ಕರಾವಳಿ

ಗೋವಾದಲ್ಲಿ ಓದುತ್ತಿರುವ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಕಾರವಾರದಲ್ಲಿ ಪ್ರಪ್ರಥಮ ಬಾರಿಗೆ ಪರೀಕ್ಷೆ

Pinterest LinkedIn Tumblr


ಕಾರವಾರ: ಗೋವಾ ರಾಜ್ಯದಲ್ಲಿ ಅಲ್ಲಿಯ ಬೋರ್ಡ್​ನ ಎಸ್.ಎಸ್.ಎಲ್.ಸಿ. ಪರೀಕ್ಷೆ ನಡೆಯುತ್ತಿದೆ. ಗೋವಾದ ಶಾಲೆಗಳಲ್ಲಿ ಓದುತ್ತಿರುವ ಕಾರವಾರದ ವಿದ್ಯಾರ್ಥಿಗಳಿಗೆ ಕಾರವಾರದಲ್ಲೇ ಪರೀಕ್ಷೆ ಬರೆಯಲು ಗೋವಾ ಸರ್ಕಾರ ವ್ಯವಸ್ಥೆ ಮಾಡಿದೆ. ಲಾಕ್ ಡೌನ್ ಕಾರಣಕ್ಕೆ ಅಂತಾರಾಜ್ಯ ಬಸ್ ಸೇವೆ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಗೋವಾ ಈ ಕ್ರಮ ಕೈಗೊಂಡಿದೆ. ಕಾರವಾರದ ಹತ್ತಾರು ವಿದ್ಯಾರ್ಥಿಗಳು ನಿಟ್ಟುಸಿರು ಬಿಡುವಂತಾಗಿದೆ.

ಗೋವಾ ಮತ್ತು ಉತ್ತರ ಕನ್ನಡ ಗಡಿ ಭಾಗದ ಕಾರವಾರ ತಾಲೂಕಿನ ನೂರಾರು ವಿದ್ಯಾರ್ಥಿಗಳು ಗೋವಾ ರಾಜ್ಯದ ಶಾಲೆಗಳಿಗೆ ಹೋಗುತ್ತಾರೆ. ಲಾಕ್​ಡೌನ್ ಕಾರಣಕ್ಕೆ ಸ್ಥಗಿತಗೊಂಡಿದ್ದ ಅಲ್ಲಿಯ ಪರೀಕ್ಷಾ ಮಂಡಳಿಯ ಎಸ್ಸೆಸ್ಸೆಲ್ಸಿ ಪರೀಕ್ಷೆ ಇದೀಗ ಮೇ 23ರಿಂದಲೇ ಪ್ರಾರಂಭಗೊಂಡಿದೆ. ಕಾರವಾರದಿಂದ ಗೋವಾದ ಶಾಲೆಗಳಿಗೆ ಹೋಗುತ್ತಿದ್ದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯುವ ದಾರಿಯೇ ಸ್ಥಗಿತಗೊಂಡಂತಾಗಿತ್ತು. ಈ ಹಿನ್ನೆಲೆಯಲ್ಲಿ ಗೋವಾ ಮತ್ತು ಕರ್ನಾಟಕ ಸರ್ಕಾರ ಮಾತುಕತೆ ನಡೆಸಿ ಈ ಸಮಸ್ಯೆಯನ್ನು ಇತ್ಯರ್ಥಪಡಿಸಿವೆ.

ಈಗ ಕಾರವಾರದ ಮಾಜಾಳಿಯ ಯೂನಿಯನ್ ಶಾಲೆಯಲ್ಲಿ ಪರೀಕ್ಷಾ ಕೇಂದ್ರ ತೆರೆದು ಕಾರವಾರದ 23 ವಿದ್ಯಾರ್ಥಿಗಳಿಗೆ SSLC ಪರೀಕ್ಷೆ ಬರೆಯಲು ಅನುಮತಿ ನೀಡಲಾಗಿದೆ. ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.

ಗೋವಾ ಸರಕಾರ ಕಾರವಾರದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಸುತ್ತಿರುವುದು ಇದೇ ಮೊದಲು ಎಂಬುದು ಗಮನಾರ್ಹ. ಕೆಲವೊಂದು ವಿಚಾರದಲ್ಲಿ ಪದೆ ಪದೆ ಗಡಿ ತಂಟೆ ಮಾಡುವ ಗೋವಾ ಸರಕಾರ ಈಗ ಲಾಕ್ ಡೌನ್ ಸಂದರ್ಭದಲ್ಲಿ ಕಾರವಾರದ ವಿದ್ಯಾರ್ಥಿಗಳ ಸಮಸ್ಯೆ ಅರಿತು ವಿದ್ಯಾರ್ಥಿಗಳ ಬೆನ್ನಿಗೆ ನಿಂತಿರೋದು ಪಾಲಕರ ಖುಷಿಗೆ ಕಾರಣವಾಗಿದೆ. ಗೋವಾ ಸರಕಾರದ ಕ್ರಮ ಕೂಡ ಪ್ರಶಂಸನೀಯವಾಗಿದೆ.

ಗಡಿ ಗ್ರಾಮದ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಗೋವಾ ಸರಕಾರ ಕೈಗೊಂಡ ಈ ನಿರ್ಧಾರ ಸ್ವಾಗತಾರ್ಹವೂ ಹೌದು.

Comments are closed.