ಮನೋರಂಜನೆ

ಬಾಲಿವುಡ್ ನಟಿಯೊಂದಿಗೆ ವಿಜಯ್ ದೇವರಕೊಂಡ ರೊಮ್ಯಾನ್ಸ್

Pinterest LinkedIn Tumblr


ಹೈದರಾಬಾದ್: ಟಾಲಿವುಡ್ ನಟ ವಿಜಯ್ ದೇವರಕೊಂಡ ಬಾಲಿವುಡ್ ನಟಿಯೊಂದಿಗೆ ರೊಮ್ಯಾನ್ಸ್ ಮಾಡಲಿದ್ದು, ನಟಿಯೊಂದಿಗೆ ವಿಜಯ್ ಇರುವ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಸದ್ಯ ವಿಜಯ್ ಹಾಗೂ ಸ್ಟಾರ್ ನಿರ್ದೇಶಕ ಪೂರಿ ಜಗನ್ನಾಥ್ ಕಾಂಬಿನೇಷನ್‍ನಲ್ಲಿ ಸಿನಿಮಾವೊಂದು ಸೆಟ್ಟೇರಿರುವುದು ಗೊತ್ತಿರುವ ವಿಷಯ. ಆದರೆ ಈಗ ಈ ಸಿನಿಮಾಗೆ ನಾಯಕಿ ಫಿಕ್ಸ್ ಆಗಿದ್ದಾರೆ. ‘ಸ್ಟುಡೆಂಟ್ ಆಫ್ ದಿ ಇಯರ್ 2’ ಸಿನಿಮಾದ ಮೂಲಕ ಬಾಲಿವುಡ್‍ಗೆ ಎಂಟ್ರಿ ಕೊಟ್ಟ ಅನನ್ಯಾ ಪಾಂಡೆ ವಿಜಯ್ ಹೊಸ ಸಿನಿಮಾಗೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಹೀಗಾಗಿ ವಿಜಯ್, ಅನನ್ಯಾ ಸಿನಿಮಾ ತಂಡದ ಜೊತೆಗಿರುವ ಫೋಟೋಗಳು ಸದ್ಯ ಎಲ್ಲೆಡೆ ಸಖತ್ ಸದ್ದು ಮಾಡುತ್ತಿದೆ.

ವಿಜಯ್ ಹಾಗೂ ಪೂರಿ ಕಾಂಬಿನೇಷನ್‍ನಲ್ಲಿ ಮೂಡಿ ಬರಲಿರುವ ಈ ಚಿತ್ರಕ್ಕೆ ‘ಫೈಟರ್’ ಎಂದು ಹೆಸರಿಡಲಾಗಿದ್ದು, ಈ ಚಿತ್ರ ಹಿಂದಿ, ತೆಲುಗು ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ಬಿಡುಗಡೆಗೊಳ್ಳಲಿದೆ. ‘ಫೈಟರ್’ ಚಿತ್ರವನ್ನು ಬಾಲಿವುಡ್‍ನಲ್ಲಿ ಕರಣ್ ಜೋಹರ್ ನಿರ್ಮಿಸುತ್ತಿದ್ದು, ತೆಲುಗಿನಲ್ಲಿ ಪೂರಿ ಜಗನ್ನಾಥ್ ಹಾಗೂ ನಟಿ ಚಾರ್ಮಿ ಹಣ ಹೂಡಿದ್ದಾರೆ.

ಈ ಹಿಂದೆ ‘ಫೈಟರ್’ ಚಿತ್ರದಲ್ಲಿ ವಿಜಯ್‍ಗೆ ಜಾಹ್ನವಿ ಕಪೂರ್ ಜೋಡಿಯಾಗುತ್ತಾರೆ ಎಂಬ ಮಾತುಗಳು ಕೇಳಿಬಂದಿತ್ತು. ಆದರೆ ಕೊನೆಗೆ ಅನನ್ಯಾರನ್ನು ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಮಾಡಿದ್ದು, ಚಿತ್ರದಲ್ಲಿ ವಿಜಯ್‍ಗೆ ಅನನ್ಯಾ ಸಾಥ್ ಕೊಡಲಿದ್ದಾರೆ.

ಈ ಚಿತ್ರದಲ್ಲಿ ಬಾಕ್ಸ್‌ರ್‌ ಆಗಿ ವಿಜಯ್ ಅಭಿನಯಿಸಲಿದ್ದು, ಇದಕ್ಕಾಗಿ ಸದ್ಯ ನಟ ಟ್ರೈನಿಂಗ್ ತೆಗೆದುಕೊಳ್ಳುತ್ತಿದ್ದಾರೆ. ಸದ್ಯ ವಿಜಯ್ ನಟನೆಯ ‘ಡಿಯರ್ ಕಾಮ್ರೇಡ್’ ಹಾಗೂ ‘ವರ್ಲ್ಡ್ ಫೇಮಸ್ ಲವ್ವರ್’ ಸಿನಿಮಾ ಬ್ಯಾಕ್ ಟು ಬ್ಯಾಕ್ ಫ್ಲಾಪ್ ಆಗಿವೆ. ಆದರೆ ಫೈಟರ್ ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದು, ಈ ಚಿತ್ರವಾದರೂ ವಿಜಯ್‍ಗೆ ಯಶಸ್ಸು ತಂದುಕೊಡುತ್ತಾ ಎಂದು ಕಾದು ನೋಡಬೇಕಿದೆ.

Comments are closed.