್ಯೂಬ್‌ ಸೇರಿ ಮಾಡಿದ ಯೋಜನೆ ಇದು. ‘ಸಂಗೀತಗಾರರು, ಶೆಫ್‌ ಮತ್ತಿತರರು ತಮ್ಮ ಪ್ರತಿಭೆ ಬಳಸಿ ಕೊರೊನಾದಿಂದ ತೊಂದರೆಗೆ ಒಳಗಾದವರಿಗೆ ಧನ ಸಂಗ್ರಹ ಮಾಡುವಾಗ ನಾವು ಏನೂ ಮಾಡುತ್ತಿಲ್ಲಎಂಬ ಖೇದ ಉಂಟಾಯಿತು. ಆಗ ಈ ಫೆಸ್ಟಿವಲ್‌ ಯೋಚನೆ ಬಂತು. ಎಲ್ಲರೂ ಕೈಜೋಡಿಸಿದರು’ ಎಂದಿದ್ದಾರೆ ಜೇನ್‌.

‘ವಿ ಆರ್‌ ಒನ್‌’ ಆನ್‌ಲೈನ್‌ ಗ್ಲೋಬಲ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಭಾರತದ ಚಿತ್ರಗಳೂ ಪ್ರದರ್ಶನಗೊಳ್ಳುತ್ತಿವೆ. ಅರುಣ್‌ ಕಾರ್ತಿಕ್‌ ನಿರ್ದೇಶನದ ತಮಿಳಿನ ‘ನಾಸಿರ್‌’, ವಿದ್ಯಾ ಬಾಲನ್‌ ನಟಿಸಿರುವ ಕಿರುಚಿತ್ರ ‘ನಟ್‌ಖಟ್‌’, ಪ್ರತೀಕ್‌ ವಾಟ್ಸ್‌ ನಿರ್ದೇಶನದ ‘ಈಬ್‌ ಅಲೆ ಊ!’ ಚಲನಚಿತ್ರ, ಅತುಲ್‌ ಮೋಂಗಿಯಾ ನಿರ್ದೇಶನದ ಕಿರುಚಿತ್ರ ‘ಅವೇಕ್‌’ ಪ್ರದರ್ಶನ ಕಾಣಲಿವೆ. ಇದು ತುಂಬಾ ಅಪರೂಪದ, ವಿಶೇಷ ಅವಕಾಶ ಎಂದಿದ್ದಾರೆ ಮಾಮಿ ಮುಂಬೈ ಫಿಲ್ಮ್‌ ಫೆಸ್ಟಿವಲ್‌ನ ಕಲಾ ನಿರ್ದೇಶಕ ಸ್ಮೃತಿ ಕಿರಣ್‌.

ಫೆಸ್ಟಿವಲ್‌ಗೆ ಆನ್‌ಲೈನ್‌ನಲ್ಲಿ ಯಾರು ಎಷ್ಟು ಸಣ್ಣ ಮೊತ್ತವಾದರೂ ನೀಡಬಹುದಾಗಿದೆ. ಇದು ಜಗತ್ತಿನಾದ್ಯಂತ ಕೊರೊನಾ ಪೀಡಿತರಿಗೆ ಸಹಾಯಕ್ಕೆ ಬಳಕೆಯಾಗಲಿದೆ. ಇದಕ್ಕೆ ಸೂಕ್ತ ಮಾರ್ಗದರ್ಶನವನ್ನೂ ನೀಡಲಾಗಿದೆ.

Comments are closed.