ಮನೋರಂಜನೆ

ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯಗೆ ಹೃದಯಾಘಾತ!

Pinterest LinkedIn Tumblr


ಬಹುಬೇಡಿಕೆಯ ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ ಅವರಿಗೆ ಬುಧವಾರ ಮಧ್ಯರಾತ್ರಿ ಹೃದಯಾಘಾತ ಸಂಭವಿಸಿದೆ. ಮೈಸೂರಿನ ಬೋಗಾದಿಯಲ್ಲಿರುವ ತಮ್ಮ ಮನೆಯಲ್ಲಿರುವಾಗ ಈ ಘಟನೆ ಸಂಭವಿಸಿದ್ದು, ಕೂಡಲೇ ಅವರನ್ನು ಅಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯದ ಬಗ್ಗೆ ಈವರೆಗೂ ಆಸ್ಪತ್ರೆಯಿಂದ ಅಧಿಕೃತ ವರದಿ ಬಹಿರಂಗ ಆಗಿಲ್ಲ. ಆಸ್ಪತ್ರೆಯ ಸಿಬ್ಬಂದಿ ಬೆಳಗ್ಗೆ 10 ಗಂಟೆಗೆ ಹೆಲ್ತ್‌ ಬುಲೆಟಿನ್‌ ರಿಲೀಸ್‌ ಮಾಡುವ ಸಾಧ್ಯತೆ ಇದೆ. 39 ವರ್ಷದ ಅರ್ಜುನ್‌ ಜನ್ಯ ಹಲವು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಜೊತೆಗೆ ರಿಯಾಲಿಟಿ ಶೋಗಳಲ್ಲೂ ಜಡ್ಜ್‌ ಆಗಿ ಭಾಗವಹಿಸುತ್ತಿದ್ದಾರೆ. ಅವರು ಬೇಗ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು ಪ್ರಾರ್ಥಿಸಿಕೊಳ್ಳುತ್ತಿದ್ದಾರೆ.

ಸೂಕ್ತ ಸಮಯದಲ್ಲಿ ಆಸ್ಪತ್ರೆಗೆ ದಾಖಲಿಸಿದ್ದರಿಂದ ಅರ್ಜುನ್‌ ಜನ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಅವರ ಆರೋಗ್ಯದ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಸಿಗಬೇಕಿದೆ. ಸಿನಿಮಾ ಕೆಲಸಗಳ ಸಲುವಾಗಿ ಬೆಂಗಳೂರಿನಲ್ಲಿಯೇ ಹೆಚ್ಚಾಗಿ ಇರುವ ಅರ್ಜುನ್ ಜನ್ಯ, ಬಿಡುವಿನ ವೇಳೆಯಲ್ಲಿ ಮೈಸೂರಿಗೆ ತೆರಳುತ್ತಾರೆ. ಅಲ್ಲಿ ಅವರೊಂದು ಐಷಾರಾಮಿ ವಿಲ್ಲಾ ಖರೀದಿಸಿದ್ದಾರೆ. ಆ ಮನೆಯಲ್ಲಿಯೇ ಹೃದಯಾಘಾತ ಸಂಭವಿಸಿದೆ. ಕಳೆದ ಒಂದೂವರೆ ದಶಕದಿಂದ ಕನ್ನಡ ಚಿತ್ರರಂಗದಲ್ಲಿ ಅರ್ಜುನ್ ಜನ್ಯ ಸಕ್ರಿಯರಾಗಿದ್ದಾರೆ. ಹಲವು ಸೂಪರ್‌ ಹಿಟ್‌ ಗೀತೆಗಳನ್ನು ನೀಡಿರುವ ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಕನ್ನಡದ ಜನಪ್ರಿಯ ನಟರ ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡುವ ಮೂಲಕ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ.

ಅರ್ಜುನ್‌ ಜನ್ಯ ಆರೋಗ್ಯದ ಬಗ್ಗೆ ವೈದ್ಯರು ಮಾಧ್ಯಮಗಳಿಗೆ ಅಧಿಕೃತ ಮಾಹಿತಿ ನೀಡಿದ್ದಾರೆ. ‘ಸರಿಯಾದ ಸಮಯದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರಿಂದ ಅವರ ಪ್ರಾಣಕ್ಕೆ ತೊಂದರೆ ಆಗಿಲ್ಲ. ಒಂದು ವೇಳೆ ಎರಡು ಗಂಟೆ ತಡವಾಗಿದ್ದರೂ ಪರಿಸ್ಥಿತಿ ಕಷ್ಟ ಆಗುತ್ತಿತ್ತು. ಆಸ್ಪತ್ರೆಗೆ ಕರೆತಂದ ಕೂಡಲೇ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಯಿತು. ಈಗ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ವಾರ್ಡ್‌ಗೆ ಶಿಫ್ಟ್‌ ಮಾಡಲಾಗಿದೆ. ಚಾಮುಂಡೇಶ್ವರಿ ದೇವಿಯ ಆಶೀರ್ವಾದ ಮತ್ತು ಲಕ್ಷಾಂತರ ಅಭಿಮಾನಿಗಳ ಪ್ರಾರ್ಥನೆಯಿಂದಾಗಿ ಅರ್ಜುನ್‌ ಜನ್ಯ ಸೇಫ್‌ ಆಗಿದ್ದಾರೆ’ ಎಂದು ವೈದ್ಯರು ಹೇಳಿಕೆ ನೀಡಿದ್ದಾರೆ.

ಹಲವು ಬಹುನಿರೀಕ್ಷಿತ ಚಿತ್ರಗಳು ಅರ್ಜುನ್‌ ಜನ್ಯ ಅವರ ಕೈಯಲ್ಲಿವೆ. ದರ್ಶನ್‌ ನಟನೆಯ ‘ರಾಬರ್ಟ್‌’ ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದ್ದು, ಈ ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ಅದರ ಆಡಿಯೋ ರಿಲೀಸ್‌ಗಾಗಿ ಅಭಿಮಾನಿಗಳು ಕಾತರದಿಂದ ಕಾದಿದ್ದಾರೆ. ಇನ್ನು, ಸುದೀಪ್‌ ನಾಯಕತ್ವದ ‘ಕೋಟಿಗೊಬ್ಬ 3’ ಚಿತ್ರದ ಹಾಡುಗಳು ಕೂಡ ಅರ್ಜುನ್‌ ಜನ್ಯ ಸಂಗೀತ ನಿರ್ದೇಶನದಲ್ಲಿ ಮೂಡಿಬರುತ್ತಿವೆ. ಅಷ್ಟೇ ಅಲ್ಲದೆ, ಪವನ್‌ ಒಡೆಯರ್‌ ನಿರ್ದೇಶಿಸುತ್ತಿರುವ ‘ರೇಮೋ’, ಜೋಗಿ ಪ್ರೇಮ್‌ ನಿರ್ದೇಶಿಸುತ್ತಿರುವ ‘ಏಕ್‌ ಲವ್‌ ಯಾ’, ಶರಣ್‌-ಆಶಿಕಾ ರಂಗನಾಥ್‌ ಜೋಡಿಯ ‘ಅವತಾರ್‌ ಪುರುಷ’ ಸೇರಿ ಅನೇಕ ಚಿತ್ರಗಳಿಗೆ ಅರ್ಜುನ್‌ ಜನ್ಯ ಸಂಗೀತ ನೀಡುತ್ತಿದ್ದಾರೆ.

Comments are closed.